Advertisement

ಔಷಧಗಳ ಗುಣಮಟ್ಟ ಕಠಿನ ಮಾರ್ಗಸೂಚಿ ಅಗತ್ಯ

09:38 PM Jun 26, 2024 | Team Udayavani |

ದೇಶದ ವಿವಿಧ ಔಷಧ ತಯಾರಕ ಕಂಪೆನಿಗಳಿಂದ ಉತ್ಪಾದಿಸಲ್ಪಡುತ್ತಿರುವ ಸುಮಾರು 52 ಔಷಧಗಳ ಗುಣಮಟ್ಟ ಕಳಪೆಯಾಗಿದೆ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ವರದಿ ನೀಡಿದೆ.

Advertisement

ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಈ ಕಂಪೆನಿಗಳ ಔಷಧ ತಯಾರಿಕ ಘಟಕಗಳಲ್ಲಿ ಉತ್ಪಾದಿಸಲಾಗುತ್ತಿರುವ ಈ ಔಷಧಗಳು ನಿಗದಿತ ಗುಣಮಟ್ಟ ಹೊಂದಿಲ್ಲದಿರುವುದು ಸಂಸ್ಥೆ ನಡೆಸಿದ ಈ ಔಷಧಗಳ ಮಾದರಿಯ ಪರೀಕ್ಷೆ ವೇಳೆ ದೃಢಪಟ್ಟಿದೆ. ದೇಶದಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಪದೇಪದೆ ವಿವಿಧ ಔಷಧಗಳ ಗುಣಮಟ್ಟ, ಅವುಗಳಲ್ಲಿ ಬಳಸಲಾಗುವ ರಾಸಾಯನಿಕಗಳ ಬಗೆಗೆ ಔಷಧ ನಿಯಂತ್ರಣ ಸಂಸ್ಥೆ ಆದಿಯಾಗಿ ವಿವಿಧ ಔಷಧ ತಜ್ಞರು ಅನುಮಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದರ ಹೊರತಾಗಿಯೂ ಇಂತಹ ಕಳಪೆ ಗುಣಮಟ್ಟದ, ಅಸುರಕ್ಷಿತ ಔಷಧಗಳನ್ನು ಕಂಪೆನಿಗಳು ಉತ್ಪಾದಿಸುತ್ತಲೇ ಬಂದಿವೆ, ಅವು ಮಾರುಕಟ್ಟೆಗೆ ಬಿಡುಗಡೆಯಾಗಿ ಜನರ ಕೈಸೇರುತ್ತಲೇ ಇವೆ.

ಔಷಧಗಳು ಮಾರುಕಟ್ಟೆಗೆ ಬಿಡುಗಡೆಯಾಗುವ ಮುನ್ನ ಹಲವಾರು ಮಾನದಂಡಗಳನ್ನು ಪೂರೈಸಬೇಕಾಗಿರುತ್ತದೆ. ಇದರ ಹೊರತಾಗಿಯೂ ಇಂತಹ ಕಳಪೆ ಗುಣಮಟ್ಟದ ಔಷಧಗಳು ಸರಾಗವಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ ಎಂದಾದಲ್ಲಿ ಅದು ನಿಜಕ್ಕೂ ಆತಂಕಕಾರಿ ವಿಷಯ. ಸದ್ಯ ಸಿಡಿಎಸ್‌ಸಿಒ ಪರೀಕ್ಷಿಸಿರುವ 52 ಔಷಧಗಳ ಮಾದರಿಯಲ್ಲಿ ಜನರು ಹೆಚ್ಚಾಗಿ ಬಳಸುವ ಪ್ಯಾರಾಸೆಟಮಾಲ್‌, ಪ್ಯಾಂಟಾಪ್‌ರಜೋಲ್‌, ಕ್ಲೋನಾಜೆಪಮ್‌, ಡಿಕ್ಲೋಫೆನಕ್‌, ಟೆಲಿಸಾರ್ಟನ್‌, ಆ್ಯಂಬ್ರೋಕ್ಸಲ್‌, ಫ‌ುಕೊನಜೋಲ್‌ ಮತ್ತಿತರ ಔಷಧಗಳು ಸೇರಿವೆ. ಈ ಔಷಧಗಳನ್ನು ಸಾಮಾನ್ಯವಾಗಿ ಆ್ಯಂಟಿಬಯಾಟಿಕ್‌, ಮೆದುಳಿನ ಆಘಾತ, ಆತಂಕ, ಖನ್ನತೆ, ನೋವು ನಿವಾರಕ, ಅಧಿಕ ರಕ್ತದೊತ್ತಡ, ಉಸಿರಾಟದ ಸಮಸ್ಯೆಗಳಲ್ಲಿ ಬಳಸಲಾಗುತ್ತದೆ. ಇನ್ನು ಸಿಡಿಎಸ್‌ಸಿಒ ಕಳಪೆ ಗುಣಮಟ್ಟವನ್ನು ಹೊಂದಿವೆ ಎಂದು ಹೆಸರಿಸಿರುವ ಔಷಧಗಳಲ್ಲಿ ಕೆಲವು ಆ್ಯಂಟಿಫ‌ಂಗಲ್‌, ಮಲ್ಟಿವಿಟ ಮಿನ್‌ ಮತ್ತು ಕ್ಯಾಲ್ಸಿಯಂ ಔಷಧಗಳೂ ಸೇರಿವೆ. ವೈದ್ಯರಿಂದ ಸಾಮಾನ್ಯ ವಾಗಿ ಶಿಫಾರಸು ಮಾಡಲ್ಪಡುವ ಮತ್ತು ಹೆಚ್ಚು ಬೇಡಿಕೆ ಇರುವ ಔಷಧಗಳ ಗುಣಮಟ್ಟದಲ್ಲಿ ಔಷಧ ತಯಾರಿಕ ಕಂಪೆನಿಗಳು ರಾಜಿ ಮಾಡಿಕೊಳ್ಳು ತ್ತಿರುವುದು ಜನರ ಪ್ರಾಣದ ಜತೆ ಆಡುತ್ತಿರುವ ಚೆಲ್ಲಾಟವೇ ಸರಿ. ಈ ಔಷಧಗಳ ಮಾದರಿಯ ಪರೀಕ್ಷೆಯ ಬಳಿಕ ಈಗ ಸಿಡಿಎಸ್‌ಸಿಒ ಈ ಔಷಧಗಳ ತಯಾರಿಕ ಕಂಪೆನಿಗಳಿಗೆ ನೋಟಿಸ್‌ ಜಾರಿಗೊಳಿಸಿ, ಈಗಾಗಲೇ ಮಾರುಕಟ್ಟೆಯಲ್ಲಿರುವ ಔಷಧಗಳನ್ನು ತತ್‌ಕ್ಷಣ ವಾಪಸು ಪಡೆದುಕೊಳ್ಳುವಂತೆ ಸೂಚನೆ ನೀಡಿದೆ. ಆದರೆ ಇದೇನಿದ್ದರೂ ತಾತ್ಕಾಲಿಕ ಪರಿಹಾರವಷ್ಟೇ ವಿನಾ ಇದರಿಂದ ಔಷಧಗಳ ಗುಣಮಟ್ಟವನ್ನು ನೂರು ಪ್ರತಿಶತ ಖಾತರಿಪಡಿಸಲು ಸಾಧ್ಯವಿಲ್ಲ. ಇನ್ನಾದರೂ ಕೇಂದ್ರ ಸರಕಾರ ಮತ್ತು ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಇತ್ತ ಒಂದಿಷ್ಟು ಹೆಚ್ಚು ಲಕ್ಷ್ಯ ಹರಿಸುವ ಅಗತ್ಯವಿದೆ. ಔಷಧಗಳ ತಯಾರಿ ಪ್ರಕ್ರಿಯೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ವಿಧಾನದಲ್ಲಿ ಲೋಪದೋಷ ಹೊಂದಿರುವುದು ಇಲ್ಲವೇ ಮಾನದಂಡದ ಪಾಲನೆಯಲ್ಲಿ ಅಕ್ರಮ ನಡೆಯುತ್ತಿರುವುದಂತೂ ಸ್ಪಷ್ಟ. ಔಷಧ ನಿಯಂತ್ರಣ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆಯಾದ ಔಷಧಗಳ ಮಾದರಿಯನ್ನು ಪರೀಕ್ಷಿಸಿ, ಆ ಬಳಿಕ ಗುಣಮಟ್ಟದ ಕುರಿತಂತೆ ವರದಿ ನೀಡುವ ಬದಲಾಗಿ ಪ್ರಾಥಮಿಕ ಹಂತದಲ್ಲಿಯೇ ಔಷಧಗಳ ಗುಣಮಟ್ಟವನ್ನು ಖಾತರಿಪಡಿಸಿಯೇ ಅವು ಮಾರುಕಟ್ಟೆಗೆ ಪೂರೈಕೆಯಾಗುವಂಥ ಕಟ್ಟುನಿಟ್ಟಿನ ವ್ಯವಸ್ಥೆ ಜಾರಿಯಾಗಬೇಕು. ಔಷಧಗಳ ಗುಣಮಟ್ಟ ಮತ್ತು ಉತ್ಪಾದನೆ ಬಗೆಗೆ ಸರಕಾರ ಇನ್ನಷ್ಟು ಕಠಿನ ಮತ್ತು ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸಿ, ಅದನ್ನು ಜಾರಿಗೆ ತರಬೇಕು. ಈ ಮಾರ್ಗಸೂಚಿಯನ್ನು ಪಾಲಿಸದ ಔಷಧ ಕಂಪೆನಿಗಳ ಪರವಾನಿಗೆಯನ್ನು ರದ್ದುಗೊಳಿಸುವ ಬಿಗಿ ನಿಲುವನ್ನು ತಾಳಬೇಕು. ಇಲ್ಲವಾದಲ್ಲಿ ಔಷಧಗಳ ಗುಣಮಟ್ಟದ ಬಗೆಗಿನ ಅನುಮಾನ, ಗೊಂದಲಗಳು ನಿತ್ಯ ನಿರಂತರ ಪ್ರಕ್ರಿಯೆಯಾಗಿ ಮಾರ್ಪಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next