Advertisement

ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್‌

10:58 PM May 08, 2020 | Sriram |

ಉಡುಪಿ: ಹೊರ ರಾಜ್ಯದಿಂದ ಬಂದ ಪ್ರಯಾಣಿಕರನ್ನು ಜಿಲ್ಲೆಯಲ್ಲಿ ಇನ್‌ಸ್ಟಿಟ್ಯೂಷನ್‌ ಹಾಗೂ ಹೊಟೇಲ್‌ ಕ್ವಾರಂಟೈನ್‌ ಮಾಡುವ ಬಗ್ಗೆ ಶಾಸಕ ಕೆ. ರಘುಪತಿ ಭಟ್‌ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಭವನದಲ್ಲಿ ಸಭೆ ನಡೆಸಲಾಯಿತು.

Advertisement

“ಸೇವಾ ಸಿಂಧು’ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪಾಸ್‌ ಮೂಲಕ ಹೊರ ರಾಜ್ಯಗಳಿಂದ ಬಂದ ಪ್ರಯಾ ಣಿಕರನ್ನು ಜಿಲ್ಲಾ ಗಡಿಯಲ್ಲಿ ತಾಲೂಕುವಾರು ವಿಂಗಡಿಸಿ ಅವರನ್ನು ಇನ್‌ಸ್ಟಿಟ್ಯೂಷನ್‌ ಕ್ವಾರಂಟೈನ್‌ ಅಥವಾ ಹೊಟೇಲ್‌ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು. ಪ್ರಾರಂಭಿಕ ಹಂತದಲ್ಲಿ ಇನ್‌ಸ್ಟಿಟ್ಯೂಷನ್‌ ಕ್ವಾರಂಟೈನ್‌ನಲ್ಲಿ ಇರಿಸುವ ಬಗ್ಗೆ ತಾಲೂಕು ಆಡಳಿತವು ಇತರ ಇಲಾಖೆಗಳ ಸಮನ್ವಯದೊಂದಿಗೆ ಹಾಸ್ಟೆಲ್‌, ವಸತಿ ಶಾಲೆ, ಸಭಾಭವನ ಮತ್ತು ಛತ್ರಗಳನ್ನು ಮೂಲಸೌಕರ್ಯಗಳೊಂದಿಗೆ ಸಜ್ಜಾಗಿರಿಸುವುದು. ಅನಂತರ ಹೊರ ರಾಜ್ಯಗಳಿಂದ ಬಂದವರನ್ನು ಸದ್ರಿ ಇನ್‌ಸ್ಟಿಟ್ಯೂಷನ್‌ ಕ್ವಾರಂಟೈನ್‌ನಲ್ಲಿ ಇರಿಸಿ ಮೂಲ ಆವಶ್ಯಕತೆಗಳನ್ನು ತಾಲೂಕು ಆಡಳಿತದ ಮೂಲಕ ಪೂರೈಸಲಾಗುವುದು ಎಂದು ತಿಳಿಸಲಾಯಿತು.

ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ರಾಜ್‌, ನಗರಸಭೆ ಪೌರಾಯುಕ್ತ ಆನಂದ್‌ ಸಿ. ಕಲ್ಲೋಳಿಕರ್‌, ಉಡುಪಿ ತಹಶೀಲ್ದಾರ್‌ ಪ್ರದೀಪ್‌ ,ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್‌ ಮತ್ತು ತಾ|ವೈದ್ಯಾಧಿಕಾರಿಗಳಾದ ನಾಗರತ್ನ, ಮಲ್ಪೆ ಮತ್ತು ಉಡುಪಿ ಪೊಲೀಸ್‌ ಠಾಣೆಯ ಉಪ ನಿರೀಕ್ಷಕರು, ಉಡುಪಿ ತಾ| ಮಟ್ಟದ ಪಿಡಿಒಗಳು, ಹಾಗೂ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

ವಿಶೇಷ ಪ್ಯಾಕೇಜ್‌ ದರ
ಹೊಟೇಲ್‌ ಕ್ವಾರಂಟೈನ್‌ನಲ್ಲಿ ಇರಿಸುವ ಬಗ್ಗೆ ಉಡುಪಿ ತಾಲೂಕಿನ ಹೊಟೇಲ್‌ ಮಾಲಕರಲ್ಲಿ ಹೊರರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ದಿನದ ವಿಶೇಷ ಪ್ಯಾಕೇಜ್‌ ದರದಲ್ಲಿ ವಸತಿ ಸೌಕರ್ಯವನ್ನು ಮತ್ತು ಊಟದ ವ್ಯವಸ್ಥೆಯನ್ನು ನೀಡುವ ಬಗ್ಗೆ ಹೋಟೆಲ್‌ ಮಾಲಕರಲ್ಲಿ ಪ್ರಸ್ತಾವಿಸಿ ವಿಷಯ ತಿಳಿಯಪಡಿಸಲಾಯಿತು.

ಕುಂದಾಪುರ: ಹೊರರಾಜ್ಯದಿಂದ, ವಿದೇಶದಿಂದ ಬರುವವರಿಗೆ 14 ದಿನಗಳ ಸರಕಾರಿ ಕ್ವಾರಂಟೈನ್‌, 14 ದಿನಗಳ ಹೋಂ ಕ್ವಾರಂಟೈನ್‌ ಕಡ್ಡಾಯ ಮಾಡಲಾಗಿದೆ. ಮನೆಯಲ್ಲಿ ಮಾತ್ರ ಇರಲು ಬಿಟ್ಟರೆ ಕಾವಲು ಕಾಯುವುದು ಸಮಸ್ಯೆಯಾದ ಕಾರಣ, ಈಗಾಗಲೇ ಅಂತಹ ಕೆಲವರು ನಿಯಮ ಉಲ್ಲಂಘಿಸಿ ಸಮಸ್ಯೆಗಳಾದ ಹಿನ್ನೆಲೆಯಲ್ಲಿ ಸರಕಾರಿ ಕ್ವಾರಂಟೈನ್‌ಗೆ ತೀರ್ಮಾನಿಸಲಾಗಿದೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

Advertisement

ಅವರು ಶುಕ್ರವಾರ ಸಂಜೆ ಇಲ್ಲಿನ ತಾಲೂಕು ಪಂಚಾಯತ್‌ನಲ್ಲಿ ಕ್ವಾರಂಟೈನ್‌ ಕುರಿತು ಅಧಿಕಾರಿಗಳ ಸಭೆ ನಡೆಸಿದರು.ಸಹಾಯಕ ಕಮಿಷನರ್‌ ಕೆ. ರಾಜು, ಹಣ ನೀಡಿ ಉಳಿದುಕೊಳ್ಳಬಯಸುವವರಿಗೆ ಲಾಡ್ಜ್ ಗಳಲ್ಲಿ ತಂಗಬಹುದು. ಉಳಿದಂತೆ ಹಾಸ್ಟೆಲ್‌, ಕಾಲೇಜು, ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ದೇವಾಲಯಗಳ ಮೂಲಕ ಊಟ, ತಿಂಡಿ ನೀಡ ಲಾಗುವುದು. ದಿನಬಳಕೆ ವಸ್ತುಗಳನ್ನು ಕಂದಾಯ ಇಲಾಖೆ ಮೂಲಕ ನೀಡಲಾಗುವುದು ಎಂದರು.


ಎಎಸ್‌ಪಿ ಹರಿರಾಮ್‌ ಶಂಕರ್‌ ಮಾತನಾಡಿ, ಹೊರರಾಜ್ಯ, ವಿದೇಶದಿಂದ ಬಂದವರಿಗೆ ಕ್ವಾರಂಟೈನ್‌ ಸೀಲು ಹಾಕಲಾಗುವುದು. 25 ಸಾವಿರ ಜನರನ್ನು ಮನೆಗಳಲ್ಲಿ ನಿಗಾ ಇರಿಸುವುದು ಸುಲಭದ ಮಾತಲ್ಲ. ಆದ್ದರಿಂದ ಸರಕಾರಿ ಕ್ವಾರಂಟೈನ್‌ನಲ್ಲಿ ಇದ್ದರೆ ಅಲ್ಲಿ ಭದ್ರತೆಗೆ ಪೊಲೀಸ್‌ ನಿಯೋಜಿಸಲಾಗುವುದು. ಅಲ್ಲಿಂದ ಹೊರಹೋಗಲು, ಅಲ್ಲಿಗೆ ಯಾರಿಗೂ ಪ್ರವೇಶಿಸಲು ಅನುಮತಿ ಇಲ್ಲ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ ಮಾತ ನಾಡಿ, ರೋಗಲಕ್ಷಣಗಳಿದ್ದರೆ ಆಗಮಿಸಿದ ಕೂಡಲೇ, ಅನಂತರ 5ನೇ ದಿನ, 7ನೇ ದಿನ ಗಂಟಲದ್ರವ ತಪಾಸಣೆ ನಡೆಸಲಾಗುವುದು. ಅಂತಹವರನ್ನು ಕೊರೊನಾಗಾಗಿ ಸಿದ್ಧಪಡಿಸಿದ ಕುಂದಾಪುರದ ಹಳೆ ಆದರ್ಶ ಆಸ್ಪತ್ರೆಯಲ್ಲಿ ಇರಿಸಲಾಗುವುದು. ಲಕ್ಷಣಗಳು ಇಲ್ಲದಿದ್ದರೆ ಆಗಮಿಸಿದ 12ನೇ ದಿನ ಗಂಟಲದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗುವುದು. ಇಷ್ಟಲ್ಲದೇ ಮೊಬೈಲ್‌ ಲ್ಯಾಬ್‌ ಮೂಲಕವೂ ಗಂಟಲದ್ರವ ತೆಗೆದು ತಪಾಸಣೆಗೆ ಕಳುಹಿಸುವ ಕಾರ್ಯ ನಡೆಸಲಾಗುವುದು ಎಂದರು.

ಕುಂದಾಪುರ ತಹಶೀಲ್ದಾರ್‌ ತಿಪ್ಪೇಸ್ವಾಮಿ, ಬೈಂದೂರು ತಹಶೀಲ್ದಾರ್‌ ಬಸಪ್ಪ ಪೂಜಾರ್‌, ಬ್ರಹ್ಮಾವರ ತಹಶೀಲ್ದಾರ್‌ ಕಿರಣ್‌ ಗೋರಯ್ಯ, ಕುಂದಾಪುರ ತಾ.ಪಂ. ಇಒ ಕೇಶವ ಶೆಟ್ಟಿಗಾರ್‌, ಬೈಂದೂರು ಇಒ ಭಾರತಿ ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಉತ್ತಮ ವ್ಯವಸ್ಥೆ
ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಸರಕಾರಿ ಕ್ವಾರಂಟೈನ್‌ನವರಿಗೆ ಉತ್ತಮ ವ್ಯವಸ್ಥೆ ನೀಡಬೇಕು. ಅದರಲ್ಲಿ ಲೋಪವಾಗಬಾರದು. ಮನೆಗೆ ಸಮೀಪವಿರುವ ಕ್ವಾರಂಟೈನ್‌ ಸೆಂಟರ್‌ನಲ್ಲಿ ಇರಿಸಿದರೆ ಅನುಕೂಲವಾಗಲಿದೆ. ಹೊರಹೋಗದಂತೆ ಭದ್ರತೆ ಮಾಡಬೇಕು ಎಂದರು.

ಕಾರ್ಕಳ: ಹೊರರಾಜ್ಯದ 6 ಮಂದಿ ಕ್ವಾರಂಟೈನ್‌ಗೆ
ಬೆಳ್ಮಣ್‌: ಮುಂಬೈ, ಗೋವಾ, ಗುಜರಾತ್‌, ತೆಲಂಗಾಣ, ತಮಿಳುನಾಡು ಸಹಿತ ವಿವಿಧ ರಾಜ್ಯಗಳಿಂದ ಬಂದಿರುವ 6 ಮಂದಿಯನ್ನು ಶುಕ್ರವಾರ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಶಬರಿ ಆಶ್ರಮ, ಹೊಟೇಲ್‌ ಪ್ರಕಾಶ್‌, ಬಾಹುಬಲಿ ಪ್ರವಚನ ಮಂದಿರಗಳಲ್ಲಿ ಸುರಕ್ಷಿತವಾಗಿ ಕ್ವಾರಂಟೈನ್‌ ಮಾಡಲಾಗಿದೆ ಎಂದು ಪುರಸಭೆಯ ಹೇಳಿದೆ. ಗುರುವಾರದ ಬಳಿಕ ತಾಲೂಕಿನಿಂದ ಹೊರಗೆ ತೆರಳುವ ಬಸ್ಸು ಕೂಡ ತೆರಳಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next