Advertisement

ಬೆಳೆ ವಿಮೆ ಸಮಸ್ಯೆ ಶೀಘ್ರ ನಿವಾರಣೆ

05:34 PM Apr 28, 2022 | Team Udayavani |

ಚಳ್ಳಕೆರೆ: ಬೆಳೆ ವಿಮೆ, ಬೆಳೆ ನಷ್ಟ ಪರಿಹಾರಕ್ಕೆ ಸಬಂಧಿಸಿದಂತೆ ಕೆಲವು ಸಮಸ್ಯೆಗಳಿದ್ದು, ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಹೇಳಿದರು.

Advertisement

ತಾಲೂಕಿನ ನನ್ನಿವಾಳ ಗ್ರಾಮದ ಉಡೇದಾರ ಬೋರಯ್ಯ ಎಂಬ ರೈತನ ಜಮೀನಿನಲ್ಲಿ ತಾಲೂಕು ಆಡಳಿತ ಮತ್ತು ರೈತ ಸಂಘಟನೆಗಳು ಬುಧವಾರ ಹಮ್ಮಿಕೊಂಡಿದ್ದ ವರ್ಷದ ಮೊದಲ ನೇಗಿಲ ಹೊನ್ನಾರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಷ್ಟ್ರದ ಹಸಿವನ್ನು ನೀಗಿಸುವ ಶಕ್ತಿ ಇರುವುದು ರೈತರಿಗೆ ಮಾತ್ರ. ಅನ್ನದಾತ ಎಂಬ ಬಿರುದಿಗೆ ಅನ್ವರ್ಥಕವಾಗಿ ರೈತ ಶ್ರಮಜೀವಿಯಾಗಿ ಕೆಲಸ ಮಾಡುತ್ತಿದ್ದಾನೆ ಎಂದರು.

ರೈತ ಸಮುದಾಯದ ಎಲ್ಲಾ ಸಂಕಷ್ಟಗಳು ನಿವಾರಣೆಯಾಗಲಿ. ಭೂಮಿ ತಾಯಿ ಒಲಿದರೆ ಎಲ್ಲವೂ ಪ್ರಾಪ್ತಿ ಎಂಬ ಹಿರಿಯರ ನಾಣ್ನುಡಿ ನಿಜವಾಗಲಿ. ಸರ್ಕಾರ ರೈತರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅದನ್ನು ಪೂರ್ಣ ಪ್ರಮಾಣದಲ್ಲಿ ಸದುಪಯೋಗ ಪಡಿಸಿಕೊಂಡು ರೈತರು ಸ್ವಾವಲಂಬಿ ಬದುಕು ನಡೆಸಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿಯೇ ವಿನೂತನ ಕಾರ್ಯಕ್ರಮವನ್ನು ತಾಲೂಕು ಆಡಳಿತ ರೈತ ಸಂಘಟನೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿದೆ. ತಾಲೂಕಿನಾದ್ಯಂತ ಒಟ್ಟು 57 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ವಿಫಲವಾಗಿದ್ದು, ಸರ್ಕಾರದೊಂದಿಗೆ ಚರ್ಚಿಸಿ ರೈತರಿಗೆ ಪರಿಹಾರ ನೀಡಲಾಗಿದೆ. ಆದರೆ ಕೆಲವು ರೈತರಿಗೆ ಪರಿಹಾರದ ಹಣ ಬಂದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.

