ಬೆಳಗಾವಿ: ದಂತ ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಹೊಸ ಆವಿಷ್ಕಾರಗಳಾಗುತ್ತಿದ್ದು, ಇವುಗಳನ್ನಾಧರಿಸಿದ ಚಿಕಿತ್ಸಾ ಕ್ರಮದಿಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಮಕ್ಕಳ ದಂತ ಚಿಕಿತ್ಸಾ ಶಾಸ್ತ್ರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ| ಧನು ಜಿ. ರಾವ್ ಹೇಳಿದರು.
ಕೆಎಲ್‌ಇ ವಿಶ್ವವಿದ್ಯಾಲಯದ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಮಕ್ಕಳ ದಂತ ಚಿಕಿತ್ಸಾ ವಿಭಾಗವು ಶುಕ್ರವಾರ ಆಯೋಜಿಸಿದ್ದ ಮಕ್ಕಳ ಬೇರುನಾಳ ದಂತ ಚಿಕಿತ್ಸೆಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರು ಚಿಕಿತ್ಸಾ ಕ್ರಮದಲ್ಲಿ ಸುಧಾರಣೆ ತಂದುಕೊಳ್ಳಲು ಹಾಗೂ ಹೊಸ ಆವಿಷ್ಕಾರಗಳು ಎಲ್ಲ ವೈದ್ಯರಿಗೆ ತಲುಪಿ ಗುಣಮಟ್ಟದಚಿಕಿತ್ಸೆ ದೊರೆಯಲು ಇಂತಹ ತರಬೇತಿ ಶಿಬಿರಗಳು ಸಹಾಯವಾಗುತ್ತವೆ. ಇಂತಹ ಶಿಬಿರಗಳನ್ನು ಎಲ್ಲ ದಂತ ವಿದ್ಯಾಲಯಗಳು ಆಯೋಜಿಸಿ ಗುಣಮಟ್ಟದಚಿಕಿತ್ಸೆ ಎಲ್ಲ ವರ್ಗದ ಜನರಿಗೆ ಸುಲಭವಾಗಿ ತಲುಪಲು ಕಾರಣವಾಗಬೇಕು ಎಂದರು.
ಕಾರ್ಯಾಗಾರದ ಕಾರ್ಯಧ್ಯಕ್ಷ ಡಾ| ಶಿವಯೋಗಿ ಹೂಗಾರ ಕಾರ್ಯಾಗಾರ ಸಂಘಟಿಸಿ ಉಸ್ತುವಾರಿ ವಹಿಸಿದ್ದಾರೆ. ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ ವಿಕೆ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅಲ್ಕಾಕಾಳೆ ಮಾತನಾಡಿ, ಗುಣಮಟ್ಟದ ದಂತ ಚಿಕಿತ್ಸೆಯು ಹಿಂದುಳಿದ ಸ್ಥಳಗಳ ನಾಗರಿಕರರು, ಬಡವರು, ಬುದ್ಧಿಮಾಂದ್ಯರು, ನಿರ್ಗತಿಕರು ಹಾಗೂ ಸಮಾಜದ ಎಲ್ಲ ವರ್ಗದ, ಎಲ್ಲ ಸ್ಥರದ ಜನರಿಗೆಅವಶ್ಯವಾಗಿ ದೊರೆಯಬೇಕು. ಇದಕ್ಕಾಗಿ ಕೆಎಲ್‌ಇ ದಂತ ಮಹಾವಿದ್ಯಾಲಯ ಶ್ರಮಿಸುತ್ತಿದೆ ಎಂದು ಹೇಳಿದರು.
ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ 125ಕ್ಕೂ ಹೆಚ್ಚು ಮಕ್ಕಳ ದಂತ ವೈದ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಮಹಾರಾಷ್ಟ್ರದ ಮಕ್ಕಳ ದಂತ ವೈದ್ಯರಾದ ಡಾ| ದಯಾನಂದ ಶಿರೋಳ್ ಹಾಗೂ ಡಾ| ನೀಲೇಶ್ ರತಿ ಚಿಕಿತ್ಸೆಯ ಹೊಸ ತಂತ್ರಜ್ಞಾನಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.ಕಾರ್ಯಾಗಾರದಲ್ಲಿ ವೈಜ್ಞಾನಿಕ ವಿಷಯಗಳ ಕಾರ್ಯಾಧ್ಯಕ್ಷ ಡಾ| ಚಂದ್ರಶೇಖರ ಬಡಕರ, ಕೆ.ಎಲ್.ಇ ಸಂಸ್ಥೆಯ ಆಜೀವ ಸದಸ್ಯೆ ಡಾ| ಪ್ರೀತಿ ಕೋರೆ, ಡೀನ್ ಡಾ| ಕೆ.ಎಂ. ಕೆಲೊಸ್ಕರ್, ಉಪ ಪ್ರಾಂಶುಪಾಲ ಡಾ| ಅಂಜನಾ ಬಾಗೇವಾಡಿ ಉಪಸ್ಥಿತರಿದ್ದರು.
ಡಾ| ಗೌತಮ್ ಸ್ವಾಗತಿಸಿದರು. ಡಾ| ಶಿವಯೋಗಿ ಹೂಗಾರ ತರಬೇತಿ ಕಾರ್ಯಾಗಾರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ನೀರಜ್‌ಗೋಖಲೆ ವಂದಿಸಿದರು.