Advertisement

ಬ್ರಿಟನ್‌ ರಾಣಿಗೆ ಕಣ್ಣೀರ ಬೀಳ್ಕೊಡುಗೆ; ಪತಿ ಸಮಾಧಿ ಪಕ್ಕವೇ ಮಣ್ಣಾದ ರಾಣಿ 2ನೇ ಎಲಿಜಬೆತ್‌

12:34 AM Sep 20, 2022 | Team Udayavani |

ಲಂಡನ್‌: ಇಡೀ ಬ್ರಿಟನ್‌ನಲ್ಲಿ ಸೋಮವಾರ ನೀರವತೆ ಆವರಿಸಿತ್ತು, ವೆಸ್ಟ್‌ಮಿನ್‌ಸ್ಟರ್‌ ಅಬೇಯ ರಸ್ತೆಯ ಇಕ್ಕೆಲಗಳಲ್ಲೂ ಲಕ್ಷಾಂತರ ಮಂದಿ ನೆರೆದಿದ್ದರು. ಬರೋಬ್ಬರಿ 70 ವರ್ಷಗಳ ಕಾಲ ಬ್ರಿಟನ್‌ ಅನ್ನು ಆಳಿದ್ದ ರಾಣಿ 2ನೇ ಎಲಿಜಬೆತ್‌ ಅವರ ಪಾರ್ಥಿವ ಶರೀರದ ಮೆರವಣಿಗೆ ಸಾಗುತ್ತಿದ್ದಂತೆ “ಗಾಡ್‌ ಸೇವ್‌ ದಿ ಕಿಂಗ್‌’ ಎಂಬ ಉದ್ಘೋಷ ಮೊಳಗಿತ್ತು, ಎಲ್ಲರ ಕಣ್ಣಂಚಲ್ಲೂ ನೀರು ಜಿನುಗುತ್ತಿತ್ತು…

Advertisement

ಸೆ. 8ರಂದು ನಿಧನ ಹೊಂದಿದ ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಅವರ ಅಂತ್ಯಕ್ರಿಯೆ ಸೋಮವಾರ ನೆರವೇರಿದ್ದು, ವಿಶ್ವನಾಯಕರು ಸೇರಿದಂತೆ ಲಕ್ಷಾಂತರ ಮಂದಿಯ ಸಮ್ಮುಖದಲ್ಲಿ ರಾಣಿಯ ಪಾರ್ಥಿವ ಶರೀರವನ್ನು ವೆಸ್ಟ್‌ಮಿನ್‌ಸ್ಟರ್‌ ಹಾಲ್‌ನಿಂದ ವಿಂಡ್ಸರ್‌ ಕ್ಯಾಸಲ್‌ನ ಸೈಂಟ್‌ ಜಾರ್ಜ್‌ ಚಾಪೆಲ್‌ಗೆ ಮೆರವಣಿಗೆ ಮೂಲಕ ಒಯ್ದು, ಪತಿ ಪ್ರಿನ್ಸ್‌ ಫಿಲಿಪ್‌ ಸಮಾಧಿಯ ಪಕ್ಕದಲ್ಲೇ ಮಣ್ಣು ಮಾಡಲಾಯಿತು.

