Advertisement

ತ್ವರಿತ ನೀರಾವರಿ ಯೋಜನೆ ಅನುದಾನಕ್ಕೆ ಕತ್ತರಿ

09:46 AM Jul 21, 2017 | |

ಬೆಂಗಳೂರು: ರಾಜ್ಯಗಳಲ್ಲಿ ಅನುಷ್ಠಾನ ಹಂತದಲ್ಲಿರುವ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ರೂಪಿಸಿರುವ ತ್ವರಿತ ನೀರಾವರಿ ಪ್ರೋತ್ಸಾಹಕ ಯೋಜನೆ (ಎಐಬಿಪಿ- ಆ್ಯಕ್ಸಿಲರೇಟೆಡ್‌ ಇರಿಗೇಷನ್‌ ಬೆನಿಫಿಟ್‌ ಪ್ರೋಗ್ರಾಂ)
ಇದೀಗ ರಾಜ್ಯದ ನೀರಾವರಿ ಯೋಜನೆಗಳ ಪಾಲಿಗೆ ಮರೀಚಿಕೆಯಾಗಿ ಉಳಿದಿದೆ.

Advertisement

ಇದಕ್ಕೆ ಕಾರಣ ಕಳೆದ ಮೂರು ವರ್ಷಗಳಿಂದ ಎಐಬಿಪಿ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಬೇಕಿದ್ದ ಅನುದಾನವನ್ನು ತಡೆ ಹಿಡಿದಿರುವುದು. 2014-15ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಈ ಯೋಜನೆಯಡಿ ರಾಜ್ಯಕ್ಕೆ 2273.95 ಕೋಟಿ ರೂ. ಅನುದಾನ ಬರಬೇಕಾಗಿತ್ತಾದರೂ ಕೇಂದ್ರ ಬಿಡುಗಡೆ ಮಾಡಿರುವುದು 494.45 ಕೋಟಿ ರೂ.ಮಾತ್ರ.
ಯೋಜನಾ ವೆಚ್ಚದ ಶೇ.90ರಷ್ಟು ಕೇಂದ್ರ ಸರ್ಕಾರ ಮತ್ತು ಶೇ.10ರಷ್ಟನ್ನು ರಾಜ್ಯ ಸರ್ಕಾರ ಭರಿಸುವ ಎಐಬಿಪಿ ಯೋಜನೆ 1996-97ನೇ ಸಾಲಿನಲ್ಲಿ ಆರಂಭವಾಗಿತ್ತು. 2013-14ನೇ ಸಾಲಿನವರೆಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಲಭ್ಯವಾಗುತ್ತಿತ್ತಾದರೂ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದ ಮೇಲೆ ಅನುದಾನದ ಕೊರತೆ ಉಂಟಾಯಿತು. ಅಷ್ಟೇ ಅಲ್ಲ, ಅನುದಾನ ಹಂಚಿಕೆ ಪ್ರಮಾಣ 90:10ರಷ್ಟಿದ್ದುದು 2014-15ನೇ ಸಾಲಿನಿಂದ 60:40 ಆಯಿತು. ವರ್ಷ ಕಳೆದಂತೆ ಅನುದಾನ ಹೆಚ್ಚಳವಾಗುವ ಬದಲು ಇಳಿಕೆಯಾಯಿತು. ಇದರ ಪರಿಣಾಮ ರಾಜ್ಯ ಸರ್ಕಾರವೇ ಹೆಚ್ಚುವರಿ ಅನುದಾನ ಬಳಸಿ ಯೋಜನೆ ಮುಂದುವರಿಸುವ ಕೆಲಸ ಮಾಡುವಂತಾಯಿತು. ಇದರಿಂದ ಇತರ ಯೋಜನೆಗಳ ಅನುದಾನಕ್ಕೆ ಕತ್ತರಿ ಹಾಕಬೇಕಾಯಿತು.

ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ, 1996-97ನೇ ಸಾಲಿನಲ್ಲಿ ಎಐಬಿಪಿ ಆರಂಭವಾದ ಮೇಲೆ ರಾಜ್ಯಕ್ಕೆ ಇದುವರೆಗೆ ಒಟ್ಟು 8782.94 ಕೋಟಿ ರೂ.ನೆರವು ಮಂಜೂರಾಗಿದ್ದು, ಆ ಪೈಕಿ, 6387.95 ಕೋಟಿ ರೂ.ಬಿಡುಗಡೆಯಾಗಿದೆ. 1996-97ನೇ ಸಾಲಿನಿಂದ 2013-14ನೇ ಸಾಲಿನವರೆಗೆ 6508.99 ಕೋಟಿ ರೂ. ಮಂಜೂರಾಗಿದ್ದು, ಆ ಪೈಕಿ 5893.50 ಕೋಟಿ ರೂ.
(ಶೇ.90ರಷ್ಟು) ಬಿಡುಗಡೆಯಾಗಿದೆ. ಆದರೆ, 2014-15ನೇ ಸಾಲಿನಿಂದ 2016-17ನೇ ಸಾಲಿನವರೆಗೆ 2273.95 ಕೋಟಿ 
ರೂ.ಮಂಜೂರಾಗಿದ್ದರೂ, ಬಿಡುಗಡೆಯಾಗಿರುವುದು 494.45 ಕೋಟಿ ರೂ.ಮಾತ್ರ. 

ರಾಜ್ಯಕ್ಕೆ ಹೊರೆಯಾಯಿತು: ಕೇಂದ್ರ ಸಹಭಾಗಿತ್ವದ ಎಐಬಿಪಿ ಯೋಜನೆಯಡಿ ರಾಜ್ಯ ಸರ್ಕಾರ ಮೂರು ವರ್ಷಗಳಲ್ಲಿ (2014-15ರಿಂದ 2016-17) 4145.91 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರಂತೆ ಕಾಮಗಾರಿಗಳನ್ನೂ ನಡೆಸಿದೆ. ಈ ಯೋಜನೆಗಳಿಗೆ ಕೇಂದ್ರದಿಂದ 2273.95 ಕೋಟಿ ರೂ. ಅನುದಾನ ನಿರೀಕ್ಷಿಸಿತ್ತಾದರೂ 494.45 ಕೋಟಿ ರೂ.
ಬಂದಿದ್ದರಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ 1779.5 ಕೋಟಿ ರೂ.ಹೊರೆ ಬಿದ್ದಂತಾಗಿದೆ.

2016-17ನೇ ಸಾಲಿನಲ್ಲಿ ತುಂಗಾ ಮೇಲ್ದಂಡೆ ಯೋಜನೆ, ನಾರಾಯಣಪುರ ಎಡದಂಡೆ ಕಾಲುವೆ ಆಧುನೀಕರಣ, ಭೀಮಾ ಏತ ನೀರಾವರಿ ಯೋಜನೆ ಮತ್ತು ಕಾರಂಜಾ ಯೋಜನೆಗಳಿಗೆ ಎಐಬಿಪಿ ಅಡಿ 856.39 ಕೋಟಿ ರೂ.ನೆರವು ಕೋರಲಾಗಿತ್ತು. ಈ ಅನುದಾನ ನಂಬಿ 715.55 ಕೋಟಿ ರೂ.ವೆಚ್ಚ ಮಾಡಲಾಗಿತ್ತು. ಆದರೆ, ಕೇಂದ್ರದಿಂದ 135.47 ಕೋಟಿ ರೂ. ಮಾತ್ರ ಬಂದಿದೆ. ಅದೇ ರೀತಿ 2014-15ರಲ್ಲಿ 565.47 ಕೋಟಿ ರೂ.ನಿರೀಕ್ಷಿಸಿದ್ದರೆ, 150.82 ಕೋಟಿ ರೂ.ಹಾಗೂ 2015-16ರಲ್ಲಿ 851.49
ಕೋಟಿ ರೂ.ನಿರೀಕ್ಷಿಸಿದ್ದರೆ 208.16 ಕೋಟಿ ರೂ.ಮಾತ್ರ ಕೇಂದ್ರದಿಂದ ಬಂದಿದೆ. 

Advertisement

ಪ್ರಸ್ತಾವನೆಯೇ ಸಿದ್ಧವಾಗಿಲ್ಲ: ಎಐಬಿಪಿ ಅಡಿ ಪ್ರತಿ ವರ್ಷ ಕೈಗೊಳ್ಳುವ ಕಾಮಗಾರಿಗಳನ್ನು ಗುರುತಿಸಿ ಅದಕ್ಕೆ ಮಾಡುವ ವೆಚ್ಚ ಸೇರಿ ಯೋಜನೆಗಳ ಸಮಗ್ರ ಮಾಹಿತಿಯೊಂದಿಗೆ ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕಾಗುತ್ತದೆ. ಪ್ರತಿ ವರ್ಷ ನಿರ್ದಿಷ್ಟ ಯೋಜನೆಗಳನ್ನು ಎಐಬಿಪಿಯಡಿ ಕೈಗೊಳ್ಳಲಾಗುತ್ತದೆ. ಕಳೆದ ಮೂರು ವರ್ಷಗಳಿಂದ ಈ ರೀತಿ ಪ್ರಸ್ತಾವನೆ ಕಳುಹಿಸಿದರೂ ಕೇಂದ್ರದಿಂದ ನಿರೀಕ್ಷೆಯ ಅರ್ಧದಷ್ಟು ಹಣವೂ ಬಾರದ ಕಾರಣ 2017-18ನೇ ಸಾಲಿನ ಪ್ರಸ್ತಾವನೆ ಇನ್ನೂ ಸಿದ್ಧವಾಗಿಲ್ಲ ಎಂದು ಹೇಳಲಾಗಿದೆ. ಆದರೂ, ಕೇಂದ್ರದಿಂದ ಸುಮಾರು 750ರಿಂದ ಒಂದು ಸಾವಿರ ಕೋಟಿ ರೂ.ನಷ್ಟು ನೆರವು ಕೋರಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಜಲ ಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.

