Advertisement

ಮೀನುಗಾರರಿಗೆ ಶೀಘ್ರ ಬಯೋಮೆಟ್ರಿಕ್‌ ಕಾರ್ಡ್‌

12:05 AM Aug 20, 2019 | Sriram |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಯೋಮೆಟ್ರಿಕ್‌ ಕಾರ್ಡ್‌ ಹೊಂದಿಲ್ಲದ ಮೀನುಗಾರರಿಗೆ ಶೀಘ್ರದಲ್ಲೇ ನೀಡುವುದಕ್ಕೆ ಮೀನುಗಾರಿಕೆ ಇಲಾಖೆ ತೀರ್ಮಾನಿಸಿದೆ.

Advertisement

ಜಿಲ್ಲೆಯಲ್ಲಿ ಒಟ್ಟು 34,960 ಸಕ್ರಿಯ ಮೀನುಗಾರರಿದ್ದು, 23,690 ಮಂದಿ ಇಲಾಖೆಯ ವಿವಿಧ ಸವಲತ್ತುಗಳನ್ನು ಪಡೆಯುವ ಮತ್ತು ಉದ್ಯೋಗ ಸುರಕ್ಷತೆ ಒದಗಿಸುವ ಬಯೋಮೆಟ್ರಿಕ್‌ ಕಾರ್ಡ್‌ ಹೊಂದಿಲ್ಲ.

ಈಗಾಗಲೇ 11,270 ಮೀನುಗಾರರಿಗೆ ಕಾರ್ಡ್‌ ವಿತರಣೆಯಾಗಿದೆ. ಆದರೆ 2016ರಿಂದ ವಿತರಣೆ ಸ್ಥಗಿತಗೊಂಡಿದೆ. ಈಗ ಮತ್ತೆ ಅದಕ್ಕೆ ಚಾಲನೆ ನೀಡಿ, ಬಾಕಿಯುಳಿದಿರುವ ಎಲ್ಲ ಅರ್ಹ ಮೀನುಗಾರರಿಗೆ ವಿತರಿಸಲು ಇಲಾಖೆ ನಿರ್ಧರಿಸಿದೆ.

ಜಿಲ್ಲಾ ಮೀನುಗಾರಿಕೆ ಉಪ ನಿರ್ದೇಶಕ ತಿಪ್ಪೇಸ್ವಾಮಿ ಹೇಳುವ ಪ್ರಕಾರ, ಮೀನುಗಾರರಿಗೆ ಭದ್ರತೆ ಮತ್ತು ಸೌಲಭ್ಯಗಳನ್ನು ಪಡೆಯಲು ಬಯೋಮೆಟ್ರಿಕ್‌ ಕಾರ್ಡ್‌ ಅಗತ್ಯ. ಹೀಗಾಗಿ ಇಲಾಖೆ ಮತ್ತೆ ವಿತರಣೆ ಆರಂಭಿಸಲು ನಿರ್ಧರಿಸಿದೆ. ಜಿಲ್ಲೆಯಲ್ಲಿ ಒಟ್ಟು 65,240 ನೋಂದಾಯಿತ ಮೀನುಗಾರರಿದ್ದು, ಅದರಲ್ಲಿ 34,960 ಮಂದಿ ಮೀನುಗಾರಿಕೆಯಲ್ಲಿ ಸಕ್ರಿಯರಾಗಿದ್ದಾರೆ.

ಇಲಾಖಾ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ತಿಪ್ಪೇಸ್ವಾಮಿ, ಮೀನುಗಾರರಲ್ಲದವರು ಕೂಡ ಬಯೋಮೆಟ್ರಿಕ್‌ ಕಾರ್ಡ್‌ ಪಡೆದಿರುವುದು ಗಮನಕ್ಕೆ ಬಂದಿದೆ. ಅಂಥವುಗಳ ರದ್ದತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಆಧಾರ್‌ ಲಿಂಕ್‌
ಈ ಕಾರ್ಡ್‌ಗಳಿಗೆ ಆಧಾರ್‌ ಲಿಂಕ್‌ ಮಾಡಲು ನಿರ್ಧರಿಸಲಾಗಿದೆ. ಜಿಲ್ಲೆಯ ಬೋಟುಗಳಲ್ಲಿ ಹೊರಗಡೆಯ ಬಹಳಷ್ಟು ಮಂದಿ ದುಡಿಯುತ್ತಿದ್ದಾರೆ. ಆಧಾರ್‌ ಲಿಂಕ್‌ ಮಾಡುವುದರಿಂದ ಅವರು ದೇಶದ ಇತರ ಕಡೆಗಳಲ್ಲೂ ಮೀನುಗಾರಿಕೆಯಲ್ಲಿ ದುಡಿಯುವಾಗ ಸಹಕಾರಿಯಾಗುತ್ತದೆ. ಪ್ರಸ್ತುತ ಬಯೋಮೆಟ್ರಿಕ್‌ ಕಾರ್ಡ್‌ ಇಲ್ಲದ ಹೊರ ರಾಜ್ಯಗಳ ಮೀನುಗಾರರಿಗೆ ತಾತ್ಕಾಲಿಕ ಗುರುತುಪತ್ರ ನೀಡಲಾಗುತ್ತದೆ. ಇದು ಒಂದು ಮೀನುಗಾರಿಕಾ ಋತುವಿಗೆ ಮಾತ್ರ ಅನ್ವಯ ಎಂದವರು ವಿವರಿಸಿದರು.

