ಬೆಂಗಳೂರು: ಇಸ್ಪೀಟ್ ಕಾರ್ಡ್‌ಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಿ ಸುಲಭವಾಗಿ ಹಣಗಳಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಯಶವಂತಪುರ ನಿವಾಸಿ ಇಮ್ರಾನ್ (29) ಬಂಧಿತ. ಆರೋಪಿಯಿಂದ 4 ಲಕ್ಷ ರೂ. ಮೌಲ್ಯದ ಕ್ಯೂಆರ್ ಕೋಡ್ ಅಳವಡಿಸಿದ್ದ ಇಸ್ಪೀಟ್ ಕಾರ್ಡ್, ಮೈಕ್ರೋ ಕ್ಯಾಮೆರಾ, ವಿವಿಧ ಮಾದರಿ ಯ ಸ್ಕ್ಯಾನರ್ ಹಾಗೂ ಇತರೆ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಸ್ಮಾಯಿಲ್ ಮತ್ತು ಪರವಿಂದಸಿಂಗ್ ಎಂಬವರು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ದೆಹಲಿಗೆ ಬರುತ್ತಿದ್ದ ಕಾರ್ಡ್: ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ಇಮ್ರಾನ್, ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಪೇರಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇಸ್ಮಾಯಿಲ್ ಮತ್ತು ಪರಿವಿಂದಸಿಂಗ್ ಪರಿಚಯವಾಗಿತ್ತು. ಅವರಿಬ್ಬರು ದೆಹಲಿಯಿಂದ ಕ್ಯೂಆರ್ ಕೋಡ್ ಅಳವಡಿಸಿದ್ದ ಇಸ್ಪೀಟ್ ಕಾರ್ಡ್ ಗಳನ್ನು ತರಿಸಿಕೊಂಡು, ಇಮ್ರಾನ್ ಜತೆ ಸೇರಿ ನಗರದಲ್ಲಿ ಜೂಜಾಟಕ್ಕೆ ಬಳಸುತ್ತಿದ್ದರು ಎಂದು ಪೊಲೀಸರು ಹೇಳಿದರು.
ಜೂಜು ಅಡ್ಡೆಗಳಲ್ಲಿ ಕೃತ್ಯ: ಇಸ್ಪೀಟ್ ಕಾರ್ಡ್‌ಗಳು ದೆಹಲಿಯಲ್ಲಿಯೇ ಸ್ಕ್ಯಾನ್ ಮಾಡಿ ಕಳುಹಿಸುತ್ತಿದ್ದರು. ಇದರಿಂದಾಗಿ ಕಾರ್ಡ್‌ಗಳ ಚಲವಲನದ ಮಾಹಿತಿ ದೆಹಲಿಯಲ್ಲಿದ್ದ ಗ್ಯಾಂಗ್‌ಗೆ ಗೊತ್ತಾಗುತ್ತಿತ್ತು. ಜೂಜಾಡುವಾಗ ಎದುರಾಳಿ ವ್ಯಕ್ತಿಯಲ್ಲಿ ಯಾವ ಕಾರ್ಡ್ ಇದೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ಮೊಬೈಲ್, ಕೈ ಗಡಿಯಾರ ಹಾಗೂ ಹೆಡ್ ಸ್ಪೀಕರ್ ಮೂಲಕ ಮತ್ತೂಬ್ಬ ವ್ಯಕ್ತಿಗೆ ರವಾನಿಸುತ್ತಿದ್ದರು. ಪರಿಚಿತರನ್ನು ಜೂಜಾಟದಲ್ಲಿ ತೊಡಗಿಸಿ, ಲಕ್ಷಾಂತರ ರೂ. ಗೆಲ್ಲುತ್ತಿದ್ದರು ಸಿಸಿಬಿ ಪೊಲೀಸರು ಹೇಳಿದರು.
ಪರೀಕ್ಷೆ ಬಳಿಕ ವಿಚಾರಣೆ: ಯಶವಂತಪುರದ ಮನೆಯಲ್ಲಿ ದಂಧೆ ನಡೆಸುತ್ತಿದ್ದ ಕುರಿತು ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದೆ. ಸದ್ಯ ಆರೋಪಿಯನ್ನು ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.