Advertisement

ಅನಿವಾಸಿ ಕನಡಿಗರ ಕನ್ನಡಿಗರ ಕ್ವಾರಂಟೈನ್ ‌: ನಿರ್ಧಾರ ಬದಲು

04:32 AM May 09, 2020 | Suhan S |

ಬೆಂಗಳೂರು: ನಗರ ಹೊರವಲಯದ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿದೇಶದಿಂದ ಬಂದಿಳಿಯಲಿರುವ ಕನ್ನಡಿಗರನ್ನು ಬೆಂಗಳೂರು ನಗರದಲ್ಲೇ ಕ್ವಾರಂಟೈನ್‌ ಮಾಡಲು ಸರ್ಕಾರ ನಿರ್ಧರಿಸಿದೆ.

Advertisement

ಕೋವಿಡ್ 19 ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಕನ್ನಡಿಗರು ಬೆಂಗಳೂರಿಗೆ ಬರುತ್ತಾರೆ ಎನ್ನುವ ಸಂಭ್ರಮದ ನಡುವೆಯೇ ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ದೇವನಹಳ್ಳಿ ಭಾಗದಲ್ಲಿನ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆಯಲ್ಲಿ ಒಟ್ಟು 5 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಈಗ ಇವರೆಲ್ಲರೂ ಗುಣಮುಖರಾಗಿದ್ದಾರೆ. ಹೀಗಾಗಿ,ಇಲ್ಲಿ ಅವರನ್ನು ಕ್ವಾರಂಟೈನ್‌ ಮಾಡಬಾರದು ಎನ್ನುವುದು ಸ್ಥಳೀಯರ ವಾದವಾಗಿತ್ತು.

“ವಿದೇಶದಿಂದ ಬರುತ್ತಿರುವವರು ಎಲ್ಲರೂ ಭಾರತೀಯರು ಹಾಗೂ ಕನ್ನಡಿಗರು ಅವರ ರಕ್ಷಣೆ ಹಾಗೂ ಸುರಕ್ಷತೆ ನಮ್ಮ ಆದ್ಯತೆ. ಅದೇ ಸಂದರ್ಭದಲ್ಲಿ ಇಲ್ಲಿನ ಸ್ಥಳೀಯರ ಒತ್ತಾಸೆಗಳನ್ನು ಹಾಗೂ ಇಲ್ಲಿನ ಪರಿಸ್ಥಿತಿ ನೋಡಿಕೊಂಡು ಸರ್ಕಾರ ಕ್ರಮ ತೆಗೆದುಕೊಂಡಿದೆ. ಕ್ವಾರಂಟೈನ್‌ ಆಗುವವರು ಅವರದೇ ಖರ್ಚಿನಲ್ಲಿ ಹೋಟೆಲ್‌ಗ‌ಳಲ್ಲಿ 14ದಿನ ಕ್ವಾರಂಟೈನ್‌ ಆಗಲಿದ್ದಾರೆ. ಇದಕ್ಕೆ ಸ್ಟಾರ್‌ ಹೋಟೆಲ್‌ಗ‌ಳನ್ನು ಗುರುತಿಸಿಕೊಳ್ಳಲಾಗಿದೆ,’ ಎಂದು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್‌. ರವೀಂದ್ರ ಅವರು ಹೇಳಿದ್ದಾರೆ.

