Advertisement
ಈ ತೆರನಾದ ಪರಕೀಯರ ದಬ್ಟಾಳಿಕೆ, ಸ್ವಂತಿಕೆಗೆ ಮರ್ಮಾಘಾತ ಆದಾಗ ಬಿಲ್ಲುಬಾಣ ಹೆಗಲಿಗೇರಿಸಿ ಹಗಲು ರಾತ್ರಿ ಹೋರಾಡಿದ ಬಿಸಿನೆತ್ತರ ಯುವಕ ಕಿಯಾಂಗ್ ನಾಂಗ್ಬಾ. ಪೂರ್ವ ಜೈಂತಿಯೊ ಬೆಟ್ಟಗುಡ್ಡಗಳಲ್ಲಿ ಈ ಸ್ವಾತಂತ್ರ್ಯ ಯೋಧನ ಹೋರಾಟದ ಸಿಂಹ ಘರ್ಜನೆ ಪ್ರತಿಧ್ವನಿಸಲಾರಂಭಿಸಿತು. “ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಈತ ದ್ರೋಹ ಎಸಗುತ್ತಿದ್ದಾನೆ; ಈತ ಶಿಕ್ಷಾರ್ಹ ಬಂಡುಕೋರ’ ಎಂದೆಲ್ಲ ಹಣೆಪಟ್ಟಿಯೊಂದಿಗೆ ಈತನ ಸೆರೆಗೆ ಸರಕಾರ ಮುಂದಾಯಿತು. ಆಗತಾನೇ ಈಸ್ಟ್‌ಇಂಡಿಯಾ ಕಂಪೆನಿಯಿಂದ ನೇರ ಅಧಿಕಾರ ಪಡೆದುಕೊಂಡ ಲಂಡನ್ ಕೇಂದ್ರೀಕೃತ ಬ್ರಿಟಿಷ್ ಸರಕಾರದ ಕದಂಬ ಬಾಹು ದೂರದ ಈಶಾನ್ಯ ಭಾರತದ ಪದರ ಪದರಕ್ಕೂ ಚಾಚಿತ್ತು! ಸಿಡಿದೇಳುವ ಸ್ವಾತಂತ್ರ್ಯ ಕಿಡಿಗಳನ್ನು ಅಡಗಿಸಲು ಗುಡ್ಡಗಾಡು ಜನಾಂಗದಿಂದಲೇ ಆಯ್ದ ಯುವಕರ ಅಸ್ಸಾಂ ರೈಫಲ್ಸ್ ಪಡೆ ಸಿದ್ಧಗೊಂಡಿತು. ಸ್ವಾತಂತ್ರ್ಯದ ಧ್ವನಿ ಎತ್ತಿದವರ ಹುಟ್ಟಡಗಿಸುವ ಕಾರ್ಯಕ್ಕೆ ವಿಷಾದನೀಯ ವಿಪರ್ಯಾಸ ಎಂಬಂತೆ ಮಣ್ಣಿನ ಮಕ್ಕಳದೇ ಪಡೆ ಸಿದ್ಧಗೊಂಡಿತು! ಈಶಾನ್ಯ ಭಾರತದ ಈಗಿನ ಮಣಿಪುರ, ನಾಗಾಲ್ಯಾಂಡ್, ಮಿಜೋರಾಮ್ ಇಲ್ಲೆಲ್ಲಾ ಆಂಗ್ಲ ಸೈನ್ಯಾಧಿಕಾರಿ ಆದೇಶ ಹೊತ್ತ ದೇಸೀ ಪಡೆಗಳೇ ನೆಲದ ಮುಕ್ತತೆಯ ಉಸಿರು ತಡೆಯಲಾರಂಭಿಸಿದವು.
ಅಂತಹ ದಾರುಣ, ಪಾರತಂತ್ರ್ಯದ ದಿನಗಳಲ್ಲಿ ಚಾರಿತ್ರಿಕ ಎನಿಸುವ ವೀರಗಾಥೆ ಸೃಜಿಸಿದ ಕಿಯಾಂಗ್ ನಾಂKiang nangbahಗ್ಬಾ ಅಪ್ರತಿಮ ರಾಷ್ಟ್ರಭಕ್ತ; ಆಂಗ್ಲರಿಗೆ ಸಿಂಹಸ್ವಪ್ನವೂ ಆಗಿದ್ದ. ಆದರೇನು? ಬ್ರಿಟಿಷರು ಕುಟಿಲೋಪಾಯ ಬಲೆ ಬೀಸಿದರು. ಕೊನೆಗೊಂದು ದಿನ ತನ್ನ ಆಪ್ತರೇ ಈತನ ಚಲನವಲನದ ಸ್ಪಷ್ಟ ಮಾಹಿತಿ ಆಂಗ್ಲ ಅಧಿಕಾರಿಗೆ ರವಾನಿಸಿಬಿಟ್ಟರು. ಇದರ ಅರಿವೇ ಇಲ್ಲದ ತರುಣ ನಾಂಗ್ಬಾ ಬ್ರಿಟಿಷರ ಬಂಧಿಯಾದ; ತನ್ನವರ ವಿಶ್ವಾಸದ್ರೋಹದ ಫಲಶ್ರುತಿಯಾಗಿ ಶಿಲ್