ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿನವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ನೀಡಲು ಪಟ್ಟಣದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೂಲಸೌಕರ್ಯದೊಂದಿಗೆ ಸಜ್ಜಾಗಿದೆ.
ತಾಲೂಕು ಹೇಳಿಕೊಳ್ಳುವ ಮಟ್ಟಿಗೆ ಶೈಕ್ಷಣಿಕವಾಗಿ ಅಭಿವೃದ್ಧಿ ಕಾಣದಿದ್ದರು, ಇತ್ತೀಚಿನ ದಿನಗಳಲ್ಲಿ ತಾಲೂಕು ಶೈಕ್ಷಣಿಕಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಉತ್ತಮ ಬೋಧಕವರ್ಗ, ಕಾಲೇಜು ಕೊಠಡಿ, ಕ್ಯಾಂಪಸ್ ಸೇರಿದಂತೆ ಕ್ರೀಡೆಯಲ್ಲಿಯೂ ಸಹ ಅನೇಕ ಸಾಧನೆ ಮಾಡಿದ್ದು, ಬಿ.ಎ, ಬಿಕಾಂ, ಬಿಬಿಎಂ, ಬಿಎಸ್‌ಡಬ್ಲೂ, ಬಿಎಸ್‌ಇ ಕೋರ್ಸ್‌ಗಳಲ್ಲಿ ಸುಮಾರು 550 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, 17 ಮಂದಿ ಉಪನ್ಯಾಸಕರಿದ್ದಾರೆ.
ಈ ಕಾಲೇಜಿಗೆ ಹಲವು ರ್‍ಯಾಂಕ್ ಬಂದಿದ್ದು, ಕ್ರೀಡೆಯಲ್ಲಿ ಚಿನ್ನ, ಬೆಳ್ಳಿ,ಕಂಚು ಪದಕಗಳು ಬಂದಿವೆ. ಕಾಲೇಜು ಫುಲ್ ಆ್ಯಕ್ಟಿವ್: ಕಾಯಂ ಪ್ರಾಂಶುಪಾಲರಿಲ್ಲದೆ ಸೊರಗಿದ್ದ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಆಗಮಿಸಿರುವ ಎಚ್.ಬಿ.ಕುಮಾರಸ್ವಾಮಿ ಕಾಲೇಜಿಗೆ ಚೈತನ್ಯ ತಂದುಕೊಟ್ಟಿದ್ದಾರೆ. ಕಾಲೇಜಿಗೆ ಬಂದ ತಕ್ಷಣ ಕಾಲೇಜು ಮೈದಾನವನ್ನು ಸ್ವತ್ಛಗೊಳಿಸಿ, ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕಕಾರ್ಯ ಆರಂಭಿಸಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ತಾಲೂಕಿನ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಕಾಲೇಜಿನ ಬಗ್ಗೆ ತಿಳಿವಳಿಕೆ ನೀಡುತ್ತಿದ್ದಾರೆ. ಎಲ್ಲಾ ಉಪನ್ಯಾಸಕರನ್ನು ಗಣನೆಗೆ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಕೂಡ ಕ್ರಮಬದ್ಧವಾಗಿ ನಡೆಸುತ್ತಿದ್ದಾರೆ. ಕಾಲೇಜಿಗೆ ಸಂಪೂರ್ಣ ಸ್ಯಾನಿಟೈಸ್ ಮಾಡಿಸಿದ್ದು, ಕಾಲೇಜು ಅಭಿವೃದ್ಧಿಯ ಮುನ್ಸೂಚನೆ ಸಿಕ್ಕಂತಾಗಿದೆ.
ಮಾದರಿ ಕಾಲೇಜು ಮಾಡುವ ಗುರಿ: ಈ ಕಾಲೇಜಿನಲ್ಲಿ ಬಹುತೇಕ ಮೂಲಸೌಲಭ್ಯಗಳಿದ್ದು, ಕೊರತೆ ಇರುವ ಸೌಲಭ್ಯವು ಕೆಲದಿನಗಳಲ್ಲಿ ಪೂರೈಸುತ್ತೇನೆ, ಕಾಲೇಜಿನಲ್ಲಿ 16 ಸಾವಿರ ಪುಸ್ತಕಗಳಿದ್ದು, ಒಳ್ಳೆಯ ಉಪನ್ಯಾಸಕರ ವರ್ಗವಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿದೆ, ಉತ್ತಮ ಕಟ್ಟಡವಿದ್ದು ನೂತನವಾಗಿ ಸುಮಾರು 10 ಕೊಠಡಿಗಳು ಉದ್ಘಾಟನೆಗೆ ಸಿದ್ಧವಾಗಿವೆ. ಬಿಎಸ್‌ಇ ಕೋರ್ಸ್ ಪ್ರಾರಂಭವಾಗಿದ್ದು ಶೀಘ್ರದಲ್ಲಿ ಲ್ಯಾಬ್ ಸೌಲಭ್ಯ ಸಿಗುತ್ತದೆ. ನಮ್ಮ ಕಾಲೇಜಿನಲ್ಲಿ ಇಷ್ಟೆಲ್ಲ ಸೌಲಭ್ಯವಿದ್ದರೂ ಸಹ ಬೇರೆ ತಾಲೂಕಿಗೆ ಡಿಗ್ರಿ ಓದಲು ಹೋಗುವುದು ಸರಿಯಲ್ಲ, ಪೋಷಕರಿಗೆ ನಾನು ಭರವಸೆ ನೀಡುತ್ತೇನೆ, ನಿಮ್ಮ ಮಕ್ಕಳನ್ನು ನಮ್ಮ ಕಾಲೇಜುಗೆ ಸೇರಿಸಿ ಅವರನ್ನು ತಿದ್ದಿ ಡಿಗ್ರಿ ಪದವಿಕೊಡಿಸುವುದು ನಮ್ಮ ಜವಾಬ್ದಾರಿ ಎಂದು ನೂತನ ಪ್ರಾಂಶುಪಾಲ ಎಚ್.ಬಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ
ಚೇತನ್