ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾದ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕದಿರುವ ಮೂಲಕ ತಮ್ಮ ಸಾಂವಿಧಾನಾತ್ಮಕ ಕರ್ತವ್ಯಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ ಎಂದು ದೂರಿ ಕೇರಳಿದ ಎಲ್‌ಡಿಎಫ್ ಸರಕಾರ, ರಾಜ್ಯದ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಅವರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಇದರೊಂದಿಗೆ ದೇಶದ ಮೂರು ರಾಜ್ಯ ಗಳಲ್ಲಿನ ಸರಕಾರಗಳು, ಆಯಾಯ ರಾಜ್ಯಪಾಲರ ಧೋರಣೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಕದ ತಟ್ಟಿದಂತಾಗಿದೆ.
ಸರಕಾರ ತನ್ನ ಕಾರ್ಯವ್ಯಾಪ್ತಿಯಡಿಯಲ್ಲಿ ರಾಜ್ಯದ ಜನತೆಯ ಹಿತದೃಷ್ಟಿಯಿಂದ ರೂಪಿಸಿದ ಈ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕಲು ವಿಳಂಬ ಮಾಡುತ್ತಿರುವುದರಿಂದ ಇವುಗಳನ್ನು ಜಾರಿಗೆ ತರಲು ಅಡಚಣೆಯಾಗಿದೆ. ಕಳೆದ ಎರಡು ವರ್ಷಗಳಿಂದ ಬಾಕಿ ಉಳಿದಿರುವ ಮೂರು ಮಸೂದೆಗಳ ಸಹಿತ ಒಟ್ಟು ಎಂಟು ಮಸೂದೆಗಳಿಗೆ ರಾಜ್ಯಪಾಲರು ಇನ್ನೂ ಸಹಿ ಹಾಕಿಲ್ಲ. ಇವುಗಳಲ್ಲಿ ಶಿಕ್ಷಣ, ಸಹಕಾರ, ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಮಹತ್ವದ ಮಸೂದೆಗಳೂ ಸೇರಿವೆ ಎಂದು ಕೇರಳ ಸರಕಾರ ತನ್ನ ಅರ್ಜಿಯಲ್ಲಿ ಉಲ್ಲೇಖೀಸಿದೆ.
ಇಂಥದ್ದೇ ಆರೋಪವನ್ನು ಹೊರಿಸಿ ತಮಿಳುನಾಡಿನ ಡಿಎಂಕೆ ಸರಕಾರ ಅಲ್ಲಿನ ರಾಜ್ಯಪಾಲರಾದ ಎನ್.ಆರ್. ರವಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೂರು ದಿನಗಳ ಹಿಂದೆಯಷ್ಟೇ ಅರ್ಜಿ ಸಲ್ಲಿಸಿತ್ತು. ಸಂವಿಧಾನದ 32ನೇ ವಿಧಿಯಡಿ ಈ ಅರ್ಜಿಯನ್ನು ತಮಿಳುನಾಡು ಸರಕಾರ ಸಲ್ಲಿಸಿದೆ. ವಿಧಾನ ಸಭೆಯಿಂದ ಅಂಗೀಕಾರಗೊಂಡ 12 ಮಸೂದೆಗಳಿಗೆ ರಾಜ್ಯಪಾಲರು ತಮ್ಮ ಅನುಮೋದನೆಯನ್ನು ನೀಡಿಲ್ಲ ಎಂದು ತಮಿಳುನಾಡು ಸರಕಾರ ತನ್ನ ಅರ್ಜಿಯಲ್ಲಿ ದೂರಿತ್ತು.
