Advertisement

ಕಾರ್ಮಿಕರಿಗೆ ಕ್ವಾರಂಟೈನ್‌ ಕಡ್ಡಾಯ

01:57 PM Apr 30, 2020 | Suhan S |

ಬಾಗಲಕೋಟೆ: ದುಡಿಯಲು ಬೇರೆ ಜಿಲ್ಲೆಗಳಿಗೆ ಹೋಗಿ ಲಾಕ್‌ಡೌನ್‌ ಬಳಿಕ ಪುನಃ ತಮ್ಮ ಊರುಗಳಿಗೆ ಮರಳಿದ ಕಾರ್ಮಿಕರನ್ನು ಕಡ್ಡಾಯವಾಗಿ ಕ್ವಾರಂಟೈನ್‌ ಮಾಡಬೇಕು. ಅವರ ಮನೆಗಳಿಗೆ ತೆರಳಿ ಕ್ವಾರಂಟೈನ್‌ ಫಲಕ ಹಚ್ಚಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕೋವಿಡ್‌ ನಿಯಂತ್ರಣ ಕುರಿತು ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಿಂದ 32 ಬಸ್‌ಗಳ ಮೂಲಕ ಒಟ್ಟು 730 ಕಾರ್ಮಿಕರು ಬಾಗಲಕೋಟೆಗೆ ಬಂದಿದ್ದು, ಅವರನ್ನು ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್‌ನಲ್ಲಿ ಇರಿಸಿ ಹೊರಗೆ ಬರದಂತೆ ನಿಗಾ ವಹಿಸಬೇಕು. ಕೂಲಿ ಕಾರ್ಮಿಕರು ಹೆಚ್ಚಾಗಿ ಗ್ರಾಮೀಣ ಪ್ರದೇಶದವರಾಗಿರುವುದರಿಂದ ಅವರ ಮಾಹಿತಿಯನ್ನು ಪಡೆದು ನಿಗಾ ವಹಿಸಲು ತಿಳಿಸಿದರು. ರಾಜಸ್ತಾನದಿಂದ 4 ಜನ ಜಿಲ್ಲೆಗೆ ಆಗಮಿಸುತ್ತಿರುವ ಮಾಹಿತಿ ಬಂದಿದ್ದು, ಅವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದು ತಿಳಿಸಿದರು.

ಹೆದ್ದಾರಿ ದಾಬಾ ಆರಂಭಿಸಿ: ರಾಜ್ಯದಲ್ಲಿ ಗೂಡ್ಸ್‌ ವಾಹನಗಳ ಸಂಚಾರ ಆರಂಭಗೊಂಡಿದ್ದು, ಜಿಲ್ಲೆಯ ರಾಜ್ಯ ಹೆದ್ದಾರಿಗಳಲ್ಲಿರುವ ದಾಬಾಗಳನ್ನು ಆರಂಭಿಸಲು ಅನುಮತಿ ನೀಡಬೇಕು. ಅನುಮತಿ ನೀಡುವಾಗ ಪಾಲಿಸಬೇಕಾದ ನಿಯಮಗಳನ್ನು ತಿಳಿಹೇಳಬೇಕು. ಕಡ್ಡಾಯವಾಗಿ ಪ್ಯಾಕಿಂಗ್‌ ಮಾಡಿ ನೀಡಬೇಕು. ಜಿಲ್ಲೆಯಲ್ಲಿ ಈಗಾಗಲೇ 6 ಕಡೆಗಳಲ್ಲಿ ದಾಬಾ ಪ್ರಾರಂಭಿಸಲು ಅನುಮತಿ ನೀಡಿದ್ದು, ಅವರು ಸರಿಯಾಗಿ ನಿಯಮ ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಸೂಚಿಸಿದರು.

34 ಸಾವಿರ ವಾಹನ ತಪಾಸಣೆ: ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 5 ಕಡೆ ಚೆಕ್‌ಪೋಸ್ಟ್‌ ಹಾಕಲಾಗಿದ್ದು, ಈಗ 4 ಮಾತ್ರ ಚಾಲನೆಯಲ್ಲಿವೆ. ಇಲ್ಲಿಯವರೆಗೆ 34,889 ವಾಹನಗಳ ತಪಾಸಣೆ ಮಾಡಲಾಗಿದ್ದು, 13,2959 ಜನರ ಥರ್ಮಲ್‌ ಸ್ಕ್ರಿನಿಂಗ್‌ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾದ ಕೋವಿಡ್‌ ಸಹಾಯವಾಣಿ ಕೇಂದ್ರಕ್ಕೆ ಇಲ್ಲಿಯವರೆಗೆ 195 ಕರೆಗಳು ಬಂದಿವೆ. ಬಂದ ಕರೆಗಳನ್ನು ತಕ್ಷಣ ಬಗೆಹರಿಸುವ ಕೆಲಸ ಮಾಡಲಾಗುತ್ತಿದೆ. ಕರೆಗಳಲ್ಲಿ ಈ ಮೊದಲು ಆರೋಗ್ಯದ ಬಗ್ಗೆ ಬಂದರೆ ಈಗ ರೇಷನ್‌, ಪಾಸ್‌ ಹಾಗೂ ಇತರೆ ಕುರಿತು ಕರೆಗಳು ಬರುತ್ತಿವೆ ಎಂದರು.

29 ಜನರಿಗೆ ಸೋಂಕು: ಹಳೆಯ ಬಾಗಲಕೋಟೆ 13, ಮುಧೋಳದಲ್ಲಿ 6 ಹಾಗೂ ಜಮಖಂಡಿಯಲ್ಲಿ 9 ಸೇರಿ ಒಟ್ಟು ಜಿಲ್ಲೆಯಲ್ಲಿ 29 ಪಾಜಿಟಿವ್‌ ಪ್ರಕರಣಗಳು ಬಂದಿದ್ದು, ಈ ಪೈಕಿ 6 ಜನ ಕೋವಿಡ್‌ನಿಂದ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕಂಟೇನ್‌ಮೆಂಟ್‌ ಝೋನ್‌ಗಳಲ್ಲಿ ಜನರಿಗೆ ಅಗತ್ಯವಾಗಿ ಬೇಕಾಗುವ ವಸ್ತುಗಳನ್ನು ಮನೆ ಮನೆಗೆ ತಲುಪಿಸಲಾಗುತ್ತಿದೆ. ಆಯಾ ಪ್ರದೇಶದ ಜನರ ಆರೋಗ್ಯ ತಪಾಸಣೆಯನ್ನು ಸಹ ಮಾಡಲಾಗುತ್ತಿದೆ. ಈ ಪ್ರದೇಶದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ಕಾಯಿಲೆ, ಶ್ವಾಸಕೋಶ ತೊಂದರೆ ಇರುವ ಹಾಗೂ ಗರ್ಭಿಣಿಯರ ಆರೋಗ್ಯದ ಬಗ್ಗೆ ನಿಗಾ ವಹಿಸಲು ವೈದ್ಯರು ಒಳಗೊಂಡ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

Advertisement

ಪಿಪಿಇ ಕಿಟ್‌ ಲಭ್ಯ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎ.ಎನ್‌.ದೇಸಾಯಿ ಮಾತನಾಡಿ, ಜಿಲ್ಲೆಯಲ್ಲಿ ಔಷ ಧಗಳ ದಾಸ್ತಾನುಗಳ ಯಾವುದೇ ಕೊರತೆ ಇರುವುದಿಲ್ಲ. ಡಾಕ್ಟರ್ ಮತ್ತು ಸಿಬ್ಬಂದಿಗಳ ಕೊರತೆ ಇರುವುದಿಲ್ಲ. ಇನ್ನು ಒಂದು ತಿಂಗಳಿಗಾಗುವಷ್ಟು ಪಿಪಿಟಿ ಕಿಟ್‌ಗಳು ಲಭ್ಯ ಇವೆ. ಎನ್‌-95 ಮಾಸ್ಕ್ಗಳು 10 ಸಾವಿರ ಹಾಗೂ ತ್ರಿಬಲ್‌ ಲೇಯರ್‌ ಮಾಸ್ಕ್ಗಳು 1 ಲಕ್ಷಗಳ ಬೇಡಿಕೆ ಇದೆ. ಜಿಲ್ಲೆಯಿಂದ ಕಳುಹಿಸಲಾದ 292 ಸ್ಯಾಂಪಲ್‌ಗ‌ಳ ಪೈಕಿ 285 ಸ್ಯಾಂಪಲ್‌ಗ‌ಳು ನೆಗಟಿವ್‌ ಬಂದಿವೆ. ಬಾಕಿ 90 ಸ್ಯಾಂಪಲ್‌ಗ‌ಳ ವರದಿ ಮಾತ್ರ ಬರಬೇಕಾಗಿದೆ ಎಂದು ವಿವರಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಲೋಕೇಶ ಜಗಲಾಸರ, ಜಿಪಂ ಸಿಇಒ ಗಂಗೂಬಾಯಿ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಕೋವಿಡ್‌ ವಿಶೇಷ ಅಪರ ಜಿಲ್ಲಾಧಿಕಾರಿ ಬಸವರಾಜ ಸೋಮಣ್ಣವರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪ್ರಕಾಶ ಬಿರಾದಾರ, ಜಿಲ್ಲಾ ಸಮೀಕ್ಷಣಾ ಧಿಕಾರಿ ಡಾ| ವಿಜಯ ಕಂಠಿ, ಶ್ರೀಶೈಲ ಕಂಕಣವಾಡಿ, ಚೇತನಾ ಪಾಟೀಲ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಿಂದ 32 ಬಸ್‌ ಗಳ ಮೂಲಕ ಒಟ್ಟು 730 ಕಾರ್ಮಿಕರು ಬಾಗಲಕೋಟೆಗೆ ಬಂದಿದ್ದು, ಅವರನ್ನು ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್‌ನಲ್ಲಿ ಇರಿಸಿ ಹೊರಗೆ ಬರದಂತೆ ನಿಗಾ ವಹಿಸಬೇಕು.  –ಶಿವಯೋಗಿ ಕಳಸದ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next