Advertisement

ಕಲಬುರಗಿ: ಪಿಎಚ್.ಡಿ ಪ್ರಶ್ನೆ ಪತ್ರಿಕೆ ಬಹಿರಂಗ ಆರೋಪ; ನಾಲ್ಕನೇ ಬಾರಿ ಪರೀಕ್ಷೆ ಮುಂದೂಡಿಕೆ

10:25 AM Mar 13, 2020 | Suhan S |

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಮತ್ತೊಂದು ವಿವಾದವನ್ನು ಎಳೆದುಕೊಂಡಿದ್ದು, ಪಿಎಚ್.ಡಿ  ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಹಿರಂಗಗೊಳಿಸಿದ ಆರೋಪ ಕೇಳಿ ಬಂದಿದೆ. ಹೀಗಾಗಿ ಪರೀಕ್ಷೆಯನ್ನೇ ಮುಂದೂಡಿದೆ.

Advertisement

ಗುರುವಾರ ನಡೆದ ರಾಜ್ಯಶಾಸ್ತ್ರ ವಿಭಾಗದ 9 ಪಿಎಚ್‌.ಡಿ. ಸೀಟುಗಳಿಗೆ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಲಕೋಟೆಯಿಂದ ಬಿಚ್ಚದೆ ಹಾಗೆ ನೀಡಲಾಗಿದೆ ಎಂದು ಆರೋಪಿಸಿ ಅಭ್ಯರ್ಥಿಗಳು ಮೌಲ್ಯಮಾಪನ ಕುಲಸಚಿವರ ಕಚೇರಿ ಮುಂದೆ ದಿಢೀರನೆ ಪ್ರತಿಭಟನೆ ನಡೆಸಿ, ಕುಲ ಸಚಿವ ಪ್ರೊ.ಸಂಜೀವ ಕುಮಾರ್ ಗೆ ಮುತ್ತಿಗೆ ಹಾಕಿ, ಪರೀಕ್ಷಾ ಕೇಂದ್ರದಲ್ಲಿ ಲಕೋಟೆಯನ್ನು ಅಭ್ಯರ್ಥಿಗಳು ಮುಂದೆ ಬಿಚ್ಚಲ್ಲ. ಹೀಗಾಗಿ ಪರೀಕ್ಷೆಗೆ ಮುನ್ನವೇ ತಮಗೆ ಬೇಕಾದವರಿಗೆ ಪ್ರಶ್ನೆಪತ್ರಿಕೆ ನೀಡಿರುವ ಅನುಮಾನ ಇದೆ. ಪಾರದರ್ಶಕ ಪರೀಕ್ಷೆ ನಡೆಸುವಲ್ಲಿ ವಿವಿ ವಿಫಲವಾಗಿದೆ ಎಂದು ಪ್ರತಿಭಟನಾ ನಿರತ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

2 ಬಾರಿ ಮುಂದೂಡಿಕೆ ಆಗಿತ್ತು: ಪಿಎಚ್.ಡಿ. ಪರೀಕ್ಷೆ ಈ ಹಿಂದೆ ಎರಡು ಬಾರಿ ಮುಂದೂಡಿಕೆಯಾಗಿ ಗುರುವಾರ ಮೂರನೆಯ ಬಾರಿಗೆ ಪರೀಕ್ಷೆ ನಡೆಯುತ್ತಿತ್ತು. ಮೊದಲ ಬಾರಿ ಪ್ರವೇಶ ಪರೀಕ್ಷೆ ನಡೆದಾಗ ಪ್ರಶ್ನೆಪತ್ರಿಕೆಯನ್ನು ಕೇವಲ ಇಂಗ್ಲಿಷ್‌ ನಲ್ಲಿ ಕೊಡಲಾಗಿತ್ತು. ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ಇಲ್ಲದಿರುವ ಕಾರಣ ಟೀಕೆಗೆ ಗುರಿಯಾಗಿ ಮುಂದೂಡಲಾಗಿತ್ತು.

ಎರಡನೇ ಬಾರಿ ಪರೀಕ್ಷೆ ನಡೆಸಿದರೂ, ಕೀ ಉತ್ತರದಲ್ಲಿ ಸಾಕಷ್ಟು ತಪ್ಪಿದ್ದವು. ಆಗ ಕೀ ಉತ್ತರವನ್ನು ಸರಿಪಡಿಸುವ ಬದಲಿಗೆ ಪರೀಕ್ಷೆಯನ್ನು ರದ್ದು ಮಾಡಿತ್ತು. ಇದೀಗ ಮೂರನೇ ಬಾರಿಗೆ ಪ್ರಶ್ನೆ ಪತ್ರಿಕೆಯನ್ನು ಬಹಿರಂಗಗೊಳಿಸಿದ ಆರೋಪ ಕೇಳಿ ಬಂದಿದೆ.

ಈಗ ಮತ್ತೆ ಮುಂದೂಡಿಕೆ: ಪ್ರಶ್ನೆ ಪರೀಕ್ಷೆ ಬಹಿರಂಗವಾದ ಆರೋಪ ಹಿನ್ನೆಲೆಯಲ್ಲಿ ಯಾವ ಅಭ್ಯರ್ಥಿಗಳು ಪರೀಕ್ಷೆಗೆ ಕೂಡಲಿಲ್ಲ. ಕುಲಸಚಿವ ಪ್ರೊ.ಸಂಜೀವಕುಮಾರ್ ಅಭ್ಯರ್ಥಿಗಳ ಮನವೊಲಿಸಲು ಪ್ರಯತ್ನ ಪಟ್ಟರೂ ಪಟ್ಟ ಸಡಿಸಲಿಲ್ಲ. ಆದ್ದರಿಂದ ಗುರುವಾರ ನಡೆಯಬೇಕಿದ್ದ ಪರೀಕ್ಷೆಯನ್ನು  ಮುಂದೂಡಲಾಗುತ್ತದೆ ಎಂದು ಕುಲಸಚಿವರು ಪ್ರಕಟಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next