Advertisement

Quality Poor Medicine: ಮಾರುಕಟ್ಟೆಗೆ ನಕಲಿ ಔಷಧ ಪ್ರವೇಶ ತಪ್ಪಿಸಿ

03:54 AM Sep 27, 2024 | Team Udayavani |

ದೇಶದ ಪ್ರಮುಖ ಔಷಧ ಉತ್ಪಾದಕ ಕಂಪೆನಿಗಳು ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿದ ಔಷಧಗಳ ಪೈಕಿ ಹಲವು ಔಷಧಗಳು ಪ್ರಮಾಣಿತ ಗುಣಮಟ್ಟವನ್ನು ಹೊಂದಿಲ್ಲ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ(ಸಿಡಿಎಸ್‌ಸಿಒ) ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ. ಔಷಧಗಳ ಗುಣ ಮಟ್ಟದ ಕುರಿತಂತೆ ಕಳೆದ ತಿಂಗಳು ಸಂಸ್ಥೆ ಔಷಧ ತಯಾರಿಕ ಕಂಪೆನಿಗಳಿಗೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿತ್ತು. ಅದರಂತೆ ಸಂಸ್ಥೆ ನಡೆಸಿದ ಗುಣಮಟ್ಟ ಪರೀಕ್ಷೆ ವೇಳೆ 53 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫ‌ಲವಾಗಿವೆ ಎಂದು ತಿಳಿಸಿದೆಯಲ್ಲದೆ ಗುಣ ಮಟ್ಟ ವನ್ನು ಕಾಯ್ದುಕೊಳ್ಳುವಲ್ಲಿ ವಿಫ‌ಲವಾಗಿರುವ ಔಷಧಗಳು ಮತ್ತು ಅವು ಗಳನ್ನು ತಯಾರಿಸಿದ ಕಂಪೆನಿಗಳ ಹೆಸರುಗಳ ಪಟ್ಟಿಯನ್ನು ಬಹಿರಂಗಪಡಿಸಿದೆ.

Advertisement

ಈ ವರದಿಯ ಅತ್ಯಂತ ಅಚ್ಚರಿಯ ಮತ್ತು ಆತಂಕಕಾರಿ ಅಂಶವೆಂದರೆ ಪ್ರಮಾಣಿತ ಗುಣಮಟ್ಟವನ್ನು ಹೊಂದಿರದ ಔಷಧಗಳ ಪಟ್ಟಿಯಲ್ಲಿ ಸಾಮಾನ್ಯವಾಗಿ ಮತ್ತು ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಔಷಧಗಳಾದ ಪ್ಯಾರಾಸಿಟಮಾಲ್‌, ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ3 ಪೂರಕ ಔಷಧಗಳು, ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಣ ಔಷಧಗಳು, ಆ್ಯಸಿಡ್‌ ರಿಫ್ಲಕ್ಸ್‌ ಔಷಧ, ಆ್ಯಂಟಿ ಬಯಾಟಿಕ್‌ ಔಷಧಗಳೂ ಸೇರಿರುವುದು. ಕರ್ನಾಟಕ ಆ್ಯಂಟಿಬಯಾಟಿಕ್ಸ್‌ ಆ್ಯಂಡ್‌ ಫಾರ್ಮಾಸುಟಿಕಲ್ಸ್‌ ಲಿ., ಆಲ್ಕೆಮ್‌ ಲ್ಯಾಬೊರೇಟರೀಸ್‌, ಹೆಟೆರೊ ಡ್ರಗ್ಸ್‌, ಹಿಂದೂಸ್ಥಾನ್‌ ಆ್ಯಂಟಿಬಯೋಟಿಕ್ಸ್‌ ಲಿಮಿಟೆಡ್‌ನ‌ಂತಹ ದೇಶದ ಹೆಸರಾಂತ ಔಷಧ ತಯಾರಿಕ ಕಂಪೆನಿಗಳ ಔಷಧಗಳೂ ಇದರಲ್ಲಿ ಸೇರಿವೆ. ಇದು ನಿಜಕ್ಕೂ ಕಳವಳಕಾರಿ ವಿಷಯವಾಗಿದೆ.

ದೇಶದಲ್ಲಿ ಔಷಧ ತಯಾರಿಕೆ, ಗುಣಮಟ್ಟ, ಸುರಕ್ಷೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಅತ್ಯಂತ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಅನುಸರಿಸುತ್ತ ಬರಲಾಗಿದ್ದರೂ ಇಷ್ಟೊಂದು ಪ್ರಮಾಣದ ಮತ್ತು ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಔಷಧಗಳೇ ಗುಣಮಟ್ಟ ಪರೀಕ್ಷೆಯಲ್ಲಿ ವಿಫ‌ಲವಾಗಿರುವುದು ಒಟ್ಟಾರೆ ಔಷಧ ತಯಾರಿಕ ವ್ಯವಸ್ಥೆಯ ಬಗೆಗೇ ಅನುಮಾನಗಳನ್ನು ಹುಟ್ಟುಹಾಕುವಂತೆ ಮಾಡಿದೆ. ಅಷ್ಟು ಮಾತ್ರವಲ್ಲದೆ ಈಗಾಗಲೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಔಷಧಗಳ ಗುಣಮಟ್ಟವನ್ನು ಪರೀಕ್ಷಿಸುವ ಸಿಡಿಎಸ್‌ಸಿಒ ನಿಲುವು ಕೂಡ ಪ್ರಶ್ನಾರ್ಹ.

