Advertisement

ಎ ಖಾತಾ ಪ್ರಸ್ತಾವನೆಗೆ ಶೀಘ್ರ ಸಮ್ಮತಿ?

01:04 AM May 13, 2019 | Lakshmi GovindaRaj |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ “ಬಿ’ ಖಾತಾ ಸ್ವತ್ತುಗಳಿಗೆ “ಎ’ ಖಾತಾ ನೀಡುವ ಮೂಲಕ ಸಾವಿರಾರು ಕೋಟಿ ರೂ. ವರಮಾನ ತರುವ ಪಾಲಿಕೆಯ ಪ್ರಸ್ತಾವನೆಗೆ ಶೀಘ್ರವೇ ಸರ್ಕಾರದಿಂದ ಅನುಮೋದನೆ ದೊರೆಯಲಿದ್ದು, ಇದರಿಂದ ಲಕ್ಷಾಂತರ ಆಸ್ತಿ ಮಾಲೀಕರಿಗೆ ಅನುಕೂಲವಾಗಲಿದೆ.

Advertisement

ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಬಿ ಖಾತಾ ಸ್ವತ್ತುಗಳಿಗೆ ಎ ಖಾತಾ ನೀಡಲು ಕೌನ್ಸಿಲ್‌ ಸಭೆಯಲ್ಲಿ ನಿರ್ಧಾರ ಕೈಗೊಂಡು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ಬಳಿಕ ಸರ್ಕಾರ ಪ್ರಸ್ತಾವನೆಗೆ ಅನುಮತಿ ನೀಡಲಿದೆ ಎನ್ನಲಾಗಿದೆ. ಇದರಿಂದ ಪಾಲಿಕೆ ವ್ಯಾಪ್ತಿಯ ಲಕ್ಷಾಂತರ ಆಸ್ತಿ ಮಾಲೀಕರಿಗೆ ಅನುಕೂಲವಾಗಲಿದ್ದು, ಪಾಲಿಕೆಗೆ ಸಾವಿರಾರು ಕೋಟಿ ರೂ. ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ.

ಬಿ ಖಾತಾ ಹೊಂದಿರುವುದರಿಂದ ಸ್ಥಳೀಯ ಸಂಸ್ಥೆಗಳಿಂದ ನಕ್ಷೆ ಮಂಜೂರಾತಿ, ವಾಸಯೋಗ್ಯ ಪ್ರಮಾಣ ಪತ್ರ ಹಾಗೂ ಮನೆ ನಿರ್ಮಾಣಕ್ಕಾಗಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ದೊರೆಯದೆ ಆಸ್ತಿ ಮಾಲೀಕರು ಸಂಕಷ್ಟ ಎದುರಿಸುವಂತಾಗಿತ್ತು. ಜತೆಗೆ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಾಣವಾಗುವ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಬಿ ಖಾತಾ ಸ್ವತ್ತುಗಳಿಗೆ ಎ ಖಾತಾ ನೀಡಲು ಪಾಲಿಕೆ ಮುಂದಾಗಿದೆ.

ನಗರದಲ್ಲಿ ಸುಮಾರು 3.80 ಲಕ್ಷ “ಬಿ’ ಖಾತಾ ಸ್ವತ್ತುಗಳಿದ್ದು, ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಜಿಲ್ಲಾಡಳಿತದಿಂದ ಪರಿವರ್ತನೆ ಮಾಡದ ಮತ್ತು ಸಂಬಂಧಿಸಿದ ಪ್ರಾಧಿಕಾರದಿಂದ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಾಣಗೊಂಡಿರುವ ಬಡಾವಣೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಂತಹ ಬಡಾವಣೆಗಳಲ್ಲಿ ನಿವೇಶನ ಖರೀದಿಸಿರುವ ಸಾರ್ವಜನಿಕರು, ಬ್ಯಾಂಕ್‌ಗಳಿಂದ ಗೃಹ ದೊರೆಯದೆ ಹೆಣಗಾಡುತ್ತಿದ್ದಾರೆ.

