Advertisement

ಅದಾಲತ್‌ನಲ್ಲಿ ತ್ವರಿತ ನ್ಯಾಯ

10:07 PM Sep 14, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನಡೆಸುವ ರಾಷ್ಟ್ರೀಯ ಲೋಕ ಅದಾಲತ್‌ಗೆ ಆಗಮಿಸಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಮುಕ್ತ ಅವಕಾಶ ಇದ್ದು, ಇದರಿಂದ ಕಕ್ಷಿದಾರರಿಗೆ ತ್ವರಿತಗತಿಯಲ್ಲಿ ನ್ಯಾಯ ಸಿಗುವುದರ ಜೊತೆಗೆ ಸಮಯ ಹಾಗೂ ಹಣ ಉಳಿತಾಯವಾಗುತ್ತದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್‌.ಎಚ್‌.ಕೋರಡ್ಡಿ ತಿಳಿಸಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ಜಿಲ್ಲಾ ಕಾನೂನು ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 3ನೇ ರಾಷ್ಟ್ರೀಯ ಲೋಕ ಅದಾಲತ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಕ್ಷಿದಾರರು ಲೋಕ ಅದಾಲತ್‌ನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಸಮಯ, ಹಣ ವ್ಯರ್ಥ: ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೆ ನಾಗರಿಕರು ನ್ಯಾಯಕ್ಕಾಗಿ ನ್ಯಾಯಾಲಯಗಳ ಮೆಟ್ಟಿಲೇರುತ್ತಿದ್ದಾರೆ. ಇದರಿಂದ ನ್ಯಾಯಾಲಯ ಮೇಲೆ ಸಾಕಷ್ಟು ಒತ್ತಡ ಇದೆ. ಜೊತೆಗೆ ನಾಗರಿಕರಿಗೂ ಸಮಯ, ಹಣ ವ್ಯರ್ಥವಾಗುತ್ತಿದೆ. ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ ವಿಚಾರಣೆ ನಡೆಸಿ ತೀರ್ಪು ಕೊಡುವುದು ವಿಳಂಬ ಆಗುತ್ತಿದೆ. ಆದ್ದರಿಂದ ಇಬ್ಬರು ಕಕ್ಷಿದಾರರಿಗೆ ತ್ವರಿತವಾಗಿ ಸರ್ವ ಸಮ್ಮತವಾದ ನ್ಯಾಯದಾನ ಮಾಡಲು ರಾಷ್ಟ್ರೀಯ ಲೋಕ ಅದಾಲತ್‌ ಮುಖ್ಯ ಉದ್ದೇಶ. ತಮ್ಮ ವಕೀಲರ ಮೂಲಕ ಕಕ್ಷಿದಾರರು ರಾಜೀ ಸಂಧಾನ ಮಾಡಿಕೊಂಡು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.

ನೆಮ್ಮದಿಯ ಜೀವನ: ಕಾನೂನು ಸೇವೆಗಳ ಹೋರಾಟದಲ್ಲಿ ಬೇಸತ್ತು ಹೋಗಿರುವ ಜನರು ರಾಷ್ಟ್ರೀಯ ಲೋಕ್‌ ಅದಾಲತ್‌ ಮುಖಾಂತರ ಪ್ರಕರಣಗಳನ್ನು ಶೀಘ್ರವಾಗಿ ಪರಿಹರಿಸಿಕೊಂಡು ಮಾನಸಿಕವಾಗಿ, ಆರ್ಥಿಕವಾಗಿ ಆರೋಗ್ಯಕರ ಜೀವನ ನಡೆಸಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು ಆಗಿರುತ್ತಾನೆ. ಆ ಪ್ರಭು ಸೇವೆ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದರು. ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಅಲೆದಾಡುತ್ತಿರುವ ಪ್ರಜೆಗಳನ್ನು ತ್ವರಿತವಾಗಿ ಮುಕ್ತಗೊಳಿಸಿ ನೆಮ್ಮದಿಯ ಜೀವನ ಮಾಡಲು ಅನುವು ಮಾಡಿಕೊಡುವುದು ನ್ಯಾಯಾಲಯಗಳ ಆಶಯವಾಗಿದೆ ಎಂದರು.

ವಿವಿಧ ಪ್ರಕರಣ ಇತ್ಯರ್ಥ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ವ್ಯಾಜ್ಯ ಪೂರ್ವ ಪ್ರಕರಣಗಳಾದ ಬ್ಯಾಂಕ್‌ ವಸೂಲಾತಿ, ಉದ್ಯೋಗದಲ್ಲಿ ಪುನರ್‌ ಸ್ಥಾಪಿಸಲ್ಟಡುವ, ಕಾರ್ಮಿಕ ವಿಚಾರಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್‌ ಹಾಗೂ ನೀರಿನ ಶುಲ್ಕಗಳು, ಕುಟುಂಬ, ನ್ಯಾಯಾಲಯ ಹಾಗೂ ಇತರೆ ಸಿವಿಲ್‌ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.

Advertisement

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌.ದೇವರಾಜು, ವಕೀಲರ ಸಂಘದ ಅಧ್ಯಕ್ಷ ಕೆ.ಹೆಚ್‌. ತಮ್ಮೇಗೌಡ, 1ನೇ ಅಪರ ಜಿಲ್ಲಾ ನ್ಯಾಯಾಧೀಶ ಎಸ್‌.ನಟರಾಜ್‌, 3ನೇ ಅಪರ ಜಿಲ್ಲಾ ನ್ಯಾಯಾಧೀಶೆ ಬಿ.ಎಸ್‌.ಭಾನುಮತಿ, ನ್ಯಾಯಾಧೀಶರಾದ ಲೋಕೇಶ್‌, ಅರುಟಗಿ, ಶ್ರೀನಿವಾಸ್‌ ಬೂದಾಳ್‌, ಹಿರಿಯ ಸಿವಿಲ್‌ ದರ್ಜೆಯ ಸಿ.ಜೆ.ಎಂ ಕೆ.ಎನ್‌.ರೂಪಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿನೋದ್‌ಕುಮಾರ್‌ ಸೇರಿದಂತೆ ವಕೀಲರು, ಅಧಿಕಾರಿಗಳು, ಕಕ್ಷಿದಾರರು ಉಪಸ್ಥಿತರಿದ್ದರು.

ಜನರು ಬಿಡುವಿಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಾಜ್ಯಗಳನ್ನು ತ್ವರಿತವಾಗಿ ನಿವಾರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಅವರಿಗೆ ಮಾನಸಿಕ, ಆರ್ಥಿಕ ಹಿನ್ನಡೆಯಾಗುತ್ತದೆ. ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ರಾಷ್ಟ್ರೀಯ ಲೋಕ ಅದಾಲತ್‌ ನಡೆಸುತ್ತದೆ. ಸಾರ್ವಜನಿಕರು ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಲು ಸುವರ್ಣ ಅವಕಾಶ.
-ಎಸ್‌.ಎಚ್‌.ಕೋರಡ್ಡಿ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು

Advertisement

Udayavani is now on Telegram. Click here to join our channel and stay updated with the latest news.

Next