ಕ್ವಾರಂಟೈನ್‌ ಆಗುವವರ ಆರೋಗ್ಯ ತಪಾಸಣೆ, ಥರ್ಮಲ್‌ ಸ್ಕ್ರೀನಿಂಗ್‌, ಸ್ಟ್ಯಾಂಪಿಂಗ್‌, ವಿವರ ಸಂಗ್ರಹ ಸೇರಿದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಅನಿವಾಸಿ ಕನ್ನಡಿಗರನ್ನು ಬೆಂಗಳೂರು ಹೊರವಲಯ, ಒಳಗೆ ಹಾಗೂ ಅವಕಾಶ ಇರುವ ಪ್ರದೇಶಗಳಲ್ಲಿ ಕ್ವಾರಂಟೈನ್‌ ಮಾಡುವ ನಿಟ್ಟಿನಲ್ಲಿ ಸರ್ಕಾರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಆದರೆ, ಮೂಲಗಳ ಪ್ರಕಾರ ಅನಿವಾಸಿ ಕನ್ನಡಿಗರನ್ನು ಮೊದಲ ಹಂತದಲ್ಲಿ ಬೆಂಗಳೂರಿನ ಕೇಂದ್ರ ಭಾಗದ ಹೋಟೆಲ್‌, ಪಿಜಿಗಳಲ್ಲಿ ಹಾಗೂ ನಂತರ ಹೆಚ್ಚು ಜನ ಬಂದರೆ ಬೆಂಗಳೂರು ಹೊರವಲಯದಲ್ಲಿ ಕ್ವಾರಂಟೈನ್‌ ಮಾಡಲು ನಿರ್ಧರಿಸಿರುವುದು ಖಚಿತವಾಗಿದೆ.

Advertisement

ಕ್ವಾರಂಟೈನ್‌ಗೆ ವಿರೋಧ: ಪಾದರಾಯನಪುರದಲ್ಲಿ ದಾಂಧಲೆ ಮಾಡಿದ ಪುಂಡರನ್ನು ಕ್ವಾರಂಟೈನ್‌ ಮಾಡಲಾಗಿದ್ದ ರಾಮನಗರದಲ್ಲಿ ಕೋವಿಡ್  ಸೋಂಕು ಕಾಣಿಸಿಕೊಂಡು ಅವಾಂತರ ಸೃಷ್ಟಿಯಾದ ಮೇಲೆ ಉಳಿದ ಭಾಗಗಳಲ್ಲೂ ಕ್ವಾರಂಟೈನ್‌ಗೆ ವಿರೋಧ ವ್ಯಕ್ತವಾಗುತ್ತಿದೆ. ಅನಿವಾಸಿ ಹಾಗೂ ಹೊರರಾಜ್ಯದಿಂದ ಬರುವವರನ್ನು ದೇವನಹಳ್ಳಿಯಲ್ಲಿ ಕ್ವಾರಂಟೈನ್‌ ಮಾಡದಂತೆ ಖುದ್ದು ದೇವನಹಳ್ಳಿ ವಿಧಾನಸಭಾ ಶಾಸಕರಾದ ಎಲ್‌.ಎನ್‌.ನಿಸರ್ಗ ನಾರಾಯಣ ಸ್ವಾಮಿ ಅವರೇ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರದಲ್ಲಿ ಒಂದೇ ಒಂದು ಕೋವಿಡ್ ಸೋಂಕು ದೃಢಪಟ್ಟಿಲ್ಲ. ಇಷ್ಟಾದರೂ ಇದನ್ನು ರೆಡ್‌ ಝೋನ್‌ ಎಂದು ಈಗ ಪರಿಗಣಿಸಲಾಗಿದೆ. ಜಿಲ್ಲೆಯಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಆಡಳಿತಾಧಿಕಾರಿಗಳಿಂದ ಸದ್ಯ ಇಲ್ಲಿ ಯಾವುದೇ ಸೋಂಕು ಪ್ರಕರಣಗಳು ಇಲ್ಲ. ಈಗ ವಿದೇಶದಿಂದ ಬರುವವರನ್ನು ಇಲ್ಲಿ ಕ್ವಾರಂಟೈನ್‌ ಮಾಡುವ ನಿರ್ಧಾರದಿಂದ ಈ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ, ಕೋವಿಡ್ ಸೋಂಕು ಹರಡುವ ಆತಂಕವೂ ಇದೆ. ಹೀಗಾಗಿ, ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next