“ಎ’ ಖಾತಾ ಸಿಕ್ಕರೆ ಹಲವು ಸೌಲಭ್ಯ: ಪಾಲಿಕೆಯಿಂದ ಎ ಖಾತಾ ನೀಡುವ ನಿರ್ಧಾರಕ್ಕೆ ಸರ್ಕಾರ ಅನುಮೋದನೆ ನೀಡಿದರೆ ಬಿ ಖಾತಾ ಆಸ್ತಿದಾರರಿಗೂ ಬ್ಯಾಂಕ್‌ ಸಾಲ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಕಟ್ಟಡ ನಕ್ಷೆ ಮಂಜೂರಾತಿ ಮತ್ತು ವಾಸಯೋಗ್ಯ ಪ್ರಮಾಣಪತ್ರ ದೊರೆಯಲಿದೆ. ಹಿಂದೆ ಪಾಲಿಕೆಯಿಂದ ಇಂತಹ ಆಸ್ತಿಗಳಿಗೂ ಎ ಖಾತಾ ನೀಡಲಾಗಿತ್ತಾದರೂ, 2008ರಲ್ಲಿ ಇಂತಹ ಆಸ್ತಿಗಳಿಗೆ “ಎ’ ಖಾತಾ ವಿತರಣೆಯನ್ನು ಸ್ಥಗಿತಗೊಳಿಸಲಾಗಿತ್ತು.

Advertisement

ಅಧಿಕಾರಿಗಳ ವಾದವೇನು?: ಬಿಬಿಎಂಪಿ ವ್ಯಾಪ್ತಿಗೆ 2008ರಲ್ಲಿ ಸೇರ್ಪಡೆಯಾದ 600 ಚದರ ಕಿ.ಮೀ ಪ್ರದೇಶದಲ್ಲಿ “ಬಿ’ ಸ್ವತ್ತುಗಳ ಸಂಖ್ಯೆ ಹೆಚ್ಚಾಗಿದೆ. ಕೃಷಿಯಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಯಾಗದ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಂದ ನಕ್ಷೆ ಮಂಜೂರಾತಿ ಪಡೆಯದ ಬಡಾವಣೆಗಳು ಇಲ್ಲಿ ಹೆಚ್ಚಿವೆ. ನಿಯಮದಂತೆ ಈ ಬಡಾವಣೆಗಳು ಅನಧಿಕೃತ ಎನ್ನಲಾಗಿದ್ದರೂ, ಆಸ್ತಿ ತೆರಿಗೆ ಸಂಗ್ರಹಕ್ಕಾಗಿ “ಬಿ’ ಖಾತೆ ನೀಡಲಾಗಿದೆ. ಇದರಿಂದ ಜನರು ಎಲ್ಲೆಂದರಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದು, ಪಾಲಿಕೆಯಿಂದ ರಸ್ತೆ, ಬೀದಿ ದೀಪದಂತಹ ವ್ಯವಸ್ಥೆ ಮಾಡಲಾಗಿದೆ. ಆದರೆ, ಅವರ ಬಳಿ ಎ ಖಾತಾ ಇಲ್ಲದಿರುವುರಿಂದ ಅಭಿವೃದ್ಧಿ ಶುಲ್ಕ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಸಾವಿರಾರು ಕೋಟಿ ಆದಾಯ: ಪಾಲಿಕೆ ವ್ಯಾಪ್ತಿಯಲ್ಲಿನ ಬಿ ಖಾತಾ ಸ್ವತ್ತುಗಳಿಗೆ ಎ ಖಾತಾ ನೀಡಲು ಸರ್ಕಾರ ಅನುಮೋದನೆ ನೀಡಿದರೆ ಆಸ್ತಿ ಮಾಲೀಕರು ಪಾಲಿಕೆಗೆ ಅಭಿವೃದ್ಧಿ ಶುಲ್ಕ ಪಾವತಿಸಬೇಕಾಗುತ್ತದೆ. ಇದರಿಂದಾಗಿ ಪಾಲಿಕೆಗೆ 1000-1500 ಕೋಟಿ ರೂ. ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ.

