Advertisement

Editorial; ಪಂಚಾಯತ್‌ಗಳ ಬಲವರ್ಧನೆಗೆ ರಾಜ್ಯ ಸರಕಾರ ಚಿತ್ತ ಹರಿಸಲಿ

11:52 PM Jun 25, 2024 | Team Udayavani |

ರಾಜ್ಯದಲ್ಲಿ ಜುಲೈ ಒಂದರಿಂದ ಅನ್ವಯವಾಗುವಂತೆ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೂ ನೀಡಲಾಗಿದೆ. ರಾಜ್ಯ ಸರಕಾರದ ಈ ನಿರ್ಧಾರದಿಂದ ಸಾರ್ವಜನಿಕರು ಜನನ ಮತ್ತು ಮರಣ ಪತ್ರಗಳಿಗಾಗಿ ಕಚೇರಿಗಳು ಮತ್ತು ಅಧಿಕಾರಿಗಳ ಬಳಿಗೆ ಅಲೆದಾಟ ನಡೆಸಬೇಕಾದ ಅನಿವಾರ್ಯತೆ ತಪ್ಪಲಿದೆಯಲ್ಲದೆ ಇನ್ನಷ್ಟು ತ್ವರಿತಗತಿಯಲ್ಲಿ ಈ ಪ್ರಮಾಣಪತ್ರಗಳು ಜನರ ಕೈಸೇರಲಿವೆ. ಸದ್ಯದ ನಿಯಮಾವಳಿಯಂತೆ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಮತ್ತು ಆರೋಗ್ಯಾಧಿಕಾರಿಗಳಿಗೆ ಮಾತ್ರವೇ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ಅಧಿಕಾರವಿತ್ತು. ಇದರಿಂದ ಈ ಪ್ರಮಾಣ ಪತ್ರಗಳಿಗಾಗಿ ಬರುವ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿತ್ತು. ಶಿಕ್ಷಣ, ಉದ್ಯೋಗ ಮತ್ತು ಸರಕಾರಿ ಕೆಲಸಕಾರ್ಯಗಳಿಗೆ ಈ ಪ್ರಮಾಣ ಪತ್ರಗಳು ಅತ್ಯಗತ್ಯವಾಗಿದೆ. ನಿರೀಕ್ಷಿತ ಸಂಖ್ಯೆಯಲ್ಲಿ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ಇಲ್ಲದಿರುವುದರಿಂದಾಗಿ ಈ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ಈ ಪ್ರಮಾಣ ಪತ್ರಗಳನ್ನು ಪಡೆಯಲು ಗ್ರಾಮ ಪಂಚಾಯತ್‌ ಕಚೇರಿ, ಆರೋಗ್ಯಾಧಿಕಾರಿಗಳ ಕಚೇರಿಗೆ ಅಲೆದಾಡಲೇ ಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

Advertisement

ಸಮಸ್ಯೆಯ ಗಂಭೀರತೆಯನ್ನು ಕೊನೆಗೂ ಅರಿತ ರಾಜ್ಯ ಸರಕಾರ ಮುಂದಿನ ತಿಂಗಳ ಆರಂಭದಿಂದಲೇ ಜಾರಿಗೆ ಬರುವಂತೆ ಈ ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರವನ್ನು ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಮತ್ತು ಗ್ರಾಮ ಆಡಳಿತಾಧಿಕಾರಿಗಳಿಗೂ ವಿಸ್ತರಿಸಲು ನಿರ್ಧರಿಸಿದೆ. ಹೀಗಾಗಿ ಈ ಪ್ರಮಾಣ ಪತ್ರಗಳನ್ನು ಅತೀ ಸುಲಭವಾಗಿ ಮತ್ತು ಕ್ಲಪ್ತ ಸಮಯದಲ್ಲಿ ಪಡೆದುಕೊಳ್ಳಲು ಸಾರ್ವಜನಿಕರಿಗೆ ಸಹಾಯಕವಾಗಲಿದೆ ಮತ್ತು ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಮತ್ತು ಆರೋಗ್ಯಾಧಿಕಾರಿಗಳ ಮೇಲಣ ಒತ್ತಡ ಕಡಿಮೆಯಾಗಲಿದೆ.

