Advertisement

ಆಂತರಿಕ ಭದ್ರತೆ ಬಗ್ಗೆಯೂ ಮೂಡಿದ ಪ್ರಶ್ನೆ

11:43 AM Dec 06, 2018 | |

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಯೋಗಾಲಯದಲ್ಲಿ ನಡೆದ ಸ್ಫೋಟ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸದಾಶಿವನಗರ ಪೊಲೀಸರು ಪ್ರಯೋಗಾಲಯದ ಅಸುರಕ್ಷತೆ ಮತ್ತು ನಿರ್ಲಕ್ಷ್ಯ ಸೇರಿದಂತೆ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

Advertisement

ಈ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆಯ ಭದ್ರತಾ ಲೋಪದಿಂದ ಉಗ್ರರ ದಾಳಿ, ಚೀನಾ ಪ್ರಧಾನಿ ಆಗಮನದ ವೇಳೆ ಟಿಬೆಟಿಯನ್ನರ ಪ್ರತಿಭಟನೆಯಂತಹ ಘಟನೆಗಳು ನಡೆದಿತ್ತು. ಇದೀಗ ಸಂಸ್ಥೆಯ ಆವರಣದಲ್ಲಿರುವ ಪ್ರಯೋಗಾಲಯದಲ್ಲಿ ಸಿಲಿಂಡರ್‌ ಸ್ಫೋಟಗೊಂಡಿರುವ ಕಾರಣ ಸಂಸ್ಥೆಯ ಆತಂರಿಕ ಭದ್ರತೆ ಬಗ್ಗೆಯೂ ಪ್ರಶ್ನೆ ಮೂಡಿದೆ.

ಸಿಲಿಂಡರ್‌ ಸ್ಫೋಟಗೊಂಡಿರುವುದರಿಂದ ವಿಧಿವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ ಘಟನಾ ಸ್ಥಳದಲ್ಲಿ ದೊರೆತ ಕೆಲ ಮಹತ್ವದ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಹೀಗಾಗಿ ಎಫ್ಎಸ್‌ಎಲ್‌ ವರದಿ ಬಂದ ನಂತರ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದರು.

2005ರ ಉಗ್ರರ ದಾಳಿ: 2005ರ ಡಿಸೆಂಬರ್‌ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ ದೆಹಲಿಯ ಪ್ರೊಫೆಸರ್‌ವೊಬ್ಬರನ್ನು ಹತ್ಯೆಗೈದು, ನಾಲ್ವರನ್ನು ಗಾಯಗೊಳಿಸಿದ್ದರು. ಅದೇ ವರ್ಷ ವಿಜ್ಞಾನಿಗಳ ಜತೆ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ ಚೀನಾ ಪ್ರಧಾನಿಗೆ ಟೆಬಿಟಿಯನ್‌ ಸಮುದಾಯದವರು ಪ್ರತಿಭಟನೆಯ ಆಹ್ವಾನ ನೀಡಿದ್ದರು.

ಬಳಿಕ ಎಚ್ಚೆತ್ತುಕೊಂಡಿದ್ದ ವಿಜ್ಞಾನ ಸಂಸ್ಥೆ ಬಾಹ್ಯ ಭದ್ರತೆಯನ್ನು ಹೆಚ್ಚಿಸಿಕೊಂಡಿತ್ತು. ಆದರೆ, ಬುಧವಾರ ಹೈಪರ್‌ಸೋನಿಕ್‌ ಆ್ಯಂಡ್‌ ಶಾಕ್‌ವೆರ್‌ ಆಫ್ ಏರೋಸ್ಪೇಸ್‌ ಪ್ರಯೋಗಾಲಯದಲ್ಲಿ ಹೈಡ್ರೋಜನ್‌ ಸಿಲಿಂಡರ್‌ ಸ್ಫೋಟಗೊಂಡಿರುವುದು ಇತರೆ ವಿಭಾಗದ ವಿದ್ಯಾರ್ಥಿಗಳಲ್ಲಿ ಆತಂಕ ಹುಟ್ಟಿಸಿದೆ.

Advertisement

ಈ ಮೂಲಕ ಪ್ರಯೋಗಾಲಯಗಳಲ್ಲಿಯೂ ಸುರಕ್ಷತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ಸಂಸ್ಥೆಯ ಮುಖ್ಯಸ್ಥರನ್ನು ಪ್ರಶ್ನಿಸುವಂತಾಗಿದೆ. ಮತ್ತೂಂದೆಡೆ ಬುಧವಾರ ಸ್ಫೋಟದಲ್ಲಿ ಮೃತಪಟ್ಟ ಮನೋಜ್‌ ಕುಮಾರ್‌ ಕೂಡ ಪೋಷಕರ ಜತೆ ಪ್ರಯೋಗಾಲಯದಲ್ಲಿ ಹೇಳಿಕೊಳ್ಳುವಂತಹ ಸುರಕ್ಷತೆ ಇಲ್ಲದಿರುವ ಬಗ್ಗೆ ಚರ್ಚಿಸಿದ್ದರು ಎಂದು ಹೇಳಲಾಗಿದೆ.

ಪ್ರಯೋಗಾಲಯದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ ಹೈಡ್ರೋಜನ್‌ ಸಿಲಿಂಡರ್‌ ಸ್ಫೋಟಗೊಂಡು ಘಟನೆಯಲ್ಲಿ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ನಿಖರ ಕಾರಣ ಏನೆಂದು ಸದ್ಯಕ್ಕೆ ತಿಳಿದು ಬಂದಿಲ್ಲ. ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.
-ಬಿ.ಕೆ.ಸಿಂಗ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next