ಎರಡು ವರ್ಷಗಳ ಹಿಂದೆ ಬಿಡುಗಡೆಯಾದ “ನಿರುತ್ತರ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕಿರಣ್ ಶ್ರೀನಿವಾಸ್, ಈಗ “ಒಂಥರಾ ಬಣ್ಣಗಳು’ ಎಂಬ ಹೊಸ ಚಿತ್ರದ ಮೂಲಕ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರವು ಈಗಾಗಲೇ ಸೆನ್ಸಾರ್ ಆಗಿದ್ದು, ಆಗಸ್ಟ್ 17ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್ ಮೂಲಕ ಕಾರ್ತಿಕ್ ಗೌಡ ಬಿಡುಗಡೆ ಮಾಡುತ್ತಿದ್ದಾರೆ.
“ಒಂಥರಾ ಬಣ್ಣಗಳು’ ಚಿತ್ರವು ಐದು ಪ್ರಮುಖ ಪಾತ್ರಗಳ ಸುತ್ತ ಸುತ್ತುತ್ತದೆ. ಕಿರಣ್ ಜೊತೆಗೆ ಪ್ರತಾಪ್ ನಾರಾಯಣ್, ಸೋನು, ಹಿತ ಚಂದ್ರಶೇಖರ್ ಮತ್ತು ಪ್ರವೀಣ್ ಈ ಪಾತ್ರಗಳನ್ನು ಮಾಡಿದರೆ, ಮಿಕ್ಕಂತೆ ಶರತ್ ಲೋಹಿತಾಶ್ವ, ದತ್ತಣ್ಣ, ಸಾಧು ಕೋಕಿಲ, ವೀಣಾ ಸುಂದರ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಯೋಗೀಶ್ ಬಿ. ದೊಡ್ಡಿ ನಿರ್ಮಿಸಿದರೆ, ಸುನೀಲ್ ಭೀಮರಾವ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಮನೋಹರ್ ಜೋಷಿ ಅವರ ಛಾಯಾಗ್ರಹಣ ಮತ್ತು ಬಿ.ಜೆ. ಭರತ್ ಅವರ ಸಂಗೀತ ಈ ಚಿತ್ರಕ್ಕಿದೆ. ಇದೊಂದು ಜರ್ನಿ ಕಥೆ ಎನ್ನುತ್ತಾರೆ ನಿರ್ದೇಶಕ ಸುನೀಲ್ ಭೀಮರಾವ್. ಐವರು ಸ್ನೇಹಿತರು ಬೆಂಗಳೂರಿನಿಂದ ಬಾದಾಮಿಯವರೆಗೂ ಪ್ರಯಾಣ ಮಾಡುವ ಮೂಲಕ ಚಿತ್ರ ಪ್ರಾರಂಭವಾಗುತ್ತದಂತೆ. “ಇದು ಬರೀ ಫಿಸಿಕಲ್ ಆದ ಪ್ರಯಾಣ ಅಲ್ಲ, ಎಮೋಷನಲ್ ಜರ್ನಿ ಸಹ ಇದೆ.
ಇಂದು ಬದುಕಿನ ಒತ್ತಡಗಳಿಂದ ಸ್ವಲ್ಪವಾದರೂ ಮುಕ್ತರಾಗಬೇಕು ಎಂದು ಎಲ್ಲರೂ ಒಂದು ಬ್ರೇಕ್ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಇಲ್ಲೂ ಐವರು, ಆ ಬಂಧನದಿಂದ ಮುಕ್ತವಾಗುವುದಕ್ಕೆ ಒಂದು ಟ್ರಿಪ್ ಹೋಗುತ್ತಾರೆ. ಮನಸ್ಸಿನಲ್ಲೇ ಹಲವು ಪ್ರಶ್ನೆಗಳನ್ನಿಟ್ಟುಕೊಂಡು, ಉತ್ತರ ಹುಡುಕಿಕೊಂಡು ಹೋಗುತ್ತಾರೆ. ಆ ಪ್ರಯಾಣದಲ್ಲಿ ಅವರಿಗೆ ಉತ್ತರ ಸಿಗುತ್ತದಾ ಮತ್ತು ಅವರೇನೇನು ಕಂಡುಕೊಳ್ಳುತ್ತಾರೆ’ ಎನ್ನುತ್ತಾರೆ ಸುನೀಲ್.
ಇಲ್ಲಿ ಪ್ರತಿಯೊಂದು ಪಾತ್ರವೂ ಒಂದೊಂದು ಬಣ್ಣದ್ದಂತೆ. ಹೀಗೆ ವಿಭಿನ್ನ ಬಣ್ಣಗಳನ್ನಿಟ್ಟುಕೊಂಡು “ಒಂಥರಾ ಬಣ್ಣಗಳು’ ಚಿತ್ರ ಮಾಡಿದ್ದಾರೆ ಅವರು. ಚಿತ್ರಕ್ಕೆ ಬೆಂಗಳೂರು, ಶಿವಮೊಗ್ಗ, ಸಾಗರ, ಸಿಗಂಧೂರು, ಬಾದಾಮಿ ಮುಂತಾದ ಹಲವು ಕಡೆ ಚಿತ್ರೀಕರಣ ಮಾಡಲಾಗಿದೆ. ಮೂರು ದಿನಗಳ ನಡೆಯುವ ಈ ಪ್ರಯಾಣದ ಕಥೆಗೆ 30ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.