ಇದೇ ವೇಳೆ ಸರಕಾರ ಮತ್ತು ಸಂಬಂಧಿತ ಇಲಾಖೆ, ಈ ಪ್ರಮಾಣ ಪತ್ರಗಳ ನೀಡಿಕೆ ವೇಳೆ ಯಾವುದೇ ಅಕ್ರಮಗಳು ನಡೆಯದಂತೆ ಎಚ್ಚರ ವಹಿಸಬೇಕು. ಗ್ರಾಮ ಪಂಚಾಯತ್‌ ಮಟ್ಟದ ಅಧಿಕಾರಿಗಳಿಂದ ಈ ಪ್ರಮಾಣ ಪತ್ರಗಳನ್ನು ಪಡೆಯಲು ಅವಕಾಶ ಲಭಿಸಿರುವುದರಿಂದ ಪರಿಚಯದ ನೆಪ, ಆಮಿಷ ಮತ್ತಿತರ ಅಕ್ರಮಗಳ ಹಾದಿ ಹಿಡಿದು ಈ ಪ್ರಮಾಣ ಪತ್ರಗಳನ್ನು ಬೇಕಾಬಿಟ್ಟಿಯಾಗಿ ಪಡೆದುಕೊಳ್ಳಲು ಅವಕಾಶ ಲಭಿಸದಂತೆ ನಿಗಾ ಇರಿಸಬೇಕು. ಇದರ ಜತೆ ಅರ್ಜಿ ಸಲ್ಲಿಸಿದ ನಿರ್ದಿಷ್ಟ ಅವಧಿಯೊಳಗಾಗಿ ಪ್ರಮಾಣ ಪತ್ರ ಜನರಿಗೆ ಸಿಗುವಂತೆಯೂ ನೋಡಿಕೊಳ್ಳಬೇಕು. ಇದೇ ವೇಳೆ ರಾಜ್ಯ ಸರಕಾರ ಪಂಚಾಯತ್‌ ರಾಜ್‌ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ಗಳ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವುದರ ಜತೆಯಲ್ಲಿ ಹೆಚ್ಚಿನ ಅಧಿಕಾರವನ್ನು ನೀಡಬೇಕು. ಇದರಿಂದ ಅಧಿಕಾರ ವಿಕೇಂದ್ರೀಕರಣದ ನೈಜ ಉದ್ದೇಶ ಈಡೇರಿದಂತಾಗಲಿದೆಯಲ್ಲದೆ ಜನರಿಗೆ ಸ್ಥಳೀಯ ಮಟ್ಟದಲ್ಲಿಯೇ ಕೆಲವೊಂದು ಸರಕಾರಿ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ. ತ್ರಿಸ್ತರದ ಪಂಚಾಯತ್‌ ರಾಜ್‌ ವ್ಯವಸ್ಥೆ ರಾಜ್ಯದಲ್ಲಿದ್ದರೂ ತಾಲೂಕು ಪಂಚಾಯತ್‌ “ನಾಮ್‌ ಕೆ ವಾಸ್ತೆ’ ಎಂಬಂತಿದೆ. ಗ್ರಾಮ ಪಂಚಾಯತ್‌ನ ಅಧಿಕಾರ ವ್ಯಾಪ್ತಿ ಕೂಡ ಸೀಮಿತವಾಗಿದ್ದು ಬಹುತೇಕ ಅಧಿಕಾರಗಳು ಇನ್ನೂ ಜಿಲ್ಲಾ ಪಂಚಾಯತ್‌ ಅಥವಾ ಸರಕಾರದ ವಿವಿಧ ಇಲಾಖೆಗಳ ಕೈಯಲ್ಲಿಯೇ ಇವೆ. ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಅಧಿಕಾರವನ್ನು ಹಂಚುವ ಮೂಲಕ ಅವನ್ನು ಇನ್ನಷ್ಟು ಸಕ್ರಿಯಗೊಳಿಸಬೇಕು. ಜಿಲ್ಲಾ ಪಂಚಾಯತ್‌ ಮತ್ತು ಸರಕಾರದ ವಿವಿಧ ಇಲಾಖೆಗಳಲ್ಲಿನ ಕಾರ್ಯಬಾಹುಳ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಇನ್ನಾದರೂ ಇತ್ತ ಗಂಭೀರ ಚಿಂತನೆ ನಡೆಸಿ, ಕಾರ್ಯೋನ್ಮುಖವಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next