ಸೂರ್ಯನ ಸ್ವರೂಪದಂತೆ ಮುಖ ಮಾಡಿ ಅರಳಿ ನಿಂತಿರುವ ಸೂರ್ಯಕಾಂತಿ, ಭಪ್ಪರೆ ಫಸಲು ಎನ್ನುವ ಉದ್ಗಾರ ಬರುವಂತೆ ಬೆಳೆದು ನಿಂತ ಗೋವಿನಜೋಳ, ಕೃಷಿ ವಿಶ್ವವಿದ್ಯಾಲಯದಲ್ಲಿನ ಪ್ರಾತ್ಯಕ್ಷಿಕೆಗಳನ್ನು ನೋಡಿದ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡುವ ಶೇಂಗಾ ಮತ್ತು ಅಲಸಂದಿ ಬೆಳೆ!
ಹೌದು, ಕೃಷಿ ಮೇಳದ 3ನೇ ದಿನವಾದ ರವಿವಾರ ಉತ್ತರ ಕರ್ನಾಟಕ ಭಾಗದ ನಾನಾ ಜಿಲ್ಲೆಗಳಿಂದ ರೈತರು ಮೇಳಕ್ಕೆ ಭೇಟಿ ನೀಡಿ, ಕೃಷಿ ಪ್ರಾತ್ಯಕ್ಷಿಕೆಗಳನ್ನು ಕಣ್ಣರಳಿಸಿಕೊಂಡು ವೀಕ್ಷಿಸಿದರು. ಜಾನುವಾರು ಪ್ರದರ್ಶನ ವೀಕ್ಷಿಸಿದ ಜನ ಪಕ್ಕದಲ್ಲಿ ಇರುವ ಕೃಷಿ ಪ್ರಾತ್ಯಕ್ಷಿಕೆಗಳತ್ತ ಕೂಡ ಹೆಜ್ಜೆ ಹಾಕುವ ದೃಶ್ಯ ಕಂಡು ಬಂದಿತು.
ವಿವಿ ಆವರಣದಲ್ಲಿ ಸಂಶೋಧನೆಗಾಗಿ ಬೆಳೆಸಿದ ಬೆಳೆಗಳನ್ನು ರೈತರು ಕಣ್ತುಂಬಿಕೊಂಡರು. ಆರೇಳು ಅಡಿ ಎತ್ತರಕ್ಕೆ ಬೆಳೆದು ನಿಂತಿದ್ದ ಕೆಬಿಎಸ್‌ಎಚ್-53 ತಳಿಯ ಸೂರ್ಯಕಾಂತಿ ಬೆಳೆ ಹೆಚ್ಚು ಗಮನ ಸೆಳೆದಿದ್ದು, ಜನತೆ ಬೆಳೆಯೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.
ಬ್ರಿಂಜಲ್ ಡಿಡಬುಬಿ-2 ತಳಿಯ ಬದನೆ, ಭೀಮಾ ಸೂಪರ್ ತಳಿಯ ಈರುಳ್ಳಿ, ಡಿಎಂಟಿ-3 ತಳಿಯ ಟೋಮೋಟೋ ಸೇರಿದಂತೆ ವಿವಿಧ ಬೆಳೆಗಳು ರೈತರನ್ನು ತಮ್ಮತ್ತ ಸೆಳೆದವು. ಇನ್ನು ಶೇಂಗಾ ಬೆಳೆಯಲ್ಲಿ ಏಳೆಂಟು ಮಾದರಿ ತಳಿಗಳು ಪ್ರಾತ್ಯಕ್ಷಿಕೆಯಲ್ಲಿ ಇದ್ದು, ಈ ಪೈಕಿ ಮೊನ್ನೆಯಷ್ಟೇ ಕೃಷಿ ವಿವಿ ಬಿಡುಗಡೆ ಮಾಡಿರುವ ಡಿಎಚ್-245 ಶೇಂಗಾ ತಳಿ ಎಲ್ಲರ ಗಮನ ಸೆಳೆದಿದೆ.
100-110 ದಿನಗಳ ಅವಧಿಯ ಬೆಳೆ ಇದಾಗಿದ್ದು, ಒಂದು ಎಕರೆಗೆ 110-120 ಕ್ವಿಂಟಲ್‌ನಷ್ಟು ಇಳುವರಿ ನೀಡುವ ಸಾಮರ್ಥಯ ಹೊಂದಿದೆ. ಇದಲ್ಲದೇ ಈ ಬೆಳೆಯ ಶೇಂಗಾ ಕಾಳಿನಲ್ಲಿ ಕೊಬ್ಬಿನಾಂಶ ಕಡಿಮೆ ಇದ್ದು, ಇದರಿಂದ ತಯಾರಿಸಿದ ಅಡುಗೆ ಎಣ್ಣೆ ಬಹಳಷ್ಟು ದಿನಗಳವರೆಗೆ ಹಾಳಾಗದೆ ಆರೋಗ್ಯ ಪೂರ್ಣವಾಗಿ ಬರುವ ಗುಣ ಹೊಂದಿದೆ ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.