ಹೊಸದಿಲ್ಲಿ: ಐಎನ್‌ಎಕ್ಸ್ ಲಂಚ ಪ್ರಕರಣ ಸಂಬಂಧ ಸಿಬಿಐ ಶೀಘ್ರವೇ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಅವರು ಹಣಕಾಸು ಸಚಿವರಾಗಿದ್ದ ವೇಳೆಯೇ ಮಾಧ್ಯಮ ಸಂಸ್ಥೆಗೆ ನಿಯಮ ಮೀರಿ ವಿದೇಶಿ ಹೂಡಿಕೆಗೆ ಅನುಮತಿ ನೀಡಲಾಗಿತ್ತು ಎನ್ನುವುದು ಪ್ರಮುಖ ಆರೋಪ.
ಈ ನಡುವೆ ಪ್ರಕರಣದಲ್ಲಿ ಬಂಧಿತರಾಗಿರುವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಇನ್ನೂ ಮೂರು ದಿನಗಳ ಕಾಲ ದಿಲ್ಲಿಯ ವಿಶೇಷ ಕೋರ್ಟ್ ಸಿಬಿಐ ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ.
ಐದು ದಿನಗಳ ಕಸ್ಟಡಿ ಮುಕ್ತಾಯವಾಗಿದ್ದರಿಂದ ಅವರನ್ನು ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಕಾರ್ತಿ ಅವರ ಕಸ್ಟಡಿಯನ್ನು ಮುಂದುವರಿಸಬೇಕು ಎಂದು ಸಿಬಿಐ ಮನವಿ ಮಾಡಿಕೊಂಡಿದ್ದರಿಂದ ನ್ಯಾಯಾಧೀಶರು, ಕಾರ್ತಿಯನ್ನು ಇನ್ನೂ 3 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿ ಆದೇಶ ನೀಡಿದರು. ತನಿಖೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಆದರೆ ಅವರು ತಮ್ಮ ಮೊಬೈಲ್ ಫೋನ್‌ಗಳ ಪಾಸ್‌ವರ್ಡ್ ನೀಡಲು ಒಪ್ಪುತ್ತಿಲ್ಲ. ಜತೆಗೆ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಕೋರ್ಟ್‌ಗೆ ಸಿಬಿಐ ಪರ ವಕೀಲರು ಅರಿಕೆ ಮಾಡಿಕೊಂಡರು. ಪ್ರತಿಯೊಂದು ಪ್ರಶ್ನೆಗೂ ಕಾರ್ತಿ “ನನ್ನನ್ನು ರಾಜಕೀಯವಾಗಿ ಗುರಿ ಮಾಡಲಾಗಿದೆ’ ಎಂದು ಹೇಳುತ್ತಿದ್ದಾರೆ ಎಂದೂ ಮಾಹಿತಿ ನೀಡಿದರು.
ಕಾರ್ತಿ ಅರ್ಜಿ ತಿರಸ್ಕೃತ: ಕಾರ್ತಿಗೆ ಸುಪ್ರೀಂ ಕೋರ್ಟ್‌ನಲ್ಲಿಯೂ ಹಿನ್ನಡೆಯಾಗಿದೆ. ಜಾರಿ ನಿರ್ದೇಶನಾಲಯದ ಪ್ರಕರಣದಿಂದ ವಿನಾಯಿತಿ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠ ತಿರಸ್ಕರಿಸಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಕಾರ್ತಿ ವಿರುದ್ಧದ ತನಿಖೆಯ ವಿವರಗಳನ್ನು ನೀಡುವಂತೆ ಆದೇಶಿಸಿದೆ. ಮಾ.8ರಂದು ಮುಂದಿನ ವಿಚಾರಣೆ ನಡೆಯಲಿದೆ.
ಕೋರ್ಟ್‌ನಲ್ಲಿದ್ದರು ನಳಿನಿ-ಚಿದಂಬರಂ: ಹೊಸದಿಲ್ಲಿಯ ಪಾಟಿಯಾಲ ಹೌಸ್ ಕೋರ್ಟ್ ಆವರಣದಲ್ಲಿರುವ ಸಿಬಿಐನ ವಿಶೇಷ ಕೋರ್ಟ್‌ನಲ್ಲಿ ಮಾಜಿ ಸಚಿವ ಚಿದಂಬರಂ ಮತ್ತು ಪತ್ನಿ ನಳಿನಿ ಚಿದಂಬರಂ ಉಪಸ್ಥಿತರಿದ್ದರು. ಮೌನವಾಗಿದ್ದುಕೊಂಡು ವಿಚಾರಣೆಯ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಕಾರ್ತಿಯಿಂದ ಯುಪಿಎ ಸಚಿವರೊಬ್ಬರಿಗೆ ಲಂಚ?
ಈ ಎಲ್ಲ ಸಂಕಷ್ಟಗಳ ನಡುವೆ ಕಾರ್ತಿ 2006ರಿಂದ 2009ರ ನಡುವೆ ಯುಪಿಎಯ ಪ್ರಮುಖ ಸಚಿವರೊಬ್ಬರಿಗೆ ಕೋಟಿಗಟ್ಟಲೆ ಲಂಚ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ “ರಿಪಬ್ಲಿಕ್ ಟೀವಿ’ ವರದಿ ಮಾಡಿದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ತನ್ನಲ್ಲಿ ಇವೆ ಎಂದೂ ಅದು ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಜಾರಿ ನಿರ್ದೇಶನಾಲಯ ಈ ಅಂಶದ ಬಗ್ಗೆಯೂ ಪರಿಶೀಲನೆ ನಡೆಸಲಿದೆ ಎನ್ನಲಾಗಿದೆ. ಕಾರ್ತಿ ತಮ್ಮ ಖಾತೆಯಿಂದ ಸಚಿವರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಚೆನ್ನೈನಲ್ಲಿರುವ ಯು.ಕೆ.ಮೂಲದ ಬ್ಯಾಂಕ್ ಶಾಖೆಯಿಂದ ಹಣ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಜತೆಗೆ ಹಿರಿಯ ಪತ್ರಕರ್ತರೊಬ್ಬರು ಈ ಸಂಬಂಧ ಡೀಲ್ ಕುದುರಿಸಿದ್ದರು ಎಂದೂ ವರದಿ ಹೇಳಿದೆ.