ಎರಡೂ ಖಾತೆಗಳ ನಡುವಿನ ಹೋಲಿಕೆ: “ಎ’ ಖಾತೆ: ಕೃತಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಿದ ಮತ್ತು ಬಿಡಿಎ, ಬಿಎಂಆರ್‌ಡಿಎ ಸೇರಿ ಇತರೆ ಪ್ರಾಧಿಕಾರಗಳಿಂದ ನಕ್ಷೆ ಮಂಜೂರಾತಿ ಪಡೆದು ನಿರ್ಮಿಸಿದ ಬಡಾವಣೆಗಳು, ಅಪಾರ್ಟ್‌ಮೆಂಟ್‌ಗಳಿಗೆ “ಎ’ ಖಾತೆ ನೀಡಲಾಗುತ್ತದೆ. ಕ್ರಯಪತ್ರ, ತೆರಿಗೆ ಪಾವತಿ ದಾಖಲೆ, ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪ್ರಮಾಣ ಪತ್ರ, ಭೂ ಪರಿವರ್ತನೆಯಾದ ದಾಖಲೆ ಒದಗಿಸಿದರೆ ಎ ಖಾತೆ ನೀಡಲಾಗುತ್ತದೆ.

“ಬಿ’ ಖಾತೆ: ಭೂ ಪರಿವರ್ತನೆಯಾಗದ ಕಂದಾಯ ಭೂಮಿಯಲ್ಲಿರುವ ನಿವೇಶನಗಳು, ಮನೆಗಳಿಗೆ ಬಿ ಖಾತೆ ನೀಡಲಾಗುತ್ತದೆ. ಬಿಬಿಎಂಪಿ, ಬಿಡಿಎ, ಬಿಎಂಆರ್‌ಡಿಎ ವತಿಯಿಂದ ಅನುಮತಿ ಪಡೆಯದೆ ನಿಯಮ ಉಲ್ಲಂ ಸಿದ ನಿರ್ಮಿಸಿದ ಬಡಾವಣೆಗಳಲ್ಲಿನ ನಿವೇಶನಗಳಿಗೆ ಎ ಖಾತೆ ನೀಡುವುದಿಲ್ಲ. ಆಸ್ತಿ ತೆರಿಗೆ ಸಂಗ್ರಹಕ್ಕಾಗಿ ಮಾತ್ರ ಬಿ ಖಾತೆ ನೀಡಲಾಗುತ್ತದೆ. ಬಿ ಖಾತೆ ಸ್ವತ್ತುಗಳಿಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ, ಕಟ್ಟಡ ನಕ್ಷೆ ಮಂಜೂರಾತಿ ದೊರೆಯುವುದಿಲ್ಲ.

ನಿವೇಶನ ವಿಸ್ತೀರ್ಣಕ್ಕೆ ತಕ್ಕಂತೆ ಶುಲ್ಕ (ಅಂದಾಜು)
ಅಳತೆ ಅಭಿವೃದ್ಧಿ ಶುಲ್ಕ (ರೂ.ಗಳಲ್ಲಿ)
-20/30 9,000
-30/40 18,000
-40/60 36,000

ಪಾಲಿಕೆಯ ವ್ಯಾಪ್ತಿಯ ಬಿ ಖಾತಾ ಸ್ವತ್ತುಗಳಿಗೆ ಎ ಖಾತಾ ನೀಡುವ ಸಂಬಂಧ ಸರ್ಕಾರದ ಅಡ್ವೊಕೇಟ್‌ ಜನರಲ್‌ರ ಅಭಿಪ್ರಾಯ ಪಡೆದು, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ತೆರವಾದ ನಂತರ ಸರ್ಕಾರದಿಂದ ಅನುಮೋದನೆ ದೊರೆಯುವ ಸಾಧ್ಯತೆಯಿದೆ.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next