ಟೆಂಡರ್‌ ವಿಚಾರದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ಇರುವ ಕಾರಣ ಕುಳಾç ಜೆಟ್ಟಿ ಯೋಜನೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿಲ್ಲ ಎಂದವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಹೊಸ ಅರ್ಜಿಗಳನ್ನು ಪರಿಗಣಿಸಿಲ್ಲ
ಪ್ರಸ್ತುತ ಹೊಸ ಬೋಟುಗಳ ಅರ್ಜಿಗಳನ್ನು ಪರಿಗಣಿಸುತ್ತಿಲ್ಲ. 2016ರಲ್ಲಿ ಬಂದಿರುವ ಅರ್ಜಿಗಳಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ 282 ಅರ್ಜಿಗಳಿಗೆ ದೋಣಿ ನಿರ್ಮಾಣಕ್ಕೆ ಸಾಧ್ಯತಾ ಪತ್ರ ನೀಡಲಾಗಿತ್ತು. ಇವರಲ್ಲಿ 80 ಮಂದಿ ಬಿಟ್ಟರೆ ಉಳಿದವರು ದೋಣಿ ನಿರ್ಮಾಣ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿಗಳನ್ನು ರದ್ದುಪಡಿಸಬೇಕೇ ಅಥವಾ ಮುಂದುವರಿಸಬೇಕೇ ಎಂಬ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದೇವೆ ಎಂದರು.

ದೋಣಿಗಳ ಮಾಹಿತಿಗೆ ಆ್ಯಪ್‌
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಎಷ್ಟು ಬೋಟುಗಳು ಮೀನುಗಾರಿಕೆಗೆ ತೆರಳಿವೆ ಎಂಬ ಬಗ್ಗೆ ಮಾಹಿತಿ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಆ್ಯಪ್‌ ಸಿದ್ಧಪಡಿಸುತ್ತಿದ್ದಾರೆ. ಅಳಿವೆ ಬಾಗಿಲು ಮೂಲಕ ಎಷ್ಟು ದೋಣಿಗಳು ತೆರಳಿವೆ ಮತ್ತು ಎಷ್ಟು ಮರಳಿವೆ ಎಂಬ ನಿಖರ ಮಾಹಿತಿ ಈ ಆ್ಯಪ್‌ನಲ್ಲಿ ಲಭ್ಯವಾಗುತ್ತದೆ ಎಂದು ಮಂಗಳೂರು ಟ್ರಾಲ್‌ಬೋಟು ಮೀನುಗಾರರ ಸಂಘದ ಅಧ್ಯಕ್ಷ ನಿತಿನ್‌ ಕುಮಾರ್‌ ಅವರು ತಿಳಿಸಿದರು.

ಮೀನುಗಾರಿಕೆ ದೋಣಿಗಳಿಗೆ ಸ್ಯಾಟಲೈಟ್‌ ಫೋನ್‌
ಮೀನುಗಾರಿಕೆ ದೋಣಿಗಳಿಗೆ ಸೆಟ್‌ಲೈಟ್‌ ಫೋನ್‌ ಸಂಪರ್ಕದ ಪ್ರಸ್ತಾವನೆ ಇದೆ. ಇದಕ್ಕೆ ಸುಮಾರು 1.20 ಲಕ್ಷ ರೂ. ವೆಚ್ಚ ತಗಲುತ್ತದೆ. ಇದಕ್ಕೆ ಸರಕಾರದಿಂದ ಸಹಾಯಧನ ಪಡೆಯುವ ನಿಟ್ಟಿನಲ್ಲೂ ಚರ್ಚೆ ನಡೆಯುತ್ತಿದೆ ಎಂದು ಮೀನುಗಾರಿಕಾ ಉಪನಿರ್ದೇಶಕ ತಿಪ್ಪೇ ಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next