ಮಂಗಳೂರು: ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಪರಿಷ್ಕರಣೆ ಬಗ್ಗೆ ಸೆಪ್ಟಂಬರ್ ಎರಡನೇ ವಾರದಲ್ಲಿ ವಿಶೇಷ ಸಭೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಖಾತೆ ಸಚಿವ ಡಾ| ಅಶ್ವತ್ಥ ನಾರಾಯಣ ಹೇಳಿದ್ದಾರೆ.
ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳಿಗೆ ವರ್ಷಕ್ಕೊಮ್ಮೆ ಶುಲ್ಕ ಪರಿಷ್ಕರಣೆ ಮಾಡಲಾಗುತ್ತದೆ. ಆದರೆ ಕಳೆದ ಮೂರು ವರ್ಷಗಳಿಂದ ಎಂಜಿನಿಯರಿಂಗ್ ಕಾಲೇಜಿನ ಶುಲ್ಕ ಪರಿಷ್ಕರಣೆ ನಡೆದಿಲ್ಲ. ಈ ಕುರಿತು ಸಭೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೂರದೃಷ್ಟಿಯಿಂದ ಮತ್ತು ವೈಜ್ಞಾನಿಕವಾಗಿ ರೂಪಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಮಾರಕವಾಗುವ ಒಂದೇ ಒಂದು ಅಂಶವೂ ಇಲ್ಲ. ಕೇವಲ ರಾಜಕೀಯ ಕಾರಣಕ್ಕಾಗಿ ನೂತನ ನೀತಿಯನ್ನು ವಿರೋಧಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುನ್ನ ಐದೂವರೆ ವರ್ಷಗಳ ಕಾಲ ಸಮಾಲೋಚನೆ ನಡೆಸಲಾಗಿತ್ತು. ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ನಾಗರಿಕರಿಂದ ಸಲಹೆ ಪಡೆಯಲಾಗಿತ್ತು. ಏಕಾಏಕಿ ಜಾರಿಗೆ ತಂದಿರುವುದಲ್ಲ. ಕೇಸರೀಕರಣ ಮಾಡಲಾಗುತ್ತಿದೆ, ಕೇಂದ್ರ ಸರಕಾರ ಹೇರಿಕೆ ಮಾಡುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ನೂತನ ಶಿಕ್ಷಣ ನೀತಿಯನ್ವಯ ಎಲ್ಲ ವಿ.ವಿ.ಗಳೂ ತಮಗೆ ಬೇಕಾದ ರೀತಿಯ ಶಿಕ್ಷಣ ಅಳವಡಿಸಿಕೊಳ್ಳಲು ಸ್ವಾತಂತ್ರ್ಯ ನೀಡಲಾಗಿದೆ ಎಂದರು.
ಸೆ. 20ರಂದು ಸಿಇಟಿ ಫಲಿತಾಂಶ:
ಸಿಇಟಿ ಫಲಿತಾಂಶ ಸೆ. 20ಕ್ಕೆ ಪ್ರಕಟಗೊಳ್ಳಲಿದೆ. ಆ ಬಳಿಕ ಆನ್‌ಲೈನ್ ಮೂಲಕ ಕೌನ್ಸೆಲಿಂಗ್ ನಡೆಯಲಿದ್ದು ಕೊನೆಯ ಮಾಪ್ ಅಪ್ ಕೌನ್ಸೆಲಿಂಗ್ ಮಾತ್ರ ಭೌತಿಕವಾಗಿ ನಡೆಯಲಿದೆ ಎಂದು ಸಚಿವರು ಹೇಳಿದರು. ಪದವಿ ತರಗತಿಗಳು ಪ್ರಾರಂಭಗೊಂಡಿವೆ. ಕೆಲವು ಜಿಲ್ಲೆಗಳಲ್ಲಿ ಇನ್ನಷ್ಟೇ ಪ್ರಾರಂಭಗೊಳ್ಳಲಿದೆ ಎಂದರು.
ಪ್ರೊ| ಪಿ. ಎಸ್. ಯಡಪಡಿತ್ತಾಯ, ಪ್ರೊ| ಕಿಶೋರ್ ಕುಮಾರ್ ಸಿ.ಕೆ. ಪ್ರೊ| ಪಿ.ಎಲ್. ಧರ್ಮ, ಸಂತೋಷ್ ಕುಮಾರ್ ರೈ ಬೋಳಿಯಾರ್ ಉಪಸ್ಥಿತರಿದ್ದರು.
ಭಾಷಾ ಕಲಿಕೆ:
ಮುಕ್ತ ಆಯ್ಕೆ ಅವಕಾಶ : ಹಿಂದಿ, ಸಂಸ್ಕೃತ ಸೇರಿದಂತೆ ಇತರ ಭಾಷಾ ಕಲಿಕೆಗೆ ನೂತನ ಶಿಕ್ಷಣ ನೀತಿಯಿಂದ ಅವಕಾಶ ಇಲ್ಲ ಎಂಬ ಆರೋಪದ ಬಗ್ಗೆ ಉತ್ತರಿಸಿದ ಸಚಿವರು, ಭಾಷೆಗೆ ಸಂಬಂಧಿಸಿ ಮುಕ್ತ ಆಯ್ಕೆಯ ಅವಕಾಶ ನೀಡಲಾಗಿದೆ. ಕನ್ನಡ ಕಡ್ಡಾಯವಿದ್ದರೂ ಇತರ ಭಾಷೆಯ ಆಯ್ಕೆಗೆ ವಿದ್ಯಾರ್ಥಿಗೆ ಅವಕಾಶ ನೀಡಲಾಗಿದೆ. ತ್ರಿಭಾಷಾ ಸೂತ್ರದಂತೆ ಮುಕ್ತತೆ ಇರಲಿದೆ. ಹೀಗಾಗಿ ಇಲ್ಲಿ ಯಾವುದೇ ಭಾಷಾ ವಿಭಾಗವನ್ನು ಮುಚ್ಚುವ ಪ್ರಮೇಯ ಬರುವುದಿಲ್ಲ ಎಂದರು.