ರಾಂಚಿ : ಬಹುಕೋಟಿ ಮೇವು ಹಗರಣದಲ್ಲಿ ದೋಷಿ ಎಂದು ಪರಿಗಣಿತರಾಗಿರುವ ಆರ್‌ಜೆಡಿ ಮುಖ್ಯಸ್ಥ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮತ್ತು ಇತರ ದೋಷಿಗಳಿಗೆ ನಾಳೆ ಗುರುವಾರ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಕಳೆದ ವರ್ಷ ಡಿ.23ರಂದು ವಿಶೇಷ ಸಿಬಿಐ ನ್ಯಾಯಾಲಯವು ಲಾಲು ಯಾದವ್ ಮತ್ತು ಇತರ 15 ಮಂದಿ ಬಹುಕೋಟಿ ಮೇವು ಹಗರಣದ ದೋಷಿಗಳೆಂದು ತೀರ್ಮಾನಿಸಿತ್ತು.
ಸಿಬಿಐ ವಿಶೇಷ ನ್ಯಾಯಾಲಯ ಇಂದು ರಘುವಂಶ ಪ್ರಸಾದ್‌ಸಿಂಗ್, ತೇಜಸ್ವಿ ಯಾದವ್ ಮತ್ತು ಮನೋಜ್ ಝಾ ಅವರಿಗೆ ಜನವರಿ 23ರಂದು ತನ್ನ ಎದುರು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತೆಂದು ಎಎನ್‌ಐ ವರದಿ ಮಾಡಿದೆ.
ಬಹು ಕೋಟಿ ಮೇವು ಹಗರಣದಲ್ಲಿ ಲಾಲು ಪ್ರಸಾದ್ ಯಾದವ್‌ಗೆ ಸಿಬಿಐ ವಿಶೇಷ ನ್ಯಾಯಾಲಯ ಇಂದು ಬುಧವಾರವೇ ಶಿಕ್ಷೆಯ ಪ್ರಮಾಣ ಪ್ರಕಟಿಸಿಸುವುದಿತ್ತು. ಅಂತೆಯೇ ಲಾಲು ಅವರನ್ನು ಇಂದು ರಾಂಚಿಯಲ್ಲಿನ ಬಿರ್ಸಾ ಮುಂಡಾ ಜೈಲಿನಿಂದ ಕೋರ್ಟಿಗೆ ಬಿಗಿ ಭದ್ರತೆಯಲ್ಲಿ ತರಲಾಗಿತ್ತು.
ರಾಂಚಿಯ ವಿಶೇಷ ಸಿಬಿಐ ಕೋರ್ಟ್ ಆವರಣದಲ್ಲಿ ಭದ್ರತೆಗಾಗಿ ಸುಮಾರು 300ಕ್ಕೂ ಅಧಿಕ ಭದ್ರತಾ ಸಿಬಂದಿಗಳನ್ನು ಇಂದು ನಿಯೋಜಿಸಲಾಗಿತ್ತು.