Advertisement

ಕರ್ನಾಟಕದ ಖಾದಿ ಉತ್ಪನ್ನಗಳಿಗೆ ಶೀಘ್ರ “ಬ್ರ್ಯಾಂಡ್‌’ಗರಿ

03:24 PM Dec 31, 2017 | |

ಬೆಂಗಳೂರು: ರೇಮಂಡ್ಸ್‌, ಪೀಟರ್‌ ಇಂಗ್ಲೆಂಡ್‌,ಜಾನ್‌ ಪ್ಲೇಯರ್‌ನಂತೆಯೇ ಕರ್ನಾಟಕದ ಖಾದಿ ಉತ್ಪನ್ನಗಳಿಗೂ ಒಂದು ಬ್ರಾಂಡ್‌ ಬರಲಿದೆ.

Advertisement

ಹೌದು, ಕರ್ನಾಟಕ ಖಾದಿ ಉತ್ಪನ್ನಗಳು ಇನ್ಮುಂದೆ ಸಾಂಪ್ರದಾಯಿಕ ಶೈಲಿಯಿಂದ ಹೊರಬಂದು ಆಧುನಿಕ ವಿನ್ಯಾಸಗಳ ರೂಪು ಪಡೆಯಲಿದ್ದು, ಇದಕ್ಕೆ ಪ್ರತ್ಯೇಕ ಬ್ರಾಂಡ್‌ ನೀಡಲು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
ನಿರ್ಧರಿಸಿದೆ. ಅದರಂತೆ ಈ ಬ್ರಾಂಡ್‌ನ‌ಡಿಯಲ್ಲೇ ರಾಜ್ಯದ ಖಾದಿ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹಾಗೊಂದು ವೇಳೆ ಇದು ಅನುಷ್ಠಾನಗೊಂಡರೆ, ಖಾದಿಗಾಗಿ ಪ್ರತ್ಯೇಕ ಬ್ರಾಂಡ್‌ ಹೊಂದಲಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಕರ್ನಾಟಕ ಖಾದಿಗೆ ಆಧುನಿಕ ಸ್ಪರ್ಶ ನೀಡುವ ಸಂಬಂಧ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಷನ್‌ ಟೆಕ್ನಾಲಜಿ (ಎನ್‌ಐಎಫ್ಟಿ) ನಡೆಸಿದ ಸಮೀಕ್ಷೆಯಲ್ಲಿ ಬಹುತೇಕರು ಖಾದಿ ಉತ್ಪನ್ನಗಳ ಖರೀದಿಗೆ ಆಸಕ್ತಿ ತೋರಿಸಿದ್ದಾರೆ. ಆದರೆ, ಅದು ಸಾಂಪ್ರದಾಯಿಕ ವಿನ್ಯಾಸಗಳಿಂದ ಹೊರಬರಬೇಕು ಮತ್ತು ಗುಣಮಟ್ಟ ಮೇಲ್ದರ್ಜೆಗೇರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಆಧರಿಸಿ ಹೊಸ ವಿನ್ಯಾಸ ಮತ್ತು ಪ್ರತ್ಯೇಕ ಬ್ರಾಂಡ್‌ ನೀಡಲು ಉದ್ದೇಶಿಸಲಾಗಿದೆ. ಈ ಹೊಸ ಪ್ರಯೋಗದಿಂದ ಉತ್ಪನ್ನಗಳ ತಯಾರಕರ ಆದಾಯದಲ್ಲಿ ಸರಿಸುಮಾರು ಶೇ.50 ಏರಿಕೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಖಾದಿ ಕ್ಷೇತ್ರದ ಸುಸ್ಥಿರ ಬೆಳವಣಿಗೆ ಮತ್ತು ತಯಾರಕರ ಜೀವನಮಟ್ಟ ವೃದಿಟಛಿಗೆ ಖಾದಿಗೆ ಹೊಸ ರೂಪ ನೀಡಲು ಉದ್ದೇಶಿಸಲಾಗಿದೆ. ಯುವಕರ ಬೇಡಿಕೆಗೆ ಅನುಗುಣವಾಗಿ ಕುರ್ತಾ, ಟಾಪ್‌ಗ್ಳು, ಪ್ಯಾಂಟ್‌ ಸೇರಿ 200 ಉತ್ಪನ್ನಗಳ ವಿನ್ಯಾಸಗಳನ್ನು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಷನ್‌ ಟೆಕ್ನಾಲಜಿ ರೂಪಿಸಿದೆ. ಅಲ್ಲದೆ, 300ಕ್ಕೂ ಹೆಚ್ಚು ಕಲಾವಿದರಿಗೆ ಈ ವಿನ್ಯಾಸಗಳ ಕೌಶಲ್ಯ ತರಬೇತಿ ನೀಡಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ.ವಿ.ಶಿವಲಿಂಗಂ “ಉದಯವಾಣಿ’ಗೆ ತಿಳಿಸಿದರು.

ಆನ್‌ಲೈನ್‌ ಮಾರುಕಟ್ಟೆಗೂ ಲಗ್ಗೆ: ಅಲ್ಲದೆ, ಫ್ಯಾಷನ್‌ನೊಂದಿಗೆ ಖಾದಿ ಉತ್ಪನ್ನಗಳು ಆನ್‌ಲೈನ್‌ ಮಾರುಕಟ್ಟೆಗೂ ಲಗ್ಗೆ ಇಡಲಿವೆ. ಈ ಸಂಬಂಧ ಈಗಾಗಲೇ ಅಮೆಜಾನ್‌, μÉಪ್‌ಕಾರ್ಟ್‌ನಂತಹ ಪ್ರಮುಖ ಕಂಪನಿಗಳ ಮುಖ್ಯಸ್ಥರ ಜತೆ ಚರ್ಚಿಸ ಲಾಗಿದೆ. ಪೂರಕ ಸ್ಪಂದನೆಯೂ ಸಿಕ್ಕಿದೆ. ಇದೆಲ್ಲವನ್ನೂ ಸದ್ಬಳಕೆ ಮಾಡಿಕೊಂಡಲ್ಲಿ, ತಯಾರಕರ ಆದಾಯ ಒಂದೂವರೆಪಟ್ಟು ಹೆಚ್ಚಳ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ. 

ಕರ್ನಾಟಕ ಖಾದಿಗೆ ದೇಶದಲ್ಲೇ ಉತ್ತಮ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಬ್ರಾಂಡ್‌ ನಡಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲು ಉದ್ದೇಶಿಸಲಾಗಿದ್ದು, ಬ್ರಾಂಡ್‌ ನಾಮಕರಣ ಇನ್ನೂ ಆಗಿಲ್ಲ. “ನಮ್ಮ ಖಾದಿ’ ಸೇರಿ ಹಲವು ಆಯ್ಕೆಗಳು ಮಂಡಳಿ ಮುಂದಿವೆ. ನಂತರ ಅದು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಷನ್‌ ಟೆಕ್ನಾಲಜಿಯ ತಜ್ಞರ ತಂಡದಿಂದ ಅನುಮೋದನೆಗೊಳ್ಳಬೇಕು. ಈ ಸಂಬಂಧದ ಎಲ್ಲ ಪ್ರಕ್ರಿಯೆಗೆ ನಾಲ್ಕು ತಿಂಗಳು ಬೇಕಾಗುತ್ತದೆ. ಜತೆಗೆ ಆನ್‌ಲೈನ್‌ ಮಾರುಕಟ್ಟೆಯಲ್ಲೂ ಖಾದಿ ಉತ್ಪನ್ನಗಳು ಲಭ್ಯವಾಗಲಿವೆ ಎಂದು ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯವಿಭವ ಸ್ವಾಮಿ ತಿಳಿಸಿದರು. 

Advertisement

ರಾಜ್ಯದಲ್ಲಿ ಸುಮಾರು 20 ಸಾವಿರ ಖಾದಿ ಉತ್ಪನ್ನಗಳ ತಯಾರಕರಿದ್ದಾರೆ. ಈ ಪೈಕಿ 6 ಸಾವಿರ ಜನ ಖಾದಿ ಬಟ್ಟೆ ಹೊಲಿಯುವವರಿದ್ದಾರೆ. ರಾಜ್ಯದಲ್ಲಿ ವಾರ್ಷಿಕ ಅಂದಾಜು 150 ಕೋಟಿ ರೂ. ಖಾದಿ ಉತ್ಪನ್ನಗಳ ವಹಿವಾಟು ನಡೆಯುತ್ತಿದೆ. ರಾಜ್ಯದ ಖಾದಿ ಸಿಂಗಪುರ, ಜಪಾನ್‌ಗೆ ರಫ್ತು ಆಗುತ್ತಿದೆ. ಆದರೆ, ಇದು ತುಂಬಾ ಅಲ್ಪಪ್ರಮಾಣದಲ್ಲಿದೆ. ಒಂದು ವೇಳೆ ಬ್ರಾಂಡ್‌, ಆನ್‌ಲೈನ್‌ ಮಾರುಕಟ್ಟೆ ಸೇರಿದಂತೆ ಎಲ್ಲ ಸೌಲಭ್ಯಗಳು ದೊರೆತರೆ, ಈ ವಹಿವಾಟಿನ ಮೊತ್ತ ಮೂರು ಪಟ್ಟು ಹೆಚ್ಚಳ ಆಗಲಿದೆ. ಜತೆಗೆ ಉತ್ಪಾದಕರ ಬೇಡಿಕೆ ಕೂಡ ದುಪ್ಪಟ್ಟಾಗಲಿದೆ ಎಂದೂ ಜಯವಿಭವ ಸ್ವಾಮಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next