ದಾವಣಗೆರೆ: ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿರುವ ಲೋಪ-ದೋಷ ಸರಿಪಡಿಸಬೇಕು. ಸ್ಥಗಿತಗೊಂಡಿರುವ ಕೋವಿಡ್ -19ರ 5 ಸಾವಿರ ಪರಿಹಾರವನ್ನು ಕೂಡಲೇ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕಾರ್ಮಿಕ ಮುಖಂಡ ಸಾತಿ ಸುಂದರೇಶ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದ ಮಂತ್ರಿಗಳು ಅತ್ಯಾಚಾರ ಪ್ರಕರಣಗಳಲ್ಲಿ ಪಾಲ್ಗೊಂಡು ಇಡೀ ಮಹಿಳಾ ಸಮುದಾಯಕ್ಕೆ ಕಳಂಕ ತಂದಿದ್ದಾರೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ದಿಕ್ಕು ತಪ್ಪಿದೆ. ಆಡಳಿತ ವೈಫಲ್ಯ ಮರೆಮಾಚಲು ಸರ್ಕಾರಗಳು ಇಲ್ಲಸಲ್ಲದ ಕಾನೂನು ಜಾರಿ ತರಲು ಮುಂದಾಗುತ್ತಿವೆ. ಕೂಡಲೇ ಜನವಿರೋಧಿ ನೀತಿ ಕೈಬಿಟ್ಟು ಅಭಿವೃದ್ಧಿ ಯೋಜನೆ ಜಾರಿಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಆವರೆಗೆರೆ ಎಚ್.ಜಿ.ಉಮೇಶ್ ಮಾತನಾಡಿ, ಗುರುತಿನ ಚೀಟಿ ಹೊಂದಿದ ಎಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸರ್ಕಾರಿ ಮತ್ತು ಅರೆ ಸರ್ಕಾರಿ ಜಮೀನು ಖರೀದಿಸಿ ಖಾಲಿ ನಿವೇಶನ ನೀಡಿ ಮನೆ ನಿರ್ಮಾಣ ಮಾಡಿಕೊಡಬೇಕು. ಕಟ್ಟಡ ನಿರ್ಮಾಣ ಕಾರ್ಮಿಕರು ಅಪಘಾತದಿಂದಾಗಲಿ ಮತ್ತು ಸ್ವಾಭಾವಿಕವಾಗಿ ಸಾವು ಸಂಭವಿಸಿದ್ದಲ್ಲಿ ಅವರ ಅವಲಂಬಿತ ಕುಟುಂಬಕ್ಕೆ 10 ಲಕ್ಷ ಪರಿಹಾರ ಸಹಾಯಧನ ನೀಡಬೇಕು . 60 ವರ್ಷ ಪೂರೈಸಿದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಪ್ರತಿ ತಿಂಗಳು 5 ಸಾವಿರ ನಿವೃತ್ತಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಕಟ್ಟಡ ನಿರ್ಮಾಣ ಕಾರ್ಮಿರಲ್ಲದ ವ್ಯಕ್ತಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ. ಇಂತಹ ಅನರ್ಹ ಗುರುತಿನ ಚೀಟಿ ಹೊಂದಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾರ್ಡ್‌ನ್ನು ರದ್ದು ಮಾಡಬೇಕು. ಸೇವಾ ಸಿಂಧು ಕೇಂದ್ರದಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ಮತ್ತು ನವೀಕರಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಪಿ.ಕೆ. ಲಿಂಗರಾಜ್, ವಿ.ಲಕ್ಷ್ಮಣ, ಭೀಮಾರೆಡ್ಡಿ, ಮುರುಗೇಶ್, ಜಿ.ಆರ್.ನಾಗರಾಜ, ಯರಗುಂಟೆ ಸುರೇಶ್, ಮಹಮ್ಮದ್ ರಫೀಕ್, ಎಸ್. ಎಂ.ಸಿದ್ದಲಿಂಗಪ್ಪ, ಶಿವಕುಮಾರ್ ಡಿ.ಶೆಟ್ಟರ್, ಬಿ.ದುಗ್ಗಪ್ಪ, ನಾಗಮ್ಮ, ನೇತ್ರಾವತಿ, ದಾದಾಪೀರ್, ಸುರೇಶ್, ಐರಣಿ ಚಂದ್ರು ಇತರರು ಇದ್ದರು.