ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ವಾರ್ಡ್‌ಗಳ ಪ್ರಮುಖ ಉದ್ಯಾನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೊರಾಂಗಣ ವ್ಯಾಯಾಮ ಸಾಧನಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗುವುದು ಎಂದು ಮೇಯರ್ ಜಿ.ಪದ್ಮಾವತಿ ತಿಳಿಸಿದ್ದಾರೆ.
ಮಹಾಲಕ್ಷ್ಮಿ ಬಡಾವಣೆಯ ವಿಧಾನಸಭಾ ಕ್ಷೇತ್ರದ ನಂದಿನಿ ಬಡಾವಣೆಯಲ್ಲಿ ಸರ್ಕ್ನೂಲರ್ ಉದ್ಯಾನದಲ್ಲಿ ನೂತನ ತೆರೆದ ವ್ಯಾಯಾಮ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಶಾಸಕರ ಅನುದಾನದಲ್ಲಿ ಉದ್ಯಾನವನ್ನು ಹಾಗೂ ಹೊರಾಂಗಣ ವ್ಯಾಯಾಮ ಶಾಲೆಯನ್ನು ನಿರ್ಮಿಸಿದ್ದಾರೆ. ಜನರ ಆರೋಗ್ಯ ದೃಷ್ಟಿಯಿಂದ ವ್ಯಾಯಾಮ ಶಾಲೆಗಳು ಅನುಕೂಲಕಾರಿ. ಎಲ್ಲ ವಾರ್ಡ್‌ಗಳಲ್ಲೂ ಅಂತಾರಾಷ್ಟ್ರೀಯ ಮಟ್ಟದ ಹೊರಾಂಗಣ ವ್ಯಾಯಾಮ ಶಾಲೆ ತೆರೆಯಲು ಶೀಘ್ರವೇ ಯೋಜನೆ ರೂಪಿಸಲಾಗುವುದು,’ ಎಂದು ಅವರು ಹೇಳಿದರು.
“ತೈವಾನ್‌ನಿಂದ ಹೊರಾಂಗಣ ಜಿಮ್ ಸಾಧನಗಳನ್ನು ತರಿಸಿ ಉದ್ಯಾನದಲ್ಲಿ ಅಳವಡಿಸಲಾಗಿದೆ. ಇಂಥದ್ದೇ ಸಾಧನಗಳನ್ನು ನಮ್ಮ ವಾರ್ಡ್‌ನಲ್ಲಿ ಹಾಗೂ ನಗರದ ಪ್ರಮುಖ ಪಾರ್ಕ್‌ಗಳಲ್ಲಿ ಅಳವಡಿಕೆಗೆ ಪ್ರಯತ್ನಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಒತ್ತಡ ಜೀವನದಿಂದಾಗಿ ಕಾಯಿಲೆಗಳಿಗೆ ತುತ್ತಾಗುತ್ತಿದ್ಧಾರೆ.
ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ಇಂತಹ ವ್ಯಾಯಾಮ ಶಾಲೆಗಳನ್ನು ತೆರೆದರೆ ಆರೋಗ್ಯ ಉತ್ತಮವಾಗುತ್ತದೆ,’ ಎಂದರು. ಶಾಸಕ ಗೋಪಾಲಯ್ಯ ಮಾತನಾಡಿ, “ನಂದಿನಿ ಬಡಾವಣೆಯ ಸರ್ಕ್ನೂಲರ್ ಉದ್ಯಾನಕ್ಕೆ ಬೆಳಗ್ಗೆ ಹಾಗೂ ಸಂಜೆ ವೇಳೆ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಬರುತ್ತಾರೆ.
ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 1.20 ಕೋಟಿ ರೂ. ವೆಚ್ಚದಲ್ಲಿ ತೈವಾನ್‌ನಿಂದ ವ್ಯಾಯಾಮ ಸಾಧನಗಳನ್ನು ತರಿಸಿ ಅಳವಡಿಸಲಾಗಿದೆ. ಇದರಿಂದ ಉದ್ಯಾನಕ್ಕೆ ಭೇಟಿ ನೀಡುವ ಎಲ್ಲ ವಯೋಮಾನದ ನಾಗರಿಕರಿಗೆ ಅನುಕೂಲವಾಗಲಿದೆ,’ ಎಂದರು. ಈ ವೇಳೆ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಸ್ಥಳೀಯ ಪಾಲಿಕೆ ಸದಸ್ಯರು ಇದ್ದರು.