Advertisement

Karnataka Government ಶೀಘ್ರ ಡಿಜಿಟಲ್‌ ಬಗರ್‌ಹುಕುಂ ಸಾಗುವಳಿ ಚೀಟಿ

12:26 AM Nov 29, 2023 | Team Udayavani |

ಬೆಂಗಳೂರು: ರಾಜ್ಯಾದ್ಯಂತ 54 ಲಕ್ಷ ಎಕರೆ ಬಗರ್‌ಹುಕುಂ ಸಾಗುವಳಿ ಭೂಮಿಗಾಗಿ 9.29 ಲಕ್ಷ ಅರ್ಜಿಗಳು ಬಂದಿದ್ದು, ಸರಕಾರದ ಬಳಿ ಅಷ್ಟು ಪ್ರಮಾಣದ ಭೂಮಿಯೇ ಇಲ್ಲ. ಹೀಗಾಗಿ 8 ತಿಂಗಳುಗಳ ಒಳಗೆ ಅನರ್ಹರನ್ನು ಪರಿಶೋಧಿಸಿ ಅರ್ಹರಿಗೆ ಡಿಜಿಟಲೀಕೃತ ಸಾಗುವಳಿ ಚೀಟಿ ನೀಡಲು ರಾಜ್ಯ ಸರಕಾರ ಮುಂದಾಗಿದೆ.

Advertisement

ಈ ಹಿಂದೆ ಸಿದ್ದರಾಮಯ್ಯ ಅಧಿಕಾರದಲ್ಲಿ ದ್ದಾಗಲೇ ಬಗರ್‌ಹುಕುಂ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಇದು ವರೆಗೆ 9,29,513 ಅರ್ಜಿಗಳು ಬಂದಿದ್ದು, ಇದರ ಪ್ರಕಾರ 54 ಲಕ್ಷ ಎಕರೆಯನ್ನು ಮಂಜೂರು ಮಾಡಬೇಕಾಗುತ್ತದೆ. ಆದರೆ ಅಷ್ಟು ಪ್ರಮಾಣದ ಸರಕಾರಿ ಭೂಮಿ ಇಲ್ಲ. ಅನರ್ಹರೂ ಅರ್ಜಿ ಸಲ್ಲಿಸಿರುವುದು ಪತ್ತೆಯಾಗಿದೆ. ತಾಂತ್ರಿಕ ದೋಷಗಳೂ ಇದ್ದುದರಿಂದ ಬಗರ್‌ಹುಕುಂ ಸಮಿತಿ ರಚಿಸಿ ಇವುಗಳ ಇತ್ಯರ್ಥಕ್ಕೆ ಕ್ರಮ ಕೈಗೊಂಡಿರಲಿಲ್ಲ. ಈಗ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ 8 ತಿಂಗಳಲ್ಲಿ ಬಗರ್‌ಹುಕುಂ ಸಾಗುವಳಿ ಚೀಟಿಗಳಿಗೆ ಮುಕ್ತಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದ ಅವರು, ಸರಕಾರಿ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದ ಭೂರಹಿತರಿಗೆ ಆ ಜಾಗವನ್ನು ಸಕ್ರಮ ಮಾಡಿಕೊಡಲು ಕಾನೂನಿನಡಿ ಅವಕಾಶ ಒದಗಿಸಲಾಗಿತ್ತು. ಆದರೆ ಸಾಕಷ್ಟು ಸಮಸ್ಯೆಗಳು ಇದ್ದುದರಿಂದ ಇದುವರೆಗೆ ಈ ಪ್ರಕ್ರಿಯೆ ಸರಿಯಾಗಿ ಅನುಷ್ಠಾನಗೊಂಡಿರಲಿಲ್ಲ ಎಂದರು.

ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ
50 ತಾಲೂಕುಗಳಲ್ಲಿ ಬಗರ್‌ಹುಕುಂ ಸಮಿತಿ ರಚನೆಗೆ ಪ್ರಸ್ತಾವನೆ ಬಂದಿದ್ದು, ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆ ಯಲ್ಲಿ ಕೂಡಲೇ ಸಮಿತಿ ರಚಿಸುತ್ತೇವೆ. ಉಳಿದಂತೆ ಜಿಲ್ಲಾಧಿಕಾರಿ ಗಳಿಂದ ಪ್ರಸ್ತಾವನೆ ಪಡೆದು ಸಮಿತಿ ರಚಿಸಲಾಗುತ್ತದೆ. ಸಲ್ಲಿಕೆ ಯಾಗಿರುವ 9.29 ಲಕ್ಷ ಅರ್ಜಿಗಳಿಗೆ ಸಂಬಂಧಿಸಿ ಫ‌ಲಾನು ಭವಿಗಳ ಆಧಾರ್‌ ಜೋಡಣೆ ಮಾಡಿ, ಅವರ ಕುಟುಂಬದ ಜಮೀನಿನ ಮಾಹಿತಿಯನ್ನು ತಹಶೀಲ್ದಾರರು ಪರಿಶೀಲಿಸ ಲಿದ್ದಾರೆ. ಇದಕ್ಕೆ ಪೂರಕವಾಗಿ ಸ್ಯಾಟಲೈಟ್‌ ಚಿತ್ರಗಳು ಮತ್ತು ಸರ್ವೇ ವರದಿ ಪರಿಶೀಲಿಸಿ, ಸಮಿತಿಯ ಮುಂದೆ ಅರ್ಹ ಅರ್ಜಿಗಳನ್ನು ಇರಿಸುತ್ತಾರೆ. ಸಮಿತಿಯು ಪರಿಶೀಲಿಸಿ, ಇತ್ಯರ್ಥಪಡಿಸುತ್ತದೆ ಎಂದು ವಿವರಿಸಿದರು.

