Advertisement

ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳಿಗೆ ಶೀಘ್ರ ಕಾವೇರಿ ನೀರು

12:24 PM Feb 17, 2017 | Team Udayavani |

ಕೆ.ಆರ್‌.ಪುರ: ಬೆಂಗಳೂರು ಮಹಾನಗರ ಪಾಲಿಕೆಯ ಎಂಟು ವಲಯಗಳಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ 1800 ಕೋಟಿ ವೆಚ್ಚದ ಯೋಜನೆಗೆ ಶೀಘ‌ವೇ ಚಾಲನೆ ನೀಡಲಾಗುವುದು ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ. 

Advertisement

ಹೊರಮಾವು ಜಂಕ್ಷನ್‌ ಬಳಿ ಒಂದು ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎರಡು ಕೀಮೀ ವಿಸ್ತೀರ್ಣವುಳ್ಳ ಬುಲೇವಾರ್ಡ್‌ ಉದ್ಯಾನವನವನ್ನು ಉದ್ಘಾಟಿಸಿದ ಅವರು, “ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ 110ಹಳ್ಳಿ ಗಳು ಸೇರ್ಪಡೆಗೊಂಡಿವೆ. ಈ ಹಳ್ಳಿಗಳಿಗೆ ಕಾವೇರಿ ನೀರನ್ನು ಕಲ್ಪಿಸಲು ಯೋಜನೆಯ ರೂಪುರೇಷೆಗಳು ಸಿದ್ಧಗೊಂಡಿವೆ. ಈ ಯೋಜನೆಗೆ ಅತೀ ಶೀಘ್ರದಲ್ಲಿ ಚಾಲನೆ ನೀಡಲಾಗುವುದು,” ಎಂದರು.  

“ಬೆಂಗಳೂರನ್ನು ಅಭಿವೃದ್ಧಿ ಪಡಿಸುವಲ್ಲಿ ನಿಟ್ಟಿನಲ್ಲಿ ಉತ್ತಮ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದರೂ ಒಳ್ಳೆ ಹೆಸರು ಬರುತ್ತಿಲ್ಲ. ಬಿಡಿಎ ಮೇಲೆ ಭ್ರಷ್ಟಾಚಾರ, ಹಗರಣಗಳ ಅರೋಪವನ್ನು ಹೊರಸಿ ಸದಾ ಟೀಕಿಸಲಾಗುತ್ತಿದೆ. ಬೆಂಗಳೂರು ಅಭಿವೃದ್ಧಿಗೆ ಬಿಡಿಎ ಅಪಾರ ಕೊಡುಗೆ ನೀಡುತ್ತಿದ್ದರೂ ಕೆಲವೊಂದಿಷ್ಟು ಜನ ಬಿಡಿಎಯನ್ನು ಟೀಕಿಸುತ್ತಲೇ ಇದ್ದಾರೆ. ಬಿಡಿಎಯನ್ನು ದೂಷಿಸುವುದನ್ನು ಜನ ಬಿಡಬೇಕು,” ಎಂದು ಹೇಳಿದರು.
 
“ಸಿದ್ದರಾಮಯ್ಯ ನೇತೃತ್ವದ ಸರ್ಕಾರ  ಬೆಂಗಳೂರು ಅಭಿವೃದ್ಧಿಗೆ 7,300ಕೋಟಿ ರೂ ಅನುದಾನ ನೀಡಿದೆ. ಇಷ್ಟು ದೊಡ್ಡ ಮೊತ್ತದ ಅನುದಾನ ಹಿಂದೆ ಆಡಳಿತ ನಡೆಸಿದ ಯಾವ ಸರ್ಕಾರಗಳಿಂದ ಸಿಕ್ಕಿಲ್ಲ. ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನತೆ ನೀಡಿದ ಹಲವು  ಭರವಸೆ ಈಡೇರುಸುತ್ತ ಬಂದಿದ್ದು, ಜನಪರ ಕಾಳಜಿಯುಳ್ಳ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಇನ್ನುಳಿದ ಸಮಯದಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದರು.