ಎಐಬಿಪಿಯಡಿ ಕೈಗೊಂಡ ಯೋಜನೆಗಳು: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1 ಮತ್ತು 2, ಮಲಪ್ರಭಾ, ಹಿರೇಹಳ್ಳ, ಘಟಪ್ರಭಾ, ಕಾರಂಜಾ, ಮಸ್ಕಿನಾಲಾ, ಭೀಮಾ ಏತ ನೀರಾವರಿ, ವಾರಾಹಿ, ಗುಡ್ಡದ ಮಲ್ಲಾಪುರ ಏತ ನೀರಾವರಿ, ಗಂಡೋರಿನಾಲಾ, ರಾಮೇಶ್ವರ ಏತ ನೀರಾವರಿ, ತುಂಗಾ ಮೇಲ್ದಂಡೆ, ನಾರಾಯಣಪುರ ಎಡದಂಡೆ ಕಾಲುವೆ ಆಧುನೀಕರಣ ಯೋಜನೆಗಳು. ಎಐಬಿಪಿ ರೂಪಿತವಾಗಿದ್ದೇ ಕರ್ನಾಟಕಕ್ಕಾಗಿ ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ರಾಜ್ಯದ ನೀರಾವರಿ ಯೋಜನೆಗಳನ್ನೇ 
ಗಮನದಲ್ಲಿಟ್ಟುಕೊಂಡು ಎಐಬಿಪಿ ರೂಪಿಸಿದ್ದರು ಎಂಬುದು ವಿಶೇಷ. ರಾಜ್ಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ಅನುದಾನದ ಕೊರತೆಯಿಂದ ಸಾಕಷ್ಟು ವಿಳಂಬವಾಗಿದ್ದವು. ಇದರಿಂದ ಯೋಜನಾ ಗಾತ್ರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿ ರಾಜ್ಯದ ಬೊಕ್ಕಸದ ಮೇಲೆ ಭಾರಿ ಹೊರೆ ಬೀಳುತ್ತಿತ್ತು. ಅಲ್ಲದೆ, ಕೇವಲ ರಾಜ್ಯ ಸರ್ಕಾರದ ಹಣದಿಂದ ಯೋಜನೆ ಪೂರ್ಣಗೊಳಿಸುವುದು
ಕಷ್ಟವಾಗಿತ್ತು. ಮುಖ್ಯಮಂತ್ರಿಗಳಾಗಿದ್ದಾಗ ಆದ ಈ ಅನುಭವವನ್ನು ಗಮನದಲ್ಲಿಟ್ಟುಕೊಂಡ ಅವರು ತಾವು ಪ್ರಧಾನಿಯಾಗಿದ್ದಾಗ 1996-97ನೇ ಸಾಲಿನಲ್ಲಿ ಎಐಬಿಪಿ ರೂಪಿಸಿದ್ದರು. ಆರಂಭದಲ್ಲಿ ಕೇಂದ್ರದಿಂದ ಮಂಜೂರಾದ ಹಣ ಪೂರ್ಣ ಪ್ರಮಾಣದಲ್ಲಿ ಬಾರದೇ ಇದ್ದರೂ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದ ಮೇಲೆ ಐದು ವರ್ಷ ನಿಗದಿತ ಮೊತ್ತದಲ್ಲಿ ಬಹುತೇಕ ಹಣ ಬಿಡುಗಡೆಯಾಗಿತ್ತು. ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದ ಎಂಟು ವರ್ಷವೂ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. 

ಪ್ರದೀಪ ಕುಮಾರ್‌ ಎಂ

Advertisement

Udayavani is now on Telegram. Click here to join our channel and stay updated with the latest news.

Next