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸೇರಿದಂತೆ ದೇಶ-ವಿದೇಶಗಳ ಸುಮಾರು 2 ಸಾವಿರ ಗಣ್ಯರು ರಾಣಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ಪಾರ್ಥಿವ ಶರೀರದ ಮೆರವಣಿಗೆ: ಸ್ಥಳೀಯ ಕಾಲಮಾನ ಬೆಳಗ್ಗೆ 11 ಗಂಟೆಗೆ ಸರಿಯಾಗಿ ರಾಣಿಯ ಹಿರಿಯ ಪುತ್ರ, ದೊರೆ 3ನೇ ಚಾರ್ಲ್ಸ್, ಅವರ ಪುತ್ರರಾದ ಪ್ರಿನ್ಸ್‌ ವಿಲಿಯಂ ಮತ್ತು ಪ್ರಿನ್ಸ್‌ ಹ್ಯಾರಿ, ಪುತ್ರಿಯರಾದ ಪ್ರಿನ್ಸೆಸ್‌ ಅನ್ನೆ, ಪ್ರಿನ್ಸೆಸ್‌ , ವಿಲಿಯಂನ ಮಕ್ಕಳಾದ ಪ್ರಿನ್ಸ್‌ ಜಾರ್ಜ್‌, ಪ್ರಿನ್ಸೆಸ್‌ ಶಾರ್ಲೆ ಸೇರಿದಂತೆ ರಾಜಕು ಟುಂಬದ ಪ್ರಮುಖರು ಪಾರ್ಥಿವ ಶರೀರದ ಅಕ್ಕಪಕ್ಕದಲ್ಲಿ ನಿಂತರು. ಅಲ್ಲಿಂದ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಯಿತು. ಅವರ ಜತೆಗೆ 6 ಸಾವಿರ ಮಂದಿ ಸಶಸ್ತ್ರ ಪಡೆಯ ಸಿಬಂದಿಯೂ ಹೆಜ್ಜೆ ಹಾಕಿದರು. ಮೆರವಣಿಗೆ ಸಾಗುತ್ತಿದ್ದಂತೆ, ಪ್ರಿನ್ಸ್‌ ಹ್ಯಾರಿಯ ಪತ್ನಿ, ಡಚೆಸ್‌ ಆಫ್ ಸಸ್ಸೆಕ್ಸ್‌ ಮೆಘನ್‌ ಮರ್ಕೆಲ್‌ ಅವರು ರಾಣಿ ಯನ್ನು ನೆನೆದು ಕಣ್ಣೀರಿಟ್ಟಿದ್ದು ಕಂಡುಬಂತು. ರಸ್ತೆಯುದ್ದಕ್ಕೂ ನೆರೆದಿದ್ದ 20 ಲಕ್ಷದಷ್ಟು ಮಂದಿ ತಮ್ಮ ಮೆಚ್ಚಿನ ರಾಣಿಗೆ ಅಂತಿಮ ವಿದಾಯ ಹೇಳಿದರು. ಇಡೀ ದೇಶ 2 ನಿಮಿಷಗಳ ಕಾಲ ಮೌನಾಚರಣೆಯನ್ನೂ ಮಾಡಿತು.

ಚಾರ್ಲ್ಸ್ ರನ್ನು ಭೇಟಿಯಾದ ಮುರ್ಮು: ರಾಣಿ ಅಂತ್ಯಕ್ರಿಯೆಗೂ ಮುನ್ನ ರಾಷ್ಟ್ರಪತಿ ಮುರ್ಮು ಅವರು ಬ್ರಿಟನ್‌ ದೊರೆ 3ನೇ ಚಾರ್ಲ್ಸ್ ಅವರನ್ನು ಭೇಟಿಯಾಗಿ, ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ಜತೆಗೆ, ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ, ತಂಜಾ ನಿಯೇ ಅಧ್ಯಕ್ಷ ಸಮಿಯಾ ಸುಲುಹು ಅವರನ್ನೂ ಮುರ್ಮು ಭೇಟಿಯಾದರು. ರವಿವಾರವೇ ರಾಷ್ಟ್ರಪತಿ ಮುರ್ಮು, ವಿದೇಶಾಂಗ ಕಾರ್ಯ  ದರ್ಶಿ ವಿನಯ್‌ ಕ್ವಾತ್ರಾ ಅವರು ರಾಣಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದರು.