ಪಂಜಾಬ್‌ನ ಆಪ್ ಸರಕಾರ ಕೂಡ ಅಲ್ಲಿನ ರಾಜ್ಯಪಾಲರಾದ ಬನ್ವಾರಿಲಾಲ್ ಪುರೋಹಿತ್ ವಿರುದ್ಧ ಇಂತಹುದೇ ಆರೋಪ ಹೊರಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ದಿಂದ ಹೊರತಾದ ವಿಪಕ್ಷಗಳ ಸರಕಾರಗಳು ಈ ಮೂರು ರಾಜ್ಯಗಳಲ್ಲಿವೆ. ಕಳೆದ ಕೆಲವು ವರ್ಷಗಳಿಂದೀಚೆಗೆ ವಿಪಕ್ಷ ಸರಕಾರಗಳಿರುವ ರಾಜ್ಯ ಸರಕಾರಗಳು ಮತ್ತು ಅಲ್ಲಿನ ರಾಜ್ಯಪಾಲರ ನಡುವೆ ತಿಕ್ಕಾಟ ನಡೆಯುತ್ತಲೇ ಬಂದಿವೆ. ಈಗ ಈ ಮೂರೂ ರಾಜ್ಯಗಳ ಸರಕಾರಗಳು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರುವುದ ರೊಂದಿಗೆ ಈ ತಿಕ್ಕಾಟ, ಸಂಘರ್ಷವನ್ನು ಮತ್ತೂಂದು ಮಜಲಿಗೆ ಕೊಂಡೊ ಯ್ದಿವೆ. ರಾಜ್ಯಪಾಲರು ಆಯಾಯ ರಾಜ್ಯಗಳಲ್ಲಿ ಕೇಂದ್ರ ಸರಕಾರದ ಪ್ರತಿನಿಧಿ ಯಾಗಿರುವುದರಿಂದ ಈ ಮೂರೂ ರಾಜ್ಯಗಳ ಸರಕಾರಗಳು ಈಗ ಪರೋಕ್ಷ ವಾಗಿ ಕೇಂದ್ರ ಸರಕಾರವನ್ನು ಸುಪ್ರೀಂ ಕೋರ್ಟ್‌ನ ಕಟಕಟೆಗೆ ಎಳೆದಂತಾಗಿದೆ.
ರಾಜ್ಯಪಾಲರು ಒಕ್ಕೂಟ ವ್ಯವಸ್ಥೆಯಲ್ಲಿ ತಮ್ಮದೇ ಆದ ಕರ್ತವ್ಯ, ಹೊಣೆ ಗಾರಿಕೆಗಳನ್ನು ಹೊಂದಿದ್ದಾರೆ. ಅಷ್ಟು ಮಾತ್ರವಲ್ಲದೆ ರಾಜ್ಯಪಾಲ, ರಾಜಕೀ ಯೇತರ ಹುದ್ದೆಯಾಗಿದ್ದು ಮಹತ್ವದ ಸ್ಥಾನಮಾನ, ಗೌರವವನ್ನು ಹೊಂದಿದೆ. ರಾಜ್ಯಪಾಲ ಹುದ್ದೆಗೆ ಸಂವಿಧಾನದಲ್ಲಿ ನೀಡಲಾಗಿರುವ ಗೌರವ, ಘನತೆಗಳನ್ನು ಉಳಿಸಿಕೊಳ್ಳುವ ಗುರುತರ ಹೊಣೆಗಾರಿಕೆ ಕೇವಲ ರಾಜ್ಯಪಾಲರಾದವರಿಗಷ್ಟೇ ಸೀಮಿತವಾಗದೆ ಆಯಾಯ ರಾಜ್ಯ ಸರಕಾರಗಳಿಗೂ ಇದೆ. ಇದನ್ನು ಅರಿತು ಕೊಂಡು ರಾಜ್ಯಪಾಲರು ಮತ್ತು ರಾಜ್ಯ ಸರಕಾರ ಪರಸ್ಪರ ವಿಶ್ವಾಸದಿಂದ ಕಾರ್ಯನಿರ್ವಹಿಸಿದಾಗಲಷ್ಟೇ ಈ ಹುದ್ದೆಯ ಮಾತ್ರವಲ್ಲ ಒಕ್ಕೂಟ ವ್ಯವಸ್ಥೆಯ ಘನತೆ, ಗೌರವವನ್ನು ಎತ್ತಿ ಹಿಡಿಯಲು ಸಾಧ್ಯ.