ಕಾರವಾರ: ಭಾರತೀಯ ಕೋಸ್ಟ್ ಗಾರ್ಡ್ ಎರಡು ಫಾಸ್ಟ್ ಪ್ಯಾಟ್ರೊಲಿಂಗ್ ಹಡಗುಗಳನ್ನು ಕಾರವಾರ ವಿಭಾಗಕ್ಕೆ ನಿಯೋಜಿಸುವ ಮೂಲಕ ಉತ್ತರ ಕನ್ನಡದ ಕರಾವಳಿಯ ಬಲವನ್ನು ಇನ್ನಷ್ಟು ಹೆಚ್ಚಿಸಿದೆ. ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿಎಸ್) ಕಾರವಾರ ಘಟಕವು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ, ಅಂದರೆ ಉತ್ತರದ ಮಾಜಾಳಿಯಿಂದ ದಕ್ಷಿಣದ ಭಟ್ಕಳದವರೆಗೆ ತನ್ನ ವ್ಯಾಪ್ತಿ ಹೊಂದಿದೆ.
ಐಸಿಜಿಎಸ್ 4 ನವೆಂಬರ್ 2009ರಂದು ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿದಾಗಿನಿಂದ 2 ಇಂಟರ್ ಸೆಪ್ಟರ್ ಬೋಟ್‌ಗಳು ಮತ್ತು 2 ಇಂಟರ್ ಸೆಪ್ಟರ್ ಕ್ರಾಫ್ಟ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿತ್ತು. 1 ಏಪ್ರಿಲ್ 2021ರಿಂದ ಐಸಿಜಿಎಸ್ ಸಾವಿತ್ರಿಬಾಯಿ ಫುಲೆ ಮತ್ತು ಐಸಿಜಿಎಸ್ ಕಸ್ತೂರ್ಬಾ ಗಾಂಧಿ ಎಂಬ ಎರಡು ಫಾಸ್ಟ್ ಪೆಟ್ರೋಲ್ ಹಡಗುಗಳನ್ನು ಇದೀಗ ಕಾರವಾರಕ್ಕೆ ನಿಯೋಜಿಸಿದೆ.
ಈ ಎರಡೂ ಹಡಗುಗಳು ಈ ಮೊದಲು ನವ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಎರಡೂ ಹಡಗುಗಳು ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದ ಫಾಸ್ಟ್ ಪೆಟ್ರೋಲ್ ಹಡಗುಗಳಾಗಿವೆ. ಇವು ಗಂಟೆಗೆ 35 ನಾಟ್ಸ್ ವೇಗವನ್ನು ಕ್ರಮಿಸಬಲ್ಲ ಸಮರ್ಥ್ಯ ಹೊಂದಿದ್ದು, 30 ಎಂಎಂಸಿಆರ್ ಎನ್ ಗನ್ ಕೂಡ ಇದು ಹೊಂದಿದೆ.
ಇವುಗಳನ್ನು ಇತ್ತೀಚಿನ ಉಪಗ್ರಹ ಸಂವಹನ ಮತ್ತು ಸಂಚರಣೆ ವ್ಯವಸ್ಥೆಗಳೊಂದಿಗೆ ಅಳವಡಿಸಲಾಗಿದೆ. ಹಡಗುಗಳನ್ನು ಕಣ್ಗಾವಲು, ಗಸ್ತು ತಿರುಗಲು ವಿನ್ಯಾಸಗೊಳಿಸಲಾಗಿದೆ ಮತ್ತು ಆಳವಿಲ್ಲದ ನೀರಿನ ಕಾರ್ಯಾಚರಣೆಗೂ ಇವು ಸಮರ್ಥವಾಗಿದೆ. ಎರಡೂ ಎಫ್‌ಪಿವಿಗಳು ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆ, ಕಡಲ್ಗಳ್ಳತನ ವಿರೋಧಿ ಗಸ್ತು, ಮೀನುಗಾರಿಕೆ ರಕ್ಷಣೆ ಮತ್ತು ಶೋಧ ಮತ್ತು ಪಾರುಗಾಣಿಕಾ ಕಾರ್ಯಾಚರಣೆಗಳಿಗೆ ಸಹ ಸಮರ್ಥವಾಗಿವೆ.
ಎರಡೂ ಹಡಗುಗಳು ಹಲವಾರು ಎಸ್‌ಎಆರ್ ಕಾರ್ಯಾಚರಣೆಗಳು, ಕಡಲ್ಗಳ್ಳತನ ವಿರೋಧಿ ಗಸ್ತು ಮತ್ತು ಕಣ್ಗಾವಲು ಪ್ರಯತ್ನಗಳಲ್ಲಿ ಭಾಗಿಯಾಗಿವೆ. ಇದಲ್ಲದೆ, ಹಲವಾರು ಸಂದರ್ಭಗಳಲ್ಲಿ ಸಮುದ್ರದಲ್ಲಿರುವ ಮೀನುಗಾರರಿಗೆ ಇವುಗಳ ಮೂಲಕ ನೆರವು ನೀಡಲಾಗಿದೆ. ಈ ಎರಡು ಎಫ್‌ಪಿವಿಗಳು ಕೋಸ್ಟ್ ಗಾರ್ಡ್ ಸ್ಟೇಷನ್ ಕಾರವಾರದ ಸಾಮರ್ಥ್ಯಗಳಿಗೆ ಹೊಸ ಆಯಾಮವನ್ನು ಸೇರಿಸುತ್ತವೆ.