Advertisement

“ಮನೆಗಳ ಗುಣಮಟ್ಟ ಪರಿಶೀಲನೆಯೂ ಅಗತ್ಯ’

10:57 PM Dec 08, 2019 | Team Udayavani |

ಪಡುಬಿದ್ರಿ:ಇಲ್ಲಿನ ಬೀಡು ಸಮೀಪದ ಜಾಗದಲ್ಲಿ ವಾಸಿಸುತ್ತಿದ್ದು ಅಲ್ಲಿಂದ ಸುಜ್ಲಾನ್‌ ಪುನರ್ವಸತಿ ಕಾಲೋನಿ ಸಮೀಪಕ್ಕೆ ಸ್ಥಳಾಂತರಗೊಂಡು ಕಳೆದ 6 ವರ್ಷಗಳಿಂದ ಅತಂತ್ರರಾಗಿ ಜೀವನ ಸಾಗಿಸುತ್ತಿದ್ದ 18 ಕೊರಗ ಕುಟುಂಬಗಳಿಗೆ ಪಾದೆಬೆಟ್ಟು ಗ್ರಾಮದಲ್ಲಿ ಮಂಜೂರಾಗಿರುವ ಡಿಸಿ ಮನ್ನಾ ಜಮೀನಿನಲ್ಲಿ ಮನೆಗಳು ನಿರ್ಮಾಣವಾಗಿವೆ. ವಿದ್ಯುತ್‌ ಸಂಪರ್ಕ ಕಾರ್ಯವೂ ಬಹುತೇಕ ಮುಗಿದಿದ್ದು ನೀರಿನ ಟ್ಯಾಂಕು, ಪೈಪ್‌ಗ್ಳ ಕಾಮಗಾರಿ ಭರದಿಂದ ಸಾಗುತ್ತಿದೆ. ಜನವರಿಯಲ್ಲಿ ಇವರ ಹೊಸ ಜೀವನ ಪಯಣದ ನವೀನ ಮನೆಗಳ ಒಕ್ಕಲಿಗಾಗಿ ಸದ್ಯ ಕಾಯಲಾಗುತ್ತಿದೆ.

Advertisement

ಈ ಮನೆಗಳ ಮಾಡಿಗೆ ಉತ್ತಮ ಗುಣ ಮಟ್ಟದ ಮರಗಳನ್ನು ಬಳಸಿಲ್ಲವೆಂದು ಇತ್ತೀಚೆಗೆ ಕಾಪು ಶಾಸಕ ಲಾಲಾಜಿ ಮೆಂಡನ್‌ಅವರೇ ಆಕ್ಷೇಪಣೆಗಳನ್ನು ಎತ್ತಿದ್ದಾರೆ. ಮನೆಗಳ ಗುಣಮಟ್ಟ ಪರಿಶೀಲನೆಯೂ ಅಗತ್ಯವಾಗಿದೆ.

ಅನುದಾನಗಳ ಹೊಂದಾಣಿಕೆಯಿಂದ ಮನೆ ನಿರ್ಮಾಣ
ಪಾದೆಬೆಟ್ಟು ಶಾಲೆಯ ಬಳಿಯಿರುವ ಡಿಸಿ ಮನ್ನಾ ಜಮೀನಿನಲ್ಲಿ ಸುಮಾರು 95 ಸೆಂಟ್ಸ್‌ ಜಾಗವನ್ನು ಗೊತ್ತುಪಡಿಸಿ, ಈ ಕೊರಗ ಕುಟುಂಬಗಳಿಗೆ ಮಂಜೂರಾತಿ ಮಾಡಿ ಹಕ್ಕುಪತ್ರ ನೀಡಲಾಗಿದೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ತಲಾ 2.10 ಲಕ್ಷ ರೂ. ಹಾಗೂ ಸಿಂಡಿಕೇಟ್‌ ಬ್ಯಾಂಕ್‌ನ ಸಿಎಸ್‌ಆರ್‌ ನಿಧಿಯಿಂದ ತಲಾ 10 ಸಾವಿರ ಮೊತ್ತವನ್ನು ಸೇರಿಸಿ ರೂ.2.20 ಲಕ್ಷ ವೆಚ್ಚದಲ್ಲಿ ಪ್ರತಿಯೊಂದು ಮನೆಗಳನ್ನು ನಿರ್ಮಿಸಲು 2019ರ ಜನವರಿ ತಿಂಗಳಿನಲ್ಲಿ ಚಾಲನೆ ನೀಡಲಾಗಿತ್ತು. ನಿರ್ಮಿತಿ ಕೇಂದ್ರ ಸಹಿತ ಪಡುಬಿದ್ರಿ ಗ್ರಾ.ಪಂ. ಮತ್ತು ಶಾಸಕರ ಅನುದಾನಗಳೂ ಈ ಮನೆ ನಿರ್ಮಾಣಕ್ಕೆ ಇದೀಗ ಹೊಂದಾಣಿಕೆ ಮಾಡಲಾಗಿದೆ.

ಇದೀಗ ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. ಮನೆಗಳ ವಿದ್ಯುತ್‌ ಸಂಪರ್ಕದ ಬಗ್ಗೆ ಯೋಜನಾ ಪಟ್ಟಿ ಸಿದ್ಧಪಡಿಸಿ ಮೇಲಾಧಿಕಾರಿಗಳಿಗೆ ಪರಿಶೀಲನೆಗಾಗಿ ಕಳುಹಿಸಲಾಗಿದೆ. ಶೀಘ್ರದಲ್ಲಿ ವಿದ್ಯುತ್‌ ಸಂಪರ್ಕ ನೀಡಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಆರು ವರ್ಷಗಳಿಂದ
ಗುಡಿಸಲಲ್ಲಿ ವಾಸ
6 ವರ್ಷಗಳ ಹಿಂದೆ ಸುಜ್ಲಾನ್‌ ಯೋಜನಾ ಪ್ರದೇಶದ ಜಮೀನಿನಲ್ಲಿ ಗುಡಿಸಲುಗಳನ್ನು ನಿರ್ಮಿಸಿ ಪುಟ್ಟ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ 18 ಕೊರಗ ಕುಟುಂಬಗಳನ್ನು ಅಲ್ಲಿಂದ ಒಕ್ಕಲೆಬ್ಬಿಸಲು ಸುಜ್ಲಾನ್‌ ಯೋಜನೆ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯದ ತೀರ್ಪು ಸುಜ್ಲಾನ್‌ ಪರವಾಗಿ ಬಂದಿದೆ.

Advertisement

ಕಂಪೆನಿಯು ಜೂನ್‌ ತಿಂಗಳಿನಲ್ಲಿ ಈ ಕುಟುಂಬಗಳನ್ನು ತೆರವು ಮಾಡಲು ಗಡುವು ವಿ ಧಿಸಿತ್ತು. ಆದರೂ ಈ ಕುಟುಂಬಗಳೂ ಈವರೆಗೂ ಪ್ಲಾಸ್ಟಿಕ್‌ ಹೊದಿಸಿರುವ ಗುಡಿಸಲುಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಕೈಗೆ ಬಂದ ತುತ್ತು ಬಾಯಿಗೆ ಇಲ್ಲ
ಈ ಕೊರಗ ಕುಟುಂಬಗಳಿಗೆ ನ್ಯಾಯಾಲಯದ ಸಮರದಲ್ಲಿ ಜಯ ಲಭಿಸಿದರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಸುಜ್ಲಾನ್‌ ಪುನರ್ವಸತಿ ಕಾಲೋನಿ ಬಳಿ 50 ಸೆಂಟ್ಸ್‌ ಜಮೀನು ಗುರುತಿಸಿ ವಿಂಗಡಿಸಿ ಈ ಕುಟುಂಬಗಳಿಗೆ ನೀಡಲಾಗಿತ್ತು. ಆದರೆ ಅಲ್ಲಿ ವಸತಿ ನಿರ್ಮಾಣ ಮಾಡದಂತೆ ಪುನರ್ವಸತಿ ಕಾಲೊನಿ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿ ನವೆಂಬರ್‌ 2016ರಲ್ಲಿ ಕೊರಗರಿಗೆ ನ್ಯಾಯ ದೊರಕಿತ್ತು. ಆದರೆ ಅಲ್ಲಿ ನಿವೇಶನ ಲಭ್ಯವಾದರೂ ಮನೆ ನಿರ್ಮಾಣ ಮಾಡಲು ಇವರು ಹಿಂಜರಿದಿದ್ದರು. ಆಗ ಹಿಂದಿನ ಜಿಲ್ಲಾ ಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಪಾದೆಬೆಟ್ಟಿನಲ್ಲಿ ಅವರು ಜಮೀನು ಮಂಜೂರು ಮಾಡಿದ್ದರು.

ಶೀಘ್ರ ವಿದ್ಯುತ್‌ ಸಂಪರ್ಕ
ತಲಾ 2ಲಕ್ಷ ರೂ. ಗಳ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಈ 18 ಮನೆಗಳನ್ನು ನಿರ್ಮಿಸಲಾಗಿದೆ. ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾಮಗಾರಿಯಲ್ಲಿ ಲೈನ್‌ ಜೋಡಣೆ, ಟ್ರಾನ್ಸ್‌ಫಾರ್ಮರ್‌ಅಳವಡಿಕೆ ಪೂರ್ಣಗೊಂಡಿದೆ. ಮೆಸ್ಕಾಂಗೆ ಈ 18 ಫಲಾನುಭವಿಗಳು ವೈಯಕ್ತಿಕ ವಿದ್ಯುತ್‌ಜೋಡಣೆಗೆ ಈಗಾಗಲೇ ಕಾಗದ ಪತ್ರ ನೀಡಿದ್ದು ಶೀಘ್ರವಾಗಿ ಮನೆ, ಮನೆಗಳಿಗೂ ವಿದ್ಯುತ್‌ ಸಂಪರ್ಕನೀಡಲಾಗುವುದು. ಬಳಿಕ ಈ ಮನೆಗಳನ್ನು ಜನವರಿಯಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು.
– ವಿಶ್ವನಾಥ್‌, ಪ್ರಬಂಧಕರು,ಐಟಿಡಿಪಿ ಉಡುಪಿ

ವಿದ್ಯುತ್‌ ಸಂಪರ್ಕದ ಬಳಿಕ ಹಸ್ತಾಂತರ
ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಮಂಡಳಿ, ರಾಜೀವ ಗಾಂ ಧಿ ವಸತಿ ನಿಗಮ ನಿಯಮಿತ ಬೆಂಗಳೂರು, ಜಿಲ್ಲಾಡಳಿತ ಉಡುಪಿ, ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರ ಬೆಂಗಳೂರು, ಕಾರ್ಮಿಕ ಇಲಾಖೆ ಹಾಗೂ ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಡಾ | ಬಿ.ಆರ್‌ ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಫಲಾನುಭವಿ ಕುಟುಂಬದ 25 ಸದಸ್ಯರು ಸೇರಿದಂತೆ 60 ಮಂದಿ ಮನೆ ನಿರ್ಮಾಣ ಕಾರ್ಯದ ತರಬೇತಿ ನೀಡಲಾಗಿದೆ. ತರಬೇತಿ ಪಡೆದ ಈ 60 ಮಂದಿ ನಿರ್ಮಾಣ ಕಾರ್ಯದಲ್ಲಿ ಭಾಗಿಗಳಾಗಿ 6 ತಿಂಗಳ ಉದ್ಯೋಗ ಪಡೆದಿದ್ದಾರೆ. ಪ್ರತಿಯೊಬ್ಬರಿಗೆ 400 ರೂ. ವೇತನವನ್ನು ಪಾವತಿಸಲಾಗಿದೆ. ಸದ್ಯ ಈ ಮನೆಗಳಿಗೆ ವಿದ್ಯುತ್‌ ಸಂಪರ್ಕವಾಗಬೇಕು. ಬಳಿಕ ಫಲಾನುಭವಿಗಳಿಗೆ ಈ ಮನೆಗಳನ್ನು ಹಸ್ತಾಂತರಿಸಲಾಗುತ್ತದೆ.
– ಅರುಣ್‌ ಕುಮಾರ್‌, ಯೋಜನಾ ನಿರ್ದೇಶಕ ನಿರ್ಮಿತಿ ಕೇಂದ್ರ ಉಡುಪಿ.

-ಆರಾಮ

Advertisement

Udayavani is now on Telegram. Click here to join our channel and stay updated with the latest news.

Next