ಬಿಡಿಎ ದೂಷಿಸುವುದು ಬಿಡಿ: ನಂತರ ಮಾತನಾಡಿದ ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಕೆ.ವೆಂಕಟೇಶ್‌,  “ವಿಶಾಲವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ 1.30ಕೋಟಿ ಜನಸಂಖ್ಯೆ ಇದೆ.  ವಲಸೆ ಬರುವವರು ಲಕ್ಷಾಂತರ ಮಂದಿಯಿದ್ದಾರೆ. ಇದನ್ನು ಗಮನದಲ್ಲಿರಿಸಿಕೊಂಡು ಬಿಡಿಎ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಲಕ್ಷಾಂತರ ಜನಕ್ಕೆ ಉಪಯೋಗಕ್ಕೆ ಒಂದು ಅಭಿವೃದ್ದಿ ಕೈಗೊಂಡಾಗ 100ಜನಕ್ಕೆ ತೊಂದರೆಯಾಗುವುದು ಸಹಜ ಇದರಲ್ಲಿ ಎರಡು ಮಾತಿಲ್ಲ. ಅದರೆ, ಸಣ್ಣ ಸಮಸ್ಯೆಗಳನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳುವ ವಿರೋಧ ಪಕ್ಷಗಳು ದೂಷಣೆ ಮಾಡುವುದು ಸರಿಯಲ್ಲ,” ಎಂದರು. 

ಮೆಟ್ರೋ ಮೊದಲ ಹಂತ ಏಪ್ರಿಲ್‌ಗೆ ಪೂರ್ಣ 
“ನಮ್ಮ ಮೆಟ್ರೋ ಸೇವೆಯನ್ನು 2 ಲಕ್ಷ ಜನ ಬಳಸುತ್ತಿದ್ದಾರೆ. ಏಪ್ರಿಲ್‌ ತಿಂಗಳಿಗೆ ಮೊದಲನೆ ಹಂತದ ಮೆಟ್ರೋ ಕಾಮಗಾರಿ ಮುಗಿಯಲಿದ್ದು, ಪ್ರಯಾಣಿಕರ ಸಂಖ್ಯೆ 5ಲಕ್ಷಕ್ಕೆ ಏರಲಿದೆ. ಮುಂದಿನ ಹಂತದಲ್ಲಿ ಮೆಟ್ರೋ ಸೇವೆಯನ್ನು ನಾಗವಾರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ವಿಸ್ತರಿಸಲಾಗುತ್ತದೆ,”ಎಂದು ಸಚಿವ ಜಾರ್ಜ್‌ ತಿಳಿಸಿದ್ದಾರೆ. 

Advertisement

12 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ 
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಗುರುವಾರ ಚಾಲನೆ ನೀಡಿದರು. 12 ಕೋಟಿ ವೆಚ್ಚದಲ್ಲಿ ಎಚ್‌ಬಿಆರ್‌ ಲೇಔಟ್‌ನಲ್ಲಿ ಕೈಗೆತ್ತಿಕೊಂಡ ರಸ್ತೆ ಮತ್ತು ಫ‌ುಟ್‌ಪಾತ್‌ ದುರಸ್ತಿ ಸೇರಿದಂತೆ ಸಿವಿಲ್‌ ಕಾಮಗಾರಿಗಳು, 13 ಕೋಟಿ ವೆಚ್ಚದಲ್ಲಿ ನಾಗವಾರದಲ್ಲಿ ಕೈಗೆತ್ತಿಕೊಂಡ ಸಿವಿಲ್‌ ಕಾಮಗಾರಿಗಳಿಗೆ ಸಚಿವ ಜಾರ್ಜ್‌ ಅವರು ಚಾಲನೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next