ಮಹಾನಗರ: ಬುದ್ಧಿಮಾಂದ್ಯ, ಮೆದುಳಿನ ಪಾರ್ಶ್ವಕ್ಕೆ ಸಂಬಂಧಿಸಿದ ನ್ಯೂನ್ಯತೆಗಳನ್ನು ಮಗುವಿನ ಜನನ ಸಂದರ್ಭದಲ್ಲೇ ಕಂಡು ಕೊಳ್ಳಲು ಸಾಧ್ಯ.
ಶೀಘ್ರವಾಗಿ ಪತ್ತೆ ಹಚ್ಚಿ ಅದಕ್ಕೆ ಬೇಕಾಗಿರುವ ವೈದ್ಯಕೀಯ ಸಹಾಯ, ಸಂಬಂಧಿಸಿದ ತೆರಫಿ ಮತ್ತು ವಿಶೇಷ ಶಿಕ್ಷಣ ನೀಡಿದಲ್ಲಿ ಬುದ್ಧಿಮಾಂದ್ಯ ಮಗುವಿನಲ್ಲಿ ಹೆಚ್ಚಿನ ಅಭಿವೃದ್ಧಿ ಆಗಲು ಸಾಧ್ಯ. ಜತೆಗೆ ತಜ್ಞರ ತಂಡ ಕೂಡ ಅನ್ಯೋನ್ಯವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಬೆಂಗಳೂರಿನ ಪರಿಜ್ಞಾ ನರಶಾಸ್ತ್ರ ಕೇಂದ್ರದ ಖ್ಯಾತ ನರರೋಗ ತಜ್ಞ ಡಾ| ಸುಧೀಂದ್ರ ಆರೂರು ಅಭಿಪ್ರಾಯಪಟ್ಟರು.
ಶಕ್ತಿನಗರದಲ್ಲಿ ಕಾರ್ಯಚರಿಸುತ್ತಿರುವ “ಸಾನ್ನಿಧ್ಯ’ ಮಾನಸಿಕ ಭಿನ್ನಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆಯಲ್ಲಿ ಜರಗಿದ ಹೆತ್ತವರ, ಪೋಷಕರ ಮತ್ತು ಶಿಕ್ಷಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಪದವಿಪೂರ್ವ ಶಿಕ್ಷಣದಲ್ಲಿ ಅತ್ಯುತ್ತಮ ಅಂಕದೊಂದಿಗೆ ತೇರ್ಗಡೆಯಾದ ಶಾಲಾ ಸಿಬಂದಿ ಮಕ್ಕಳನ್ನು ಡಾ| ಸುಧೀಂದ್ರ ಅವರು ಅಭಿನಂದಿಸಿದರು. 2018ನೇ ವರ್ಷ ಒಂದು ದಿನವೂ ರಜೆ ಪಡೆಯದ ಸಾನಿಧ್ಯ ಶಾಲೆಯ ಉಪಪ್ರಾಂಶುಪಾಲೆ ರಜನಿಪ್ರಸನ್ನ ಅವರನ್ನು ಅಭಿನಂದಿಸಲಾಯಿತು.
2018-19ನೇ ಸಾಲಿಗೆ ಶಾಲೆಗೆ ಸೇರ್ಪಡೆಯಾದ ತಮ್ಮ ಮಕ್ಕಳಲ್ಲಿ ಆದ ಪ್ರಗತಿಯ ಬಗ್ಗೆ ಹೆತ್ತವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಾನ್ನಿಧ್ಯದ ಆಡಳಿತಾಧಿಕಾರಿ ಡಾ| ವಸಂತ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿದರು. ಶ್ರೀ ಗಣೇಶ ಸೇವಾ ಟ್ರಸ್ಟಿನ ಜತೆ ಕಾರ್ಯದರ್ಶಿ ಪ್ರೊ| ರಾಧಾಕೃಷ್ಣ ಅತಿಥಿ ಪರಿಚಯ ಮಾಡಿದರು.
ಶಾಲಾ ಸಹಾಯಕ ಆಡಳಿತಾಧಿಕಾರಿ ಸುಮಾ ಡಿ’ಸಿಲ್ವಾ ನಿರೂಪಿಸಿದರು. ಪ್ರಾರಂಭದಲ್ಲಿ ಸಾನ್ನಿಧ್ಯ ಶಾಲಾ ವಿಶೇಷ ಮಕ್ಕಳು ನೃತ್ಯದ ಮೂಲಕ ಸ್ವಾಗತಿಸಿದರು.