ಕಲಬುರಗಿ: ಮುಂಬರುವ ಎರಡು ವರ್ಷದೊಳಗೆ 16,000 ಪೊಲೀಸ್ ಪೇದೆಗಳು ಹಾಗೂ 630 ಪಿಎಸ್‌ಐಗಳ ನೇಮಕಾತಿ ಮಾಡಿಕೊಳ್ಳಲಾಗುವುದು. ಈಗಾಗಲೇ 6,000 ಪೇದೆಗಳ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಕುರಿತು ಹೈಕೋರ್ಟ್‌ಗೂ ಮಾಹಿತಿ ಸಲ್ಲಿಸಲಾಗಿದ್ದು, ಹಣಕಾಸು ಇಲಾಖೆ ಸಹ ಒಪ್ಪಿಗೆ ಸೂಚಿಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಲ್ಲಿನ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ 9ನೇ ತಂಡದ ಪಿಎಸ್‌ಐ ಪ್ರಶಿಕ್ಷಣಾ ರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕಾರ ಹಾಗೂ ಬಹು ಮಾನ ವಿತರಿಸಿ ಅವರು ಮಾತನಾಡಿದರು.
ಪಿಎಸ್‌ಐಗಳ ನೇಮಕ ಹಾಗೂ ಬಡ್ತಿಯಲ್ಲಿ 371ಜೆ ವಿಧಿ ಬಳಕೆಯಾಗದೇ ಇರುವುದು ಹಾಗೂ 371ನೇ ವಿಧಿಯಡಿ ಪ್ರಮಾಣ ಪತ್ರ ದುರ್ಬಳಕೆ ಮಾಡಿರುವ ಕುರಿತಾಗಿ ಮರು ಪರಿಶೀಲಿಸಿ, ಸಾಧ್ಯವಾ ದರೆ ಮರು ತನಿಖೆಗೆ ಆದೇಶಿಸಲಾಗುವುದು. ಪೊಲೀಸ್ ಇಲಾಖೆ ಸುಧಾರಣೆಗೆ ದೃಢ ಹೆಜ್ಜೆ ಇಡಬೇಕಾಗಿದೆ. ಹೀಗಾಗಿ ಬರುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾ ಗುವುದು. ಉಡುಪಿಯಲ್ಲಿ ಹೊಸದಾಗಿ ಪೊಲೀಸ್ ತರ ಬೇತಿ ಶಾಲೆ ತೆರೆಯ ಲಾಗುವುದು ಎಂದರು.
ತರಬೇತಿಯಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಕಲಬುರಗಿ ಸೇರಿ ರಾಜ್ಯದ 14 ಪೊಲೀಸ್ ತರಬೇತಿ ಮಹಾವಿದ್ಯಾಲಯ ಹಾಗೂ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಸುಧಾರಣೆ ಮೊದಲ ಹೆಜ್ಜೆಯಾಗಿ ಮೈಸೂರು ಪಿಟಿಸಿ ಯನ್ನು ಸೆಂಟರ್ ಆಫ್ ಎಕ್ಸ್‌ಲೆನ್ಸ್ ಮಾಡಲಾಗುವುದು. ಪೊಲೀಸ್ ಇಲಾಖೆಯ 12 ಹಾಗೂ ಕೆಎಸ್‌ಆರ್‌ಪಿಯ 2 ತರಬೇತಿ ಮಹಾವಿದ್ಯಾಲಯಗಳನ್ನು ಹಂತ-ಹಂತವಾಗಿ ಉನ್ನತಿಕರಣಗೊಳಿಸಲಾಗುವುದು ಎಂದರು. ಈಗಿರುವ ತರಬೇತಿಯಲ್ಲೂ ಬದಲಾವಣೆ ತರಲಾಗುವುದು.
ಬಹು ಮುಖ್ಯವಾಗಿ ಇತ್ತೀಚೆಗೆ ಸೈಬರ್ ಕ್ರೈಂ ಹೆಚ್ಚುತ್ತಿ ರುವುದರಿಂದ ತರಬೇತಿ ಅವಧಿಯಲ್ಲಿ ಪೊಲೀಸರಿಗೆ ಇ-ಲರ್ನಿಂಗ್, ಇ- ಪೊಲೀಸಿಂಗ್ ಕುರಿತು ತರಬೇತಿ ನೀಡಲಾಗುವುದು. ಫಾರೆನಿಕ್ಸ್ ಪತ್ತೆ, ಭದ್ರತೆ, ಸಂಚಾರ ನಿರ್ವ ಹಣೆಯಲ್ಲಿ ವೃತ್ತಿಪರತೆ ಹೆಚ್ಚಿಸಲು ರಾಜ್ಯದ ಪೊಲೀಸರಿಗೆ ಅಮೆರಿಕ, ಸ್ಕಾಟ್‌ಲ್ಯಾಂಡ್ ಸೇರಿ ವಿದೇಶಗಳಿಗೆ ಕಳುಹಿಸಿ ಅಲ್ಲಿನ ಮಾದರಿ ಹಾಗೂ ತಾಂತ್ರಿಕ ತರಬೇತಿ ಸಹ ನೀಡಲಾಗುವುದು ಎಂದರು.
ಔರಾದಕರ್ ವರದಿಗೆ ಶೀಘ್ರ ಅಧಿಸೂಚನೆ: ಔರಾದಕರ್ ವರದಿ ಜಾರಿಗೆ ಸರ್ಕಾರ ಬದ್ಧವಿದೆ. ಈ ಕುರಿತು ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು. ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಜೈಲರ್ ಸಿಬ್ಬಂದಿಯನ್ನು ಹೊರಗಿಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಎರಡು ಸುತ್ತಿನ ಸಭೆ ನಡೆಸಿ ಇವರನ್ನೂ ಸೇರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.