ಬೆಂಗಳೂರು: ಹಳೇ ದ್ವೇಷಕ್ಕೆ ಯುವಕನೊಬ್ಬನನ್ನು ಅಪಹರಿಸಿ ಕೊಲೆಗೈದು ತಿರುಪತಿಗೆ ತೆರಳಿ ಕೇಶ ಮುಂಡನ ಮಾಡಿಸಿಕೊಂಡು ಬಂದ 7 ಮಂದಿ ಆರೋಪಿಗಳು ಬೊಮ್ಮನಹಳ್ಳಿ ಪೊಲೀಸರಿಗೆ ಶರಣಾಗಿದ್ದಾರೆ.
ಪ್ರಜ್ವಲ್, ಹಿಮಾದ್ರಿ, ಜೀವನ್, ರಾಕೇಶ್, ಅವಿನಾಶ್ ಹಾಗೂ ಸಾಗರ್ ಪೊಲೀಸರಿಗೆ ಶರಣಾದ ಆರೋಪಿಗಳು. ಆರೋಪಿಗಳು ಮೇ 9ರಂದು ಬಿಟಿಎಂ ಲೇಔಟ್ 4ನೇ ಹಂತದ ಚಿಕ್ಕನಹಳ್ಳಿಯ ಸುಹಾಸ್ (19) ಎಂಬಾತನನ್ನು ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದರು.
ಬಿಟಿಎಂ ಲೇಔಟ್‌ನ ಪ್ರಭಾಕರ್ ಹಾಗೂ ಕವಿತಾ ದಂಪತಿಯ ಎರಡನೇ ಪುತ್ರ ಸುಹಾಸ್ ಹಾಗೂ ಆರೋಪಿ ಪ್ರಜ್ವಲ್ ನಡುವೆ ಯುಗಾದಿ ಹಬ್ಬದ ದಿನ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಹೀಗಾಗಿ ಪ್ರಜ್ವಲ್, ಸುಹಾಸ್ ಮೇಲೆ ದ್ವೇಷ ಸಾಧಿಸುತ್ತಿದ್ದ ಮೇ 9ರಂದು ಸ್ನೇಹಿತನ ಮದುವೆ ಪಾರ್ಟಿಗೆ ಹೋಗುತಿದ್ದ ಸುಹಾಸ್‌ನನ್ನು ಪ್ರಜ್ವಲ್ ಹಾಗೂ ಸಹಚರರು ಆಟೋದಲ್ಲಿ ಅಪಹರಿಸಿದ್ದರು. ಬಳಿಕ ಎಲೆಕ್ಟ್ರಾನಿಕ್ ಸಿಟಿಯ ಬಸವನಪುರ ಸಮೀಪದ ನಿರ್ಜನ ಪ್ರದೇಶದಲ್ಲಿ ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿ ನೀಲಗಿರಿ ತೋಪಿನ ಬಳಿ ಮೃತದೇಹ ಬಿಸಾಡಿ ಹೋಗಿದ್ದರು.
ಇತ್ತ ಪುತ್ರ ಮನೆಗೆ ಬರದಿದ್ದಾಗ ಪೋಷಕರು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುಹಾಸ್ ಕೊಲೆಯಾಗಿರುವುದನ್ನು ಪತ್ತೆಹಚ್ಚಿದ್ದರು.
ಇದನ್ನೂ ಓದಿ: ಬಾಂಗ್ಲಾದಲ್ಲಿ ಕೊಲೆಗೈದು ಇಲ್ಲಿ ದರೋಡೆ: ಶಿಕ್ಷೆ ವಿಧಿಸಿದ ಬಳಿಕ ಭಾರತಕ್ಕೆ ಅಕ್ರಮ ಪ್ರವೇಶ
ತಿರುಪತಿಗೆ ಹೋಗಿದ್ದ ಆರೋ ಪಿಗಳು
ಕೊಲೆ ಮಾಡಿದ ಬಳಿಕ ಆರು ಮಂದಿ ಆರೋಪಿಗಳು ತಿರುಪತಿಗೆ ಹೋಗಿದ್ದರು. ಸಾಗರ್ ಮಾತ್ರ ಬೆಂಗಳೂರಲ್ಲೇ ತಲೆಮರೆಸಿಕೊಂಡಿದ್ದ. ಹೀಗಾಗಿ ಎರಡು ದಿನಗಳ ಹಿಂದೆ ಆತನನ್ನು ಪೊಲೀಸರು ಬಂಧಿಸಿದ್ದರು. ಈ ವಿಚಾರ ತಿಳಿದ ಇತರೆ 6 ಮಂದಿ ಆರೋಪಿಗಳು ತಿರುಪತಿಯಿಂದ ವಾಪಸ್ ಬಂದು ನೇರವಾಗಿ ಬೊಮ್ಮನಹಳ್ಳಿ ಪೊಲೀಸರು ಮುಂದೆ ಶರಣಾಗಿದ್ದಾರೆ. ಈ ವೇಳೆ ಹಳೇ ದ್ವೇಷಕ್ಕೆ ಕೊಲೆಗೈಯಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.