ಪುಣೆ: ಪಿಂಪ್ರಿ-ಚಿಂಚ್ವಾಡ್ ಬಂಟರ ಸಂಘದ 22ನೇ ವಾರ್ಷಿಕ ಮಹಾಸಭೆಯು ಅ. 8ರಂದು ಓಣಿ ಮಜಲು ಜಗನ್ನಾಥ ಶೆಟ್ಟಿ ಮಿನಿ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಕಟ್ಟಿಂಗೇರಿಮನೆ ಮಹೇಶ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಸ್ಥೆಯ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆ ನೀಡಿದರು.
ಸಂಘದ ಅಧ್ಯಕ್ಷ ಮಹೇಶ್ ಹೆಗ್ಡೆ ಅವರು ಈ ಸಂದರ್ಭದಲ್ಲಿ ಮಾತನಾಡಿ, ನಮ್ಮ ಸಂಘದ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳು ನಡೆಯುತ್ತಿದ್ದು, ಭವಿಷ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸಂಘದ ಸದಸ್ಯರ ಮಕ್ಕಳಿಗಾಗಿ ದಾನಿಗಳ ಸಹಕಾರದೊಂದಿಗೆ ಶೈಕ್ಷಣಿಕ ಶಾಶ್ವತ ನಿಧಿಯೊಂದನ್ನು ಸ್ಥಾಪಿಸಿ ಶೈಕ್ಷಣಿಕ ನೆರವನ್ನು ಕಲ್ಪಿಸುವ ಯೋಜನೆಯನ್ನು ಆರಂಭಿಸುವ ಬಗ್ಗೆ ಪ್ರಯತ್ನಿಸಬೇಕಾಗಿದೆ. ನಮ್ಮವರ ಹೊಟೇಲ್ ಉದ್ಯಮಕ್ಕೆ ವರ್ಷಾ ರಂಭದಲ್ಲಿ ಸುಪ್ರೀಂ ಕೋರ್ಟ್ ಆದೇಶದಿಂದ ತಾತ್ಕಾಲಿಕ ಹಿನ್ನಡೆ ಉಂಟಾದರೂ ಕೂಡಾ ಸಂಘದ ಎಲ್ಲಾ ಕಾರ್ಯಕ್ರಮಗಳೂ ಯಾವುದೇ ಅಡೆತಡೆಗಳಿಲ್ಲದೆ ನಡೆದಿದ್ದು, ಸಹಕಾರ ನೀಡಿದ ಸಂಘದ ಸದಸ್ಯರಿಗೆ ಹಾಗೂ ದಾನಿಗಳಿಗೆ ಕೃತಜ್ಞತೆಗಳು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಬಜಗೋಳಿ ಅವರು ಕಳೆದ ವಾರ್ಷಿಕ ಚಟುವಟಿಕೆಗಳ ವರದಿಯನ್ನು ಪ್ರಸ್ತುತಪಡಿಸಿ ಸಂಘದ ಪ್ರತಿಯೊಂದು ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ಎಲ್ಲ ಸದಸ್ಯರಿಗೆ ವಂದಿಸಿದರು. ಗೌರವ ಕೋಶಾಧಿಕಾರಿ ಸಂತೋಷ್ ಶೆಟ್ಟಿ ಕುರ್ಕಾಲ್ ಸಂಘದ 2016-17ನೇ ವರ್ಷದ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟರು. ಕಾರ್ಯಕಾರಿ ಸಮಿತಿ ಸದಸ್ಯರಾದ ರಾಕೇಶ್ ಶೆಟ್ಟಿ ಪುತ್ತೂರು ಹಾಗೂ ಬಾಲಚಂದ್ರ ಶೆಟ್ಟಿ ಎರ್ಮಾಳ್ ಲೆಕ್ಕಪತ್ರವನ್ನು ಅನುಮೋದಿಸಿದರು.
ಯುವ ವಿಭಾಗದ ಕಾರ್ಯಾಧ್ಯಕ್ಷ ಅಜಿತ್ ಶೆಟ್ಟಿ ಮುಂಡ್ಕೂರು ಯುವ ವಿಭಾಗ ಆಯೋಜಿಸಲಿರುವ ಫುಟ್ಬಾಲ್ ಪಂದ್ಯಾಟ ಹಾಗೂ ರಕ್ತದಾನ ಶಿಬಿರಗಳ ಬಗ್ಗೆ ಮಾಹಿತಿ ನೀಡಿ ಸಂಘದ ಸದಸ್ಯರ ಸಹಕಾರ ಕೋರಿದರು. ಮುಂದಿನ ವರ್ಷದ ಲೆಕ್ಕಪರಿಶೋಧಕರನ್ನಾಗಿ ಪವನ್ ಶೆಟ್ಟಿ ಅವರನ್ನು ಆಯ್ಕೆಗೊಳಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ಸಂಘದ ಅಭಿವೃದ್ಧಿಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ವೇದಿಕೆಯಲ್ಲಿ ಅಧ್ಯಕ್ಷ ಮಹೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಬಜಗೋಳಿ, ಗೌರವ ಕೋಶಾಧಿಕಾರಿ ಸಂತೋಷ್ ಶೆಟ್ಟಿ ಕುರ್ಕಾಲ್, ಉಪಾಧ್ಯಕ್ಷರಾದ ವಿಜಯ… ಶೆಟ್ಟಿ ಬೋರ್ಕಟ್ಟೆ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಡಾ| ವಿನಯ… ಶೆಟ್ಟಿ ಕೆಂಜೂರು, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಪೆರ್ಡೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತನುಜಾ ಶೆಟ್ಟಿ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಸುಧಾಕರ ಶೆಟ್ಟಿ ಪೆಲತ್ತೂರು ಮೇಲ್ಮನೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಜಿತ್ ಶೆಟ್ಟಿ ಮುಂಡ್ಕೂರು ಉಪಸ್ಥಿತರಿದ್ದರು.
ಶ್ರೀನಿಧಿ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾ ರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.