Advertisement

30 ವರ್ಷ ಹಿಂದೆಯೇ ತಯಾರಾಗಿತ್ತು ಶವಪೆಟ್ಟಿಗೆ!
ರಾಣಿ 2ನೇ ಎಲಿಜಬೆತ್‌ ಮೃತದೇಹವಿರುವ ಶವಪೆಟ್ಟಿಗೆಯನ್ನು ಇಂಗ್ಲಿಷ್‌ ಓಕ್‌ ಬಳಸಿ ತಯಾ ರಿಸಲಾಗಿದೆ. ಇದನ್ನು 3 ದಶಕಗಳ ಹಿಂದೆಯೇ ಸಿದ್ಧಪಡಿಸಲಾಗಿತ್ತು. ರಾಜಮನೆತನದ ಸಂಪ್ರ ದಾಯದ ಪ್ರಕಾರ ಬ್ರಿಟನ್‌ ರಾಜಕುಟುಂಬದ ಸ್ಯಾಂಡ್ರಿಂಗ್‌ಹ್ಯಾಮ್‌ ಎಸ್ಟೇಟ್‌ನ ಓಕ್‌ ಮರ ದಿಂದ 3 ದಶಕಗಳ ಹಿಂದೆ ಖ್ಯಾತ ಹೆನ್ರಿ ಸ್ಮಿತ್‌ ಸಂಸ್ಥೆ ಶವಪೆಟ್ಟಿಗೆಯನ್ನು ತಯಾರಿಸಿತು. ಅನಂತರ ರಾಜಮನೆತನದ ಅಂತ್ಯಕ್ರಿಯೆಯ ಜವಾಬ್ದಾರಿ ವಹಿಸಿರುವ 2 ಸಂಸ್ಥೆಗಳು ಇದನ್ನು ಸುರಕ್ಷಿತವಾಗಿ ಇರಿಸಿದ್ದವು. ಶವಪೆಟ್ಟಿಗೆ ತಯಾರಿಕೆಗೆ ಇಂಗ್ಲೀಷ್‌ ಓಕ್‌ ಜತೆಗೆ ಸೀಸ ಸಹ ಬಳಸಲಾಗಿದೆ. ಹೆಚ್ಚು ದಿನಗಳ ಕಾಲ ಮೃತದೇಹ ಕೆಡದಂತೆ ಸೀಸ ತಡೆ ಯ ಲಿದೆ. ರಾಜಮನೆತನದ ಸದಸ್ಯರ ಮೃತದೇಹ ಗಳನ್ನು ಸೀಸದಿಂದ ಮಾಡಲಾದ ಶವಪೆಟ್ಟಿಗೆಗಳಲ್ಲಿ ಇರಿಸುವುದು ಹಿಂದಿನ ಕಾಲದಿಂದ ಬಂದ ಸಂಪ್ರದಾಯ. ಬ್ರಿಟನ್‌ ಮಾಜಿ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌, ರಾಜಕುಮಾರ ಫಿಲಿಫ್ ಮತ್ತು ರಾಜ ಕುಮಾರಿ ಡಯಾನಾ ಅವರ ಅಂತ್ಯಕ್ರಿಯೆ ವೇಳೆ ಕೂಡ ಇದೇ ರೀತಿಯ ಶವಪೆಟ್ಟಿಗೆ ಬಳಸಲಾಗಿತ್ತು ಎಂದು ಬರ್ಮಿಂಗ್‌ಹ್ಯಾಂನ ಕಾಫಿನ್‌ ವರ್ಕ್ಸ್ ಮ್ಯೂಸಿಯಂನ ವ್ಯವಸ್ಥಾಪಕಿ ಸಾರಾ ಹೇಯ್ಸ ಮಾಹಿತಿ ನೀಡಿದ್ದಾರೆ.

ನಮ್ಮ ವಜ್ರ ನಮಗೆ ಕೊಡಿ
ದಕ್ಷಿಣ ಆಫ್ರಿಕಾದಲ್ಲಿ 1905ರ ಕಾಲದಲ್ಲಿ ಗಣಿ ಗಾರಿಕೆ ಮಾಡಿ ತೆಗೆದಿದ್ದ ಅತೀದೊಡ್ಡ ವಜ್ರವಾದ “ಕುಲ್ಲಿನನ್‌ 1′ ಕೂಡ ರಾಣಿ 2ನೇ ಎಲಿಜಬೆತ್‌ ಅವರ ಕಿರೀಟದಲ್ಲಿದೆ. 500 ಕ್ಯಾರೆಟ್‌ ಶುದ್ಧತೆ ಇರುವ ಆ ವಜ್ರವನ್ನು ಕೂಡಲೇ ದಕ್ಷಿಣ ಆಫ್ರಿಕಾಕ್ಕೆ ಮರಳಿಸಬೇಕೆಂದು ಅಲ್ಲಿನ ಜನರು ಹಾಗೂ ಗಣ್ಯರು ಒತ್ತಾಯಿಸಲಾರಂಭಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next