ಏನಿದು ಡಿಜಿಟಲ್‌
ಸಾಗುವಳಿ ಚೀಟಿ?
2017ರಿಂದ ಈ ಕಾನೂನು ಬಂದಿದ್ದು, ಈ ಹಿಂದೆ ಸಾಗುವಳಿ ಚೀಟಿ ಕೊಡುವಾಗ ಅಷ್ಟು ಭೂಮಿ ಇತ್ತೇ ಎಂಬುದನ್ನು ನೋಡಿಲ್ಲ. ಅಧಿಕ ಭೂಮಿ ಮಂಜೂರಾಗಿರುವುದೂ ಇದೆ. ಸಾಗುವಳಿ ಚೀಟಿ ವಿತರಣೆ ಆದವರಿಗೆ ದಾಖಲೆ ಇಲ್ಲದಂತಾಗಿದೆ. ಈ ಎಲ್ಲ ಕಾರಣಗಳಿಂದ ಪೋಡಿ ಮಾಡಲು ಹಿನ್ನಡೆ ಯಾಗುತ್ತಿದ್ದು, ಡಿಜಿಟಲೀಕೃತ ಸಾಗುವಳಿ ಚೀಟಿ ಇದೆಲ್ಲಕ್ಕೂ ಪರಿಹಾ ರವಾಗಲಿದೆ. ಡಿಜಿಟಲ್‌ ಚೀಟಿಯಲ್ಲಿ ಸ್ಕ್ಯಾನ್‌ ಮಾಡಬಲ್ಲ ಬಾರ್‌ಕೋಡ್‌, ಸಾಗುವಳಿದಾರರ ಆಧಾರ್‌ ಸಂಖ್ಯೆ, ಭಾವಚಿತ್ರ ಎಲ್ಲವೂ ಇರಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜಮೀನನ್ನು ಪೋಡಿ ಮಾಡಿಸಿ, ನೋಂದಣಿ ಕೂಡ ಮಾಡಿಕೊಡಲಾಗುತ್ತದೆ. ಆನ್‌ಲೈನ್‌ ಮೂಲಕ ಶುಲ್ಕ ಪಾವತಿಗೂ ಅವಕಾಶ ಮಾಡಿಕೊಡಲಾಗುತ್ತದೆ. ಇದರಿಂದ ಪೋಡಿ ಸಮಸ್ಯೆಗೂ ಶಾಶ್ವತ ಪರಿಹಾರ ಸಿಗಲಿದೆ.

Advertisement

ಅರ್ಹತೆಯ ಮಾನದಂಡ ಏನು?
-2004ಕ್ಕೂ ಹಿಂದಿನಿಂದ ಸರಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರಬೇಕು.
-2004ಕ್ಕೂ ಮೊದಲಿನಿಂದ ಸಾಗುವಳಿ ಮಾಡುತ್ತಿದ್ದ 18 ವರ್ಷ ತುಂಬಿದ್ದವರಷ್ಟೇ ಅರ್ಜಿ ಸಲ್ಲಿಸಿರಬೇಕು.
-ಸ್ವಂತ ಭೂಮಿ ಇಲ್ಲದೆ ಅನಿವಾರ್ಯವಾಗಿ ಸರಕಾರಿ ಭೂಮಿಯಲ್ಲಿ ಸಾಗುವಳಿ ನಡೆಸಿರಬೇಕು.
-ಸ್ವಂತ ಭೂಮಿ ಇದ್ದರೂ 4.38 ಎಕರೆಗಿಂತ ಹೆಚ್ಚಿಗೆ ಇರುವಂತಿಲ್ಲ.
-ಸಾಗುವಳಿ ಭೂಮಿ ಇರುವ ತಾಲೂಕು ಅಥವಾ ಜಿಲ್ಲೆಯಲ್ಲೇ ವಾಸವಿರಬೇಕು.

ಈ ಹಿಂದಿನ ಕೆಲವು ಬಗರ್‌ಹುಕುಂ ಸಮಿತಿ ಸಭೆಗಳ ನಡಾವಳಿಗಳೇ ನಾಪತ್ತೆಯಾಗಿದ್ದು, ಶಾಸಕರು ಅಧಿವೇಶನದಲ್ಲಿರುವಾಗ ಸಮಿತಿ ಸಭೆ ನಡೆದಿರುವುದಾಗಿ ದಾಖಲೆ ಸೃಷ್ಟಿಸಲಾಗಿದೆ. ಕೆಲವೆಡೆ ಸದಸ್ಯರೇ ಇಲ್ಲದೆ, ಅವರ ಸಹಿಯೇ ಇಲ್ಲದೆ ಸಭೆಗಳು ನಡೆದಿವೆ. ಹೀಗಾಗಿ ಸಭೆಯನ್ನೂ ಗಣಕೀಕರಣ ಮಾಡಲು ನಿರ್ಧರಿಸಿದ್ದು, ಬಯೋಮೆಟ್ರಿಕ್‌ ಕೂಡ ಅಳವಡಿಸಲಾಗುತ್ತದೆ. ಸಾಗುವಳಿ ಚೀಟಿಯೂ ಡಿಜಿಟಲ್‌ ರೂಪದಲ್ಲಿ ಇರಲಿದೆ. ಜನರಿಗೆ ಜಮೀನೂ ಸಿಗಬೇಕು, ನೆಮ್ಮದಿಯ ಮಾಲಕತ್ವ ಸಿಗಬೇಕು ಎಂಬುದು ನಮ್ಮ ಆದ್ಯತೆ.
-ಕೃಷ್ಣ ಬೈರೇಗೌಡ, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next