ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದಲ್ಲಿ ವರಿಷ್ಠರು ನಮ್ಮನ್ನು ಕೇಳಿಲ್ಲ ಎಂದು ಪ್ರಶ್ನಿಸುವವರು ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಯಾಕೆ ಸುಮ್ಮನಿದ್ದರು ಎಂದು ಮಾಜಿ ಸಚಿವ ಎನ್.ಮುನಿರತ್ನ ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಮೈತ್ರಿ ವಿಚಾರದಲ್ಲಿ ಯಾರನ್ನೂ ಹೊರಗಿಟ್ಟಿಲ್ಲ. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವಾಗಲೂ ನಮ್ಮನ್ನು ಯಾರೂ ಕೇಳಿರಲಿಲ್ಲ. ಆದರೆ ಆಗ ಯಾರೂ ಮಾತನಾಡಿರಲಿಲ್ಲ. ಮೈತ್ರಿ ವಿಚಾರದಲ್ಲಿ ಈಗ ಯಾರು ಬೇಕಾದರೂ ಮಾತನಾಡಬಹುದಾಗಿದೆ. ವರಿಷ್ಠರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಬಿಜೆಪಿ ನಾಯಕರು ಪಕ್ಷ ಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ಯಾರನ್ನು ಬೇಕಾದರೂ ಪಕ್ಷಕ್ಕೆ ಕರೆದುಕೊಳ್ಳಲಿ. ದಯವಿಟ್ಟು ಅವರಿಗೆ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ಕೊಟ್ಟು ಗೆಲ್ಲಿಸುವ ಪ್ರಯತ್ನ ಮಾಡಬೇಕು. ನಮ್ಮ ಜತೆ ಇದ್ದವರು ನಮ್ಮವರೇ ಅಲ್ಲವಾ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಸೋಮಣ್ಣರಿಗೆ ಅನ್ಯಾಯವಾಗಿರುವುದು ನಿಜ. ಆದರೆ ಪಕ್ಷ ಸೂಕ್ತ ಸಮಯದಲ್ಲಿ ಸರಿಯಾದ ಅವಕಾಶ ಹಾಗೂ ಅಧಿಕಾರವನ್ನು ನೀಡುತ್ತದೆ. ಡಿಸಿಎಂ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿಗೆ ಹೋಗುತ್ತಾರೆಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿರುವುದು ನನಗೆ ಗೊತ್ತಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಗನಾಗಿರುವುದರಿಂದ ಅವರಿಗೆ ಮಾಹಿತಿ ಇರಬಹುದು. ನನಗೆ ಗೊತ್ತಿಲ್ಲ ಎಂದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರಿಗೆ ಟಿಕೆಟ್ ನೀಡಿದರೂ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿ ಗೆಲ್ಲಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.