Advertisement

ಮೂರು ಪ್ರಮುಖ ರೈತ ಸಂಘಟನೆಗಳ ಧುರೀಣರು ಒಂದೆಡೆ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ರೈತರ ಸಮಸ್ಯೆಗಳ ನಿವಾರಣೆಗೆ ಕಳೆದ ಸುಮಾರು 40 ವರ್ಷಗಳಿಂದ ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪ್ರೊ| ನಂಜುಂಡಸ್ವಾಮಿ ಬಣ) ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಪುಟ್ಟಣ್ಣಯ್ಯ ಬಣದ ಹಿರಿಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಹೋರಾಟ ನಡೆಸುತ್ತಿದ್ದಾರೆ. ಇವರ ಹೋರಾಟದಿಂದಾಗಿ ಅನೇಕ ಉತ್ತಮ ಕಾರ್ಯಗಳು ನಡೆದಿವೆ. ವಾಣಿವಿಲಾಸ ಸಾಗರದಿಂದ ಚಳ್ಳಕೆರೆ ತಾಲೂಕಿನ ವೇದಾವತಿ ನದಿಗೆ ನೀರು ಹರಿಸಲು ರೈತರು ಸೇರಿದಂತೆ ಎಲ್ಲರೂ ಸಹಕಾರ ನೀಡಿದ್ದಾರೆ ಎಂದರು.

ತಹಶೀಲ್ದಾರ್‌ ಎನ್‌. ರಘುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮಗೆ ಅನ್ನ ನೀಡುವ ಭೂಮಿತಾಯಿಯ ಬಗ್ಗೆ ನಮ್ಮೆಲ್ಲರಿಗೂ ಅಪಾರವಾದ ಗೌರವವಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ರೈತರ ಬದುಕಿನಲ್ಲಿ ಹೊಸ ಉತ್ಸಾಹ ತುಂಬಲು ಜಿಲ್ಲಾಧಿಕಾರಿ ಮತ್ತು ಕ್ಷೇತ್ರದ ಶಾಸಕ ಟಿ. ರಘುಮೂರ್ತಿಯವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ. ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ರೈತರ ಸಂಕಷ್ಟಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ರೈತರ ಉಳಿವೇ ನಮ್ಮೆಲ್ಲರಿಗೂ ಆಧಾರ ಎಂದು ಹೇಳಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ರೆಡ್ಡಿಹಳ್ಳಿ ವೀರಣ್ಣ, ಕೆ.ಪಿ. ಭೂತಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿ ಡಾ| ಓಂಕಾರಪ್ಪ, ಸಹಾಯಕ ಕೃಷಿ ನಿರ್ದೇಶಕ ಅಶೋಕ್‌, ಹಿರಿಯ ತೋಟಗಾರಿಕೆ ನಿರ್ದೇಶಕ ವಿರೂಪಾಕ್ಷಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜು, ಸದಸ್ಯರಾದ ಚಿನ್ನಯ್ಯ, ಶಾರದಮ್ಮ, ಗೀತಮ್ಮ, ಜಯಮ್ಮ, ದೊರೆ ನಾಗರಾಜು, ದೊರೆ ಅಪ್ಪಣ್ಣ, ದೊರೆ ಬೈಯಣ್ಣ, ರಾಜಣ್ಣ, ಶಿವಮ್ಮ, ಪಾರಿಜಾತ, ಪಿಡಿಒ ಪಾಲಯ್ಯ, ಕಂದಾಯಾ ಧಿಕಾರಿ ಲಿಂಗೇಗೌಡ, ವಿಎ ರಾಘವೇಂದ್ರ ಮೊದಲಾದವರು ಪಾಲ್ಗೊಂಡಿದ್ದರು.

ನಮ್ಮ ಹಿರಿಯರು ಹಾಕಿಕೊಟ್ಟ ವ್ಯವಸಾಯದ ಕ್ರಮಗಳಿಗೆ ಇಂದಿನ ತಾಂತ್ರಿಕತೆ ಸೇರ್ಪಡೆಯಾಗಿ ಬೆಳೆ ಬೆಳೆಯಲು ವಿಫಲರಾಗಿದ್ದೇವೆ. ರೈತರು ಸಕಾಲದಲ್ಲಿ ಭೂಮಿ ಉಳುವೆ ಮಾಡಿ ಆರ್ಥಿಕ ಲಾಭ ಗಳಿಸುವ ಬೆಳೆ ಬೆಳೆಯಬೇಕು. -ಸೋಮಗುದ್ದು ರಂಗಸ್ವಾಮಿ, ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next