ಹಾಗಾದರೆ ಕಳಪೆ ಗುಣಮಟ್ಟದ ಔಷಧಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, ಜನರನ್ನು ಪ್ರಯೋಗದ ಕೂಸುಗಳನ್ನಾಗಿಸಲಾಗುತ್ತಿದೆಯೇ ಎಂಬ ಜಿಜ್ಞಾಸೆಯೂ ಮೂಡಿದೆ. ಈ ದಿಸೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಮತ್ತು ಸಿಡಿಎಸ್‌ಸಿಒ ಔಷಧಗಳ ಪರೀಕ್ಷ ವ್ಯವಸ್ಥೆಯನ್ನು ಇನ್ನಷ್ಟು ನೇರ್ಪುಗೊಳಿಸುವ ಅಗತ್ಯವಿದೆ. ತಯಾರಿಕ ಹಂತದಲ್ಲಿಯೇ ಪ್ರತಿಯೊಂದು ಔಷಧವೂ ಪ್ರಮಾಣಿತ ಗುಣಮಟ್ಟವನ್ನು ಹೊಂದಿರುವುದನ್ನು ಖಾತರಿಪಡಿಸುವ ಕಟ್ಟುನಿಟ್ಟಿನ ಮತ್ತು ಏಕರೂಪದ ವ್ಯವಸ್ಥೆಯನ್ನು ಜಾರಿಗೆ ತರಬೇಕು.

ಆದರೆ ತಮ್ಮ ಮೇಲಣ ಆರೋಪವನ್ನು ನಿರಾಕರಿಸಿರುವ ಔಷಧ ತಯಾರಕ ಕಂಪೆನಿಗಳು, ಸಿಡಿಎಸ್‌ಸಿಒ ಪರೀಕ್ಷೆಗೊಳಪಡಿಸಿದ ಔಷಧಗಳು ನಮ್ಮ ಕಂಪೆನಿಗಳಲ್ಲಿ ತಯಾರಾದದ್ದಲ್ಲವಾಗಿದ್ದು, ಅವೆಲ್ಲವೂ ನಕಲಿ ಎಂದಿವೆ. ಆದರೆ ಸಿಡಿಎಸ್‌ಸಿಒ ಮತ್ತು ಔಷಧ ತಯಾರಕ ಕಂಪೆನಿಗಳ ನಡುವಣ ಈ ಗುದ್ದಾಟದ ಪರಿಣಾಮ ಜನಸಾಮಾನ್ಯರು ಗೊಂದಲಕ್ಕೊಳಗಾಗುವಂತಾಗಿದೆ. ಸದ್ಯ ದೇಶದಲ್ಲಿ ನಕಲಿ ಔಷಧದ ಹಾವಳಿ ವ್ಯಾಪಕವಾಗಿರುವುದರಿಂದ ಔಷಧ ಕಂಪೆನಿಗಳ ಹೇಳಿಕೆಯನ್ನು ಏಕಾಏಕಿ ತಳ್ಳಿಹಾಕಲು ಸಾಧ್ಯವಿಲ್ಲ.

Advertisement

ಹೀಗಾಗಿ ಆರೋಗ್ಯ ಇಲಾಖೆ ಮತ್ತು ಸಿಡಿಎಸ್‌ಸಿಒ ನಕಲಿ ಔಷಧಗಳ ಹಾವಳಿಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದೇ ವೇಳೆ ದೇಶದ ಎಲ್ಲ ಅಧಿಕೃತ ಔಷಧ ತಯಾರಕ ಕಂಪೆನಿಗಳ ಮೇಲೂ ನಿಗಾ ಇರಿಸುವ ಮೂಲಕ ಔಷಧಗಳ ಗುಣಮಟ್ಟದಲ್ಲಿ ಎಲ್ಲೂ ರಾಜಿಯಾಗದಂತೆ ನೋಡಿಕೊಳ್ಳಬೇಕು. ಜನರ ಆರೋಗ್ಯ ರಕ್ಷಣೆ ಸರಕಾರದ ಮಹತ್ತರ ಜವಾಬ್ದಾರಿಗಳಲ್ಲೊಂದಾಗಿದ್ದು, ಪರಸ್ಪರ ಬೆಟ್ಟು ಮಾಡುವ ಮೂಲಕ ಸರಕಾರ ಮತ್ತು ಔಷಧ ತಯಾರಕ ಕಂಪೆನಿಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗದು.

Advertisement

Udayavani is now on Telegram. Click here to join our channel and stay updated with the latest news.

Next