Advertisement

ಫಾಸ್ಟ್‌ ಆ್ಯಂಡ್‌ ಪೊಲೀಸ್‌:ಡಿಜಿಟಲ್‌ ಹಾದಿಯಲ್ಲಿ ಕ್ವಿಕ್‌ ಖಾಕಿ

04:11 PM Jul 22, 2017 | |

 ಬೆಂಗ್ಳೂರು ಸಿಟಿ ಪೊಲೀಸ್‌ಗೆ ಸೋಷಿಯಲ್‌ ಮೀಡಿಯಾ ಸಾಥ್‌,ದೂರು ಪೋಸ್ಟ್‌ ಮಾಡಿದ ಹತ್ತೇ ನಿಮಿಷದಲ್ಲಿ ಪೊಲೀಸರು ಹಾಜರ್‌!

Advertisement

ಘಟನೆ 1
ಎಂಜಿ ರಸ್ತೆ

ಮಧ್ಯರಾತ್ರಿ 2ರ ಆಸುಪಾಸು. ಮಹಿಳೆ ಒಬ್ಬಳೇ ನಿಂತಿದ್ದಾಳೆ. ಯಾವ ಕ್ಯಾಬ್‌ ಕೂಡ ಸಿಗ್ತಾ ಇಲ್ಲ. ಸುರಕ್ಷಾ ಆ್ಯಪ್‌ನಲ್ಲಿ ಆಕೆ, “ನನಗೆ ಭಯ ಆಗ್ತಿದೆ. ಕ್ಯಾಬ್‌ಗಳು ಸಿಗ್ತಾ ಇಲ್ಲ. ಪ್ಲೀಸ್‌ ಹೆಲ್ಪ್ ಮಿ’ ಅಂತ ಟೈಪಿಸಿ ಪೋಸ್ಟ್‌ ಮಾಡಿದ್ದಷ್ಟೇ… ಐದೇ ನಿಮಿಷದಲ್ಲಿ ಆಕೆಯ ಎದುರು “ಹೊಯ್ಸಳ’ ವ್ಯಾನ್‌ ಪ್ರತ್ಯಕ್ಷ! ಪೊಲೀಸರೇ ಆಕೆಗೆ ಮನೆಯ ತನಕ ಡ್ರಾಪ್‌ ಕೊಟ್ಟರು!

ಘಟನೆ 2
ಬಸವನಗುಡಿ
ಬಸ್‌ಸ್ಟಾಂಡಿನಲ್ಲಿ ಒಬ್ಬಳು ಸುಂದರ ಹುಡುಗಿ. ಒಬ್ಬ ಹುಡುಗ ಬಂದು ಆಕೆಗೆ ಪ್ರೀತ್ಸು ನನ್ನ ಅಂತ ಕೈಕೈ ಹಿಡಿದು ಗಲಾಟೆ ಮಾಡ್ತಿದ್ದಾನೆ. ಅದನ್ನೇ ನೋಡ್ತಿದ್ದ ಒಬ್ಬ ವ್ಯಕ್ತಿ, ಫೋಟೋ ಸಹಿತ “ನಮ್ಮ 100′ ಆ್ಯಪ್‌ನಲ್ಲಿ ಈ ಬಗ್ಗೆ ಕಂಪ್ಲೇಂಟ್‌ ಮಾಡಿದ್ದಾನೆ. ತಕ್ಷಣ ಪೊಲೀಸರು ಬಂದು ಆಕೆಯನ್ನು ರಕ್ಷಿಸಿದ್ದಾರೆ.

ಇವೆಲ್ಲ ಸಲ್ಮಾನ್‌ಖಾನ್‌ನ “ದಬಾಂಗ್‌’ ಸಿನಿಮಾದಲ್ಲಿ ಇರೋ ದೃಶ್ಯಗಳಲ್ಲ. ಬೆಂಗ್ಳೂರು ನಗರ ಪೊಲೀಸರ “ಸ್ಪೀಡ್‌ ಆ್ಯಂಡ್‌ ಲೈವ್‌’ ಕೆಪಾಸಿಟಿ ಇದು! ಸೋಷಿಯಲ್‌ ಮೀಡಿಯಾವನ್ನೇ ಸೇತುವೆ ಮಾಡಿಕೊಂಡು ಜನರನ್ನು ರಕ್ಷಿಸುವ ನಗರ ಪೊಲೀಸ್‌, ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸಾéಪ್‌ಗ್ಳಲ್ಲಿಯೇ ಹಲವು ಪ್ರಕರಣಗಳನ್ನು ಬೆನ್ನತ್ತುತ್ತಿದೆ.

ಪೊಲೀಸ್‌ ಅಂದ್ರೆ ಬೆಚ್ಚುವ ಕಾಲ ಸರಿದಿದೆ. “ಏನೋ..? ಹೇಳ್ಳೋ… ಕಂಪ್ಲೇಂಟ್‌ ಬರೆದು ಕೊಟ್‌ ಹೋಗು ಸಾಕು, ಜಾಸ್ತಿ ಮಾತು ಬೇಡ’ ಎನ್ನುವಂಥ ಪೊಲೀಸರ ಡೈಲಾಗ್‌ಗಳೂ ಈಗ ಬಹುತೇಕ ಕಡಿಮೆ. ಕೇವಲ ಪೊಲೀಸ್‌ ಠಾಣೆಗಳಲ್ಲಿ ಮಾತ್ರ ಕುಳಿತು ದೂರು ಸ್ವೀಕರಿಸುವ, “100′ ಕರೆಯನ್ನಷ್ಟೇ ಸ್ವೀಕರಿಸಿ ವಿಚಾರಣೆ ನಡೆಸುವ ಕಾಲದಿಂದ ಆಚೆಗೊಂದು “ಡಿಜಿಟಲ್‌’ ಅಲೆ ಎದ್ದಿದೆ. ಅಲ್ಲಿ ಪೊಲೀಸರು ಜನರಿಗೆ ಕ್ಲೋಸ್‌ ಫ್ರೆಂಡ್‌. ಅವರದ್ದೇ ವಾಟ್ಸಾéಪ್‌ ಗ್ರೂಪ್‌, ಫೇಸ್‌ಬುಕ್‌ ಪೇಜ್‌ ಇರುತ್ತೆ. ಆ್ಯಪ್‌ಗ್ಳಲ್ಲಿ ಬರುವ ದೂರು ದಾಖಲಿಸಿದ ಹತ್ತೇ ನಿಮಿಷದಲ್ಲಿ ಅವರು ಸ್ಥಳಕ್ಕೆ ಹೋಗ್ತಾರೆ! ಇವೆಲ್ಲ ಸಾಮಾಜಿಕ ಜಾಲತಾಣಗಳು 24 ಗಂಟೆ ಕೆಲಸ ಮಾಡುತ್ತವೆ.

Advertisement

ಆ್ಯಪ್‌ನಲ್ಲಿ ಆಪ್ತರಕ್ಷಕರು!
ಬಿಟಿಪಿ ಪಬ್ಲಿಕ್‌ ಐ: ಟ್ರಾಫಿಕ್‌ ನಿಯಮ ಮುರಿಯುವವರಿಗೆ ಟ್ರಾಫಿಕ್‌ ಪೊಲೀಸಸರು ರಚಿಸಿರುವ ಆ್ಯಪ್‌ ಇದು. ರಸ್ತೆ ಅಪಘಾತ, ಟ್ರಾಫಿಕ್‌ನಲ್ಲಿ ಆ್ಯಂಬುಲೆನ್ಸ್‌ ಸಿಲುಕಿದ್ದರೂ ಇಲ್ಲಿ ಸಾರ್ವಜನಿಕರು ದೂರು ನೀಡಬಹುದು. ಇಲ್ಲಿಯತನಕ ಇದರಲ್ಲಿ 75,000 ದೂರುಗಳು ದಾಖಲಾಗಿವೆ. 55 ಸಾವಿರಕ್ಕಿಂತಲೂ ಅಧಿಕ ಮಂದಿ ಮೇಲೆ ಪ್ರಕರಣ ದಾಖಲಾಗಿದೆ. ಬೆಂಗ್ಳೂರು ಸಿಟಿ ಪೊಲೀಸರ ಈ ಆ್ಯಪ್‌ ಜಾಗತಿಕ ಮಟ್ಟದ “ಜಿಮಾಸಾ’ ಪ್ರಶಸ್ತಿ ಗಿಟ್ಟಿಸಿಕೊಂಡಿದೆ.

ಬಿ ಸೇಫ್: ಇದು ವೈಯುಕ್ತಿಕ ಸುರಕ್ಷಾ ಆ್ಯಪ್‌. ಜನನಿಬಿಡ ರಸ್ತೆಗಳಲ್ಲಿ ನಡೆದು ಹೋಗುವಾಗ ದುರ್ಘ‌ಟನೆಗಳು ಸಂಭವಿಸಿದರೆ, ಈ ಆ್ಯಪ್‌ ಮೂಲಕ ಪೊಲೀಸರನ್ನು ಸಂಪರ್ಕಿಸಬಹುದು. ಬೆಂಗ್ಳೂರಲ್ಲಿ ದಾರಿ ತಪ್ಪಿದರೆ, ಸರಿಯಾದ ರಸ್ತೆ ಮಾರ್ಗ ಗೊತ್ತಿಲ್ಲದಿದ್ದರೆ ಈ ಆ್ಯಪ್‌ನಲ್ಲಿ ಮಾರ್ಗವನ್ನು ಹುಡುಕಿಕೊಳ್ಳಹುದು.

ನೌ ಯುವರ್‌ ಪೊಲೀಸ್‌ ಸ್ಟೇಷನ್‌: ನಿಮ್ಮ ಸಮೀಪದ ಪೊಲೀಸ್‌ ಸ್ಟೇಷನ್‌ಗಳ ಬಗ್ಗೆ ಮಾಹಿತಿ ಇಲ್ಲಿರುತ್ತೆ. ಒಂದು ವೇಳೆ ನೀವಿರುವ ಸ್ಥಳದಲ್ಲಿ ಯಾವುದಾದರೂ ಆಪರಾಧ ನಡೆದರೆ, ಆ ಸ್ಥಳ ಯಾವ ಪೊಲೀಸ್‌ ಠಾಣಾ ವ್ಯಾಪ್ತಿಗೆ ಸೇರುತ್ತದೆ ಎಂಬ ಮಾಹಿತಿ ನೀಡುತ್ತದೆ. ಘಟನೆಯನ್ನು ಅÂಪ್‌ ಮೂಲಕ ಟ್ಯಾಗ್‌ ಮಾಡಿದರೆ, ಸ್ಥಳಕ್ಕೆ ಹೊಯ್ಸಳ ಪೊಲೀಸ್‌ ತಂಡ ಬರುತ್ತೆ. ಠಾಣೆಗೇ ಹೋಗಿ ದೂರು ನೀಡಬೇಕಂತಿಲ್ಲ.

ನಮ್ಮ 100 ಆ್ಯಪ್‌:  ಆಪರಾಧ ಅಥವಾ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ “100′ ಸಂಖ್ಯೆಗೆ ಕರೆ ಮಾಡಿ, ಘಟನೆಯನ್ನು ವಿವರಿಸಿದರೆ ದೂರು ದಾಖಲಾಗುತ್ತದೆ. ನೀವಿದ್ದಲ್ಲಿಗೆ ಸಂಬಂಧಪಟ್ಟ ಹೊಯ್ಸಳ ಪೊಲೀಸ್‌ ತಂಡ ಬರುತ್ತೆ. ಇನ್ನು ಇದರದ್ದೇ “ನಮ್ಮ 100 ಆ್ಯಪ್‌’ನಲ್ಲಿ ಅಪರಾಧ, ದೌರ್ಜನ್ಯ, ಕಳವು, ನಾಪತ್ತೆ ಇತ್ಯಾದಿ ದೂರುಗಳನ್ನು ಈ ಆ್ಯಪ್‌ನಲ್ಲಿ ನೀಡಬಹುದು. ದೂರು ನೀಡಿದ ಕ್ಷಣಾರ್ಧದಲ್ಲೇ ಸಂಬಂಧಿತ ವ್ಯಾಪ್ತಿ ಪೊಲೀಸರಿಗೆ ಮಾಹಿತಿ ರವಾನೆಯಾಗಿ, ಖಾಕಿ ತಂಡದ ನೆರವು ಪಡೆಯಬಹುದು.

ಇ -ಲಾಸ್ಟ್‌ ಆ್ಯಂಡ್‌ ರಿಪೋರ್ಟ್‌: ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್‌, ರಿಜಿಸ್ಟೇಷನ್‌ ಸಂಬಂಧಿತ ದಾಖಲೆ, ಅಂಕಪಟ್ಟಿ ಮುಂತಾದ ದಾಖಲೆಗಳನ್ನು ಸಾರ್ವಜನಿಕ ಸ್ಥಳದಲ್ಲಿ ಕಳೆದುಕೊಂಡಾಗ ಈ ಆ್ಯಪ್‌ ಮೂಲಕ ದೂರು ನೀಡಬಹುದು. ಇಲ್ಲಿ ಕೆಲವು ಮಾಹಿತಿಗಳನ್ನು ಭರ್ತಿ ಮಾಡಿ, ದೂರು ನೀಡಬೇಕಾಗುತ್ತದೆ. ದೂರು ದಾಖಲಾದ ನಂತರ ನಿಮ್ಮ ಮೊಬೈಲ್‌ಗೆ ಸಂದೇಶ ಬರುತ್ತೆ. ಸ್ವೀಕೃತಿ ರಸೀದಿಯೂ ಸಿಗುತ್ತೆ.

ಸುರಕ್ಷಾ: ವಿಶೇಷವಾಗಿ ಹೆಣ್ಣು ಮಕ್ಕಳ ಸುರಕ್ಷೆಗೆ ಇರುವ ಆ್ಯಪ್‌ ಇದು. ಯಾವುದೇ ಸ್ಥಳದಲ್ಲಿ ಆಪಾಯದಲ್ಲಿ ಸಿಲುಕಿರುವ ಮಹಿಳೆಯು ತನ್ನ ಸಮಸ್ಯೆ ಕುರಿತು ಆ್ಯಪ್‌ನಲ್ಲಿ ದೂರು ನೀಡಿದರೆ, ಕಮಾಂಡ್‌ ಸೆಂಟರ್‌ ಅದನ್ನು ಸ್ವೀಕರಿಸಿ, ಸಮೀಪದ ಠಾಣೆಗೆ ತಿಳಿಸುತ್ತದೆ. ಸ್ಥಳಕ್ಕೆ ಹೊಯ್ಸಳ ಅಥವಾ ಪಿಂಕ್‌ ಹೊಯ್ಸಳ ಬರುತ್ತೆ.

ಫೇಸ್‌ಬುಕ್‌
@BlrCityPolice
ಬೆಂಗಳೂರು ಸಿಟಿ ಪೊಲೀಸ್‌ ಫೇಸ್‌ಬುಕ್‌ ಫಾಲೋ ಮಾಡಿ, ಅಲ್ಲಿಯೂ ಸಮಸ್ಯೆ ಹೇಳಿಕೊಂಡರೆ, ಪೊಲೀಸರು ನೆರವಾಗುತ್ತಾರೆ.

ಟ್ವಿಟ್ಟರ್‌
@BlrCityPolice, @blrcitytraffic ಟ್ವಿಟ್ಟರ್‌ ಪೇಜ್‌ ಸೇರಿದಂತೆ ನಿಮ್ಮ ಹತ್ತಿರದ ಸಬ್‌ಇನ್ಸ್‌ಪೆಕ್ಟರ್‌ಗಳ ಟ್ವಿಟ್ಟರ್‌ ಪೇಜ್‌ ಫಾಲೋ ಮಾಡಿದರೆ ನಿಮಗೆ ಅನುಕೂಲವೇ ಆಗಲಿದೆ. ಏನೇ ದೂರುಗಳು ಇದ್ದರೂ ಅದನ್ನು ಟ್ವಿಟ್ಟರಿನಲ್ಲಿ ಬರೆದು, ಈ ಮುಂಚೆ ತಿಳಿಸಿದ ಪೇಜ್‌ಗೆ ಟ್ಯಾಗ್‌ ಮಾಡಿದರೆ, ಪೊಲೀಸ್‌ ಕೂಡಲೇ ಕ್ರಮ ದಾಖಲಿಸುತ್ತದೆ. ಇಲ್ಲವೇ ಬೆಂಗ್ಳೂರು ಪೊಲೀಸ್‌ ಕಮಿಷನರ್‌ ಪ್ರವೀಣ್‌ ಸೂದ್‌ ಅವರಿಗೂ ನೇರವಾಗಿ ಟ್ಯಾಗ್‌ ಮಾಡಬಹುದು.

ಯೂಟ್ಯೂಬ್‌ನ “ಕಾಫಿ ವಿತ್‌ ಕಾಪ್‌’
ಇದು ಇತ್ತೀಚೆಗೆ ಆರಂಭವಾದ ಯೂಟ್ಯೂಬ್‌ ವಿಡಿಯೋ ಸರಣಿ. ಕಮ್ಯುನಿಟಿ ಪೊಲಿಸಿಂಗ್‌ ಕಮಿಷನ್‌ ಇದನ್ನು ಆಯೋಜಿಸುತ್ತಿದೆ. ಇಲ್ಲಿ ಬೆಂಗ್ಳೂರು ಪೊಲೀಸ್‌ ಕಮಿಷನರ್‌ ಪ್ರವೀಣ್‌ ಸೂದ್‌ ಜತೆ ಸಾರ್ವಜನಿಕರು ತಮ್ಮ ಅನಿಸಿಕೆ, ಅಹವಾಲುಗಳನ್ನು ಹಂಚಿಕೊಳ್ಳಬಹುದು. ಇದಲ್ಲದೆ, ಬೆಂಗ್ಳೂರು ಪೊಲೀಸರ “ಬಿಸಿಪಿಟಿವಿ’ ಯೂಟ್ಯೂಬ್‌ ಚಾನೆಲ್‌ ಕೂಡ ಇದೆ. ಇಲ್ಲಿ ಸಾರ್ವಜನಿಕರು ಸುರಕ್ಷಾ ಜಾಗೃತಿಗಳನ್ನು ನಿರೀಕ್ಷಿಸಬಹುದು. 

ವಾಟ್ಸಾಪ್‌
9480801000 ಸಂಖ್ಯೆಗೆ ಯಾರೇ ದೂರುಗಳನ್ನು ವಾಟ್ಸಾಪ್‌ ಮಾಡಿದರೆ, ಇದರ ನಿರ್ವಾಹಕ ಪೊಲೀಸ್‌ ಸಿಬ್ಬಂದಿ ತಕ್ಷಣ ಇದರ ಸ್ಕ್ರೀನ್‌ಶಾಟ್‌ ತೆಗೆದು, ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ಕಳುಹಿಸುತ್ತಾರೆ. ಕೂಡಲೇ ಸಮೀಪದ ಠಾಣೆಯ ಪೊಲೀಸರು ಬರುತ್ತಾರೆ.

ಬೆಂಗ್ಳೂರು ಸಿಟಿ ಪೊಲೀಸ್‌ನಫಾಲೋವರ್ಸ್‌ ಎಷ್ಟು ಗೊತ್ತಾ?
ಫೇಸ್‌ಬುಕ್‌- 5.95 ಲಕ್ಷ
ಟ್ವಿಟ್ಟರ್‌- 11.10 ಲಕ್ಷ
ಇನ್‌ಸ್ಟಗ್ರಾಮ್‌- 5,800

ಬೆಂಗ್ಳೂರಿನಲ್ಲಿ ಸರಿಸುಮಾರು 25 ಲಕ್ಷ ಮಂದಿ ಸಕ್ರಿಯರಾಗಿ ಸೋಷಿಯಲ್‌ ಮೀಡಿಯಾದಲ್ಲಿದ್ದಾರೆ. ಜಾಲತಾಣಿಗರ ಈ ದೊಡ್ಡ ಅಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಡಿಜಿಟಲ್‌ ಹಾದಿಯಲ್ಲಿ ಸಾಗುತ್ತಿದ್ದೇವೆ. ಲಂಡನ್‌ ಮಾದರಿ ಭದ್ರತೆ ನೀಡುವ ಉದ್ದೇಶ ನಮ್ಮದು.
– ಪ್ರವೀಣ್‌ ಸೂದ್‌, ನಗರ ಪೊಲೀಸ್‌ ಆಯುಕ್ತ

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next