Advertisement

ಉಗ್ರ ನಿಗ್ರಹ ಸಂಕಲ್ಪ; ಕಾರ್ಯಕಾರಿ ಪಡೆ ರಚನೆಗೆ ಕ್ವಾಡ್‌ ನಿರ್ಧಾರ

09:22 PM Mar 03, 2023 | Team Udayavani |

ಬೀಜಿಂಗ್‌/ನವದೆಹಲಿ:ಇಂಡೋ-ಪೆಸಿಫಿಕ್‌ ವಲಯದಲ್ಲಿ ಶಾಂತಿಯುತ ಮತ್ತು ಮುಕ್ತ ವಾತಾವರಣ ಇರಬೇಕು. ಈ ವಲಯದಲ್ಲಿ ಇರುವ ದೇಶಗಳ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವುದೇ ಪ್ರಧಾನ ಆದ್ಯತೆಯಾಗಬೇಕು ಎಂದು ಕ್ವಾಡ್‌ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಅಭಿಪ್ರಾಯಪಟ್ಟಿದೆ.

Advertisement

ಇದಲ್ಲದೆ, ಜಗತ್ತಿನ ಭದ್ರತೆಗೆ ಹಾಗೂ ಅಸ್ತಿತ್ವಕ್ಕೆ ಅಪಾಯಕಾರಿಯಾಗಿರುವ ಭಯೋತ್ಪಾದನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕಾರ್ಯಕಾರಿ ಸಮಿತಿ ಸ್ಥಾಪನೆಗೆ ಕೂಡ ನವದೆಹಲಿಯಲ್ಲಿ ಶುಕ್ರವಾರ ನಡೆದ ಕ್ವಾಡ್‌ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ. ಹೊಸ ರೀತಿಯ ಉಗ್ರವಾದ, ಪ್ರತ್ಯೇಕತಾವಾದ ಮತ್ತು ಹಿಂಸಾತ್ಮಕ ಚಟುವಟಿಕೆಗಳನ್ನು ತಡೆಯಲು ಇಂಥ ಕ್ರಮ ಅಗತ್ಯವೆಂದು ಪ್ರತಿಪಾದಿಸಲಾಗಿದೆ.

ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌, ಜಪಾನ್‌ ವಿದೇಶಾಂಗ ಸಚಿವೆ ಯೋಶಿಮಾಸಾ ಹಯಾಶಿ, ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್‌ ಸಭೆಯಲ್ಲಿ ಭಾಗವಹಿಸಿದ್ದರು.

ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ಮಾತನಾಡಿ ” ಇಂಡೋ-ಪೆಸಿಫಿಕ್‌ ವಲಯದಲ್ಲಿ ಶಾಂತಿಯುತ ಸ್ಥಿತಿ ನಿರ್ಮಾಣವಾಗಬೇಕು. ಕ್ವಾಡ್‌ ಮತ್ತು ಇತರ ವೇದಿಕೆಗಳ ಮೂಲಕ ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯಾಗಬೇಕು. ಭವಿಷ್ಯದ ದಿನಗಳ ಹಿನ್ನೆಲೆಯಲ್ಲಿ ಇದು ಮಹತ್ವದ್ದು’ ಎಂದರು.

ಇಂಡೋ-ಪೆಸಿಫಿಕ್‌ ವಲಯದಲ್ಲಿ ಮುಕ್ತವಾಗಿರುವ ಹಾಗೂ ಎಲ್ಲರನ್ನೂ ಒಳಗೊಂಡಿರುವ ವ್ಯವಸ್ಥೆಗೆ ಬೆಂಬಲ ಇದೆ ಎಂದು ಸಭೆಯ ಬಳಿಕ ಜಂಟಿ ಹೇಳಿಕೆ ಹೊರಡಿಸಲಾಗಿದೆ. ಇದಲ್ಲದೆ, ಎಲ್ಲಾ ವರ್ಗದ ಭಯೋತ್ಪಾದನೆಯ ವಿರುದ್ಧವೂ ಹೋರಾಟ ನಡೆಸುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ಮಾಡಲು ಪಣ ತೊಡಲಾಗಿದೆ. 26/11, ಪಠಾಣ್‌ಕೋಟ್‌ ವಾಯು ನೆಲೆಯ ಮೇಲೆ ದಾಳಿಗಳ ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಲಾಗಿದೆ.

Advertisement

ಚೀನ ಖಂಡನೆ:
ಈ ಸಭೆಯ ಬಗ್ಗೆ ಚೀನಾ ಟೀಕೆ ವ್ಯಕ್ತಪಡಿಸಿದ್ದು, ವಿವಿಧ ರಾಷ್ಟ್ರಗಳ ನಡುವಿನ ಸಭೆ ಶಾಂತಿ ಮತ್ತು ಅಭಿವೃದ್ಧಿಗೆ ಕಾರಣವಾಗಬೇಕು. ಅದು ಪ್ರಾದೇಶಿಕ ಭದ್ರತೆಗೆ ಕೊಡುಗೆ ನೀಡಬೇಕೇ ಹೊರತು, ಮತ್ತೂಂದು ರಾಷ್ಟ್ರವನ್ನು ಹೊರಗಿರಿಸುವ ಪ್ರಯತ್ನ ಆಗಬಾರದು ಎಂದಿದೆ.

ಸಂಕಷ್ಟದಲ್ಲೂ ಕುತಂತ್ರ ಬಿಡದ ಪಾಕ್‌
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದಲ್ಲಿ ಜನರು ಜೀವನೋಪಾಯಕ್ಕಾಗಿ ಪರದಾಡುತ್ತಿದ್ದರೆ, ಇತ್ತ ಪಾಕ್‌ ಭಾರತದ ವಿರುದ್ಧ ಪ್ರಚಾರ ಮಾಡುವ ಗೀಳನ್ನು ಇನ್ನೂ ಬಿಟ್ಟಿಲ್ಲ. ಕಾಶ್ಮೀರ ವಿಚಾರದಲ್ಲಿ ಆಧಾರ ರಹಿತ ಆರೋಪ ಮಾಡುವುದನ್ನು ಬಿಟ್ಟು,ತನ್ನ ದೇಶದ ಜನರ ಪರಿಸ್ಥಿತಿ ಸುಧಾರಿಸಲು ಕೆಲಸ ಮಾಡಲಿ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ತಿರುಗೇಟು ನೀಡಿದೆ. ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಪಾಕ್‌ ಪ್ರತಿನಿಧಿ ಹೀನಾ ರಬ್ಟಾನಿ, ಕಣಿವೆಯಲ್ಲಿ ಭಾರತದ ಅಧಿಕಾರಿಗಳು ಕಾಶ್ಮೀರಿಗಳ ಹಕ್ಕು ಕಸಿಯುತ್ತಿದ್ದಾರೆಂದು ಆರೋಪಿಸಿದರು. ಈ ವೇಳೆ ಭಾರತ ಪ್ರತಿನಿಧಿ ಸೀಮಾ ಪೂಜಾನಿ ಈ ರೀತಿ ತಿರುಗೇಟು ನೀಡಿದರು.

ಬ್ಲಿಂಕನ್‌ ರಿಕ್ಷಾ ಸವಾರಿ…
ಕ್ವಾಡ್‌ ಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ್ದ ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌, ದೆಹಲಿಯಲ್ಲಿ ರಿಕ್ಷಾದಲ್ಲಿ ಸಂಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next