Advertisement

ವಸತಿ ರಹಿತ ಅಂಗವಿಕಲರಿಗೆ ಶೀಘ್ರ ಮನ

11:42 AM Dec 04, 2018 | |

ಬೀದರ: ಜಿಲ್ಲೆಯಲ್ಲಿನ ವಸತಿ ರಹಿತ ಅಂಗವಿಕಲರಿಗೆ ಶೀಘ್ರದಲ್ಲಿ ಮನೆಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಭರವಸೆ ನೀಡಿದರು. ನಗರದ ಜಿಲ್ಲಾ ರಂಗಮಂದಿರದಲ್ಲಿ ಸೋಮವಾರ ನಡೆದ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಅಂಗವಿಕಲರ ಏಳ್ಗೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಈ ಎಲ್ಲ ಯೋಜನೆಗಳನ್ನು ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲಾಗುವುದು. ಎಲ್ಲ ಇಲಾಖೆಗಳಲ್ಲಿ ಅಂಗವಿಕಲರಿಗಾಗಿ ಶೇ.3ರಷ್ಟು ಅನುದಾನ ಮೀಸಲಿಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಯೋಜನೆಯ ಅನುಷ್ಠಾನದ ಕುರಿತು ಪರಿಶೀಲಿಸಿ, ಈ ತಿಂಗಳಲ್ಲಿ ಜಾರಿಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದ. ಹಲವು ಅಂಗವಿಕಲರು ವಸತಿ ಸೌಲಭ್ಯ ಕೋರಿ ಮನವಿ ಸಲ್ಲಿಸಿದ್ದಾರೆ. ಸರ್ಕಾರ ಪಟ್ಟಣ ಪ್ರದೇಶಗಳಲ್ಲಿ 6,600 ಮನೆಗಳನ್ನು ನೀಡಿದೆ ಎಂದರು.

ಗ್ರಾಮೀಣ ಭಾಗದಲ್ಲಿಯೂ ವಸತಿ ರಹಿತ ಅಂಗವಿಕಲರಿಗೆ ಮನೆಗಳನ್ನು ಕಲ್ಪಿಸಲಾಗುವುದು. ಅಂಗವಿಕಲರ ಶಾಲೆಗಳಿಗೆ ಸರ್ಕಾರದಿಂದ ಸೌಲಭ್ಯಗಳು ಸಿಗುತ್ತಿಲ್ಲ ಎನ್ನುವ ದೂರುಗಳಿವೆ. ಈ ಬಗ್ಗೆ ವರದಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ 44,000 ವಿಶೇಷ ಚೇತನರಿದ್ದಾರೆ. ಇವರ ಏಳ್ಗೆಗೆ ಸರ್ಕಾರ ನಾನಾ ಸೌಲಭ್ಯಗಳನ್ನು ನೀಡುತ್ತಿದೆ. ಈ ಯೋಜನೆಗಳು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಹಲವು ಅಂಗವಿಕಲರು ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ಅಂತಹ ಮಹನೀಯರು ಎಲ್ಲರಿಗೂ ಮಾದರಿಯಾಗಬೇಕು. ಅಂಗವಿಕಲರು ತಮ್ಮಲ್ಲಿನ ಅಂಗವೈಕಲ್ಯದಿಂದಾಗಿ ಕೀಳರಿಮೆಗೆ ಒಳಗಾಗದೇ ಸ್ವಾಭಿಮಾನದಿಂದ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
 
ವಿಕಲಚೇತನರ ಅಧಿನಿಯಮದ ಮಾಜಿ ಆಯುಕ್ತ ದಾಸ್‌ ಸೂರ್ಯವಂಶಿ ಉಪನ್ಯಾಸ ನೀಡಿ, ಅಂಗವಿಕಲರ ಸಮಸ್ಯೆಗಳನ್ನು ತಿಳಿದುಕೊಳ್ಳುವುದು, ಸರ್ಕಾರದಿಂದ ಇರುವ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಂಗವಿಕಲರ ದಿನ ಆಚರಿಸಲಾಗುತ್ತದೆ. ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.

Advertisement

ಎಂಆರ್‌ಡಬ್ಯೂ ಶಿವಕುಮಾರ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಡಿಡಿಆರ್‌ಸಿ ಸದಸ್ಯ ಮೊಗಲಪ್ಪ ಮಾಳಗೆ ಮಾತಾಡಿದರು. ಸ್ವತ್ಛ ಭಾರತ ಮಿಷನ್‌ ನೋಡಲ್‌ ಅಧಿಕಾರಿ ಡಾ| ಗೌತಮ ಅರಳಿ, ನವಜೀವನ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಅನೀಲ ಬೆಲ್ದಾರ, ಅಮೂಲ್ಯ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ರಾಜು ಕಡ್ಯಾಳ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಪ್ರಭುಲಿಂಗ ಸ್ವಾಮಿ, ಅಂಗವಿಕಲರ ಸಂಘಟನೆಗಳ ಮುಖಂಡ ಸಂತೋಷ ಭಾಲ್ಕೆ, ಪ್ರಭು ಪಾಂಚಾಳ, ಸಂಜು ಕೇರಿ, ಮಂಗಲಾ ಮರಖಲೆ, ಸಂತೋಷ ಢಣಕೆ, ಶಿವರಾಜ ಕಪಲಾಪುರ, ಬಂಡೆಪ್ಪ ಕಾಡವಾದ, ಗೌರಿಶಂಕರ ಪರತಾಪೂರೆ ಸೇರಿದಂತೆ ಅನೇಕರು ಇದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು, ಜಿಲ್ಲಾ ವಿಕಲಚೇತನರ ಸರ್ಕಾರಿ ನೌಕರರ ಸಂಘ, ಜಿಲ್ಲೆಯ ಎಲ್ಲ ತಾಲೂಕಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next