ಚಿಂಚೋಳಿ: ಗುಣಮಟ್ಟದ ಚಿಕಿತ್ಸೆ, ಸಿಬ್ಬಂದಿ ಕರ್ತವ್ಯ ನಿಷ್ಠೆ ಹಾಗೂ ಸಕಲ ಸೌಲಭ್ಯಗಳಿಂದ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
1966ರಲ್ಲಿ ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಆರು ಹಾಸಿಗೆಯುಳ್ಳ ಆಸ್ಪತ್ರೆ ಮಂಜೂರಿ ಮಾಡಿದ್ದರು. ನಂತರ 1974-75ರಲ್ಲಿ ಸಚಿವರಾಗಿದ್ದ ದೇವೇಂದ್ರಪ್ಪ ಜಮಾದಾರ 25ಹಾಸಿಗೆಯುಳ್ಳ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದರು. ತದನಂತರ 1996-97ರಲ್ಲಿ ಮಾಜಿ ಸಚಿವ, ಶಾಸಕರಾಗಿದ್ದ ದಿ. ವೈಜನಾಥ ಪಾಟೀಲ ಅವರು ಜರ್ಮನ್ ದೇಶದ ಆರ್ಥಿಕ ನೆರವಿನಿಂದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ, 100ಹಾಸಿಗೆ ಮಂಜೂರಿ ಮಾಡಿದ್ದರು. 2008ರಲ್ಲಿ ಕೇವಲ ಇಬ್ಬರು ವೈದ್ಯರು ಮಾತ್ರ ಈ ಆಸ್ಪತ್ರೆಯಲ್ಲಿದ್ದರು.
ತದನಂತರ 2013ರಲ್ಲಿ ಶಾಸಕರಾಗಿದ್ದ ಡಾ|ಉಮೇಶ ಜಾಧವ ವೈದ್ಯರು ಮತ್ತು ಸ್ಟಾಫ್ ನರ್ಸ್ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡರು. ತದನಂತರ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಡಾ|ಅವಿನಾಶ ಜಾಧವ ಆಸಕ್ತಿ ವಹಿಸಿ ತಜ್ಞ ವೈದ್ಯರ ನೇಮಕಕ್ಕೆ ಒತ್ತು ನೀಡಿದರು. ಹೀಗಾಗಿ ಉತ್ತಮ ಸೌಲಭ್ಯಗಳು ಲಭಿಸುತ್ತಿವೆ.
ಸಕಲ ಸೌಲಭ್ಯಗಳು ಲಭ್ಯ
ನಗುಮಗು ಆ್ಯಂಬುಲೆನ್ಸ್, ತುರ್ತು ಚಿಕಿತ್ಸಾ ಘಟಕ ವ್ಯವಸ್ಥೆ, ಇಸಿಜಿ, ಆರ್‌ಬಿಎಸ್, ಎಕ್ಸರೇ, ಸ್ತ್ರೀರೋಗ ತಜ್ಞರು, ನೇತ್ರ ತಪಾಸಣೆ, ಮಾನಸಿಕ ರೋಗಿಗಳ ಸಮಾಲೋಚನೆ, ಶಸ್ತ್ರಚಿಕಿತ್ಸೆ, ಟುಬೆಕ್ಟಮಿ ಶಿಬಿರ, ಎಬಿ-ಎಆರ್ ಕೆ ಕಾರ್ಡು ವಿತರಣೆ, ಯುಡಿಐಡಿ ಕಾರ್ಡು, ಎಲಬು ಕೀಲು ತಪಾಸಣೆ, ರಕ್ತ ನಿಧಿ , ಎರಡು ಆಕ್ಸಿಜನ್ ಪ್ಲಾಂಟ್‌ಗಳು, ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಆರಂಭಕ್ಕೆ ಕ್ರಮ, ಕೋವಿಡ್ ರೋಗಿಗಳಿಗಾಗಿ 40ಹಾಸಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ|ಉಮೇಶ ಜಾಧವ, ಶಾಸಕ ಡಾ|ಅವಿನಾಶ ಜಾಧವ ಈ ಎಲ್ಲ ವ್ಯವಸ್ಥೆ ಕಲ್ಪಿಸಲು ಶ್ರಮಿಸಿದ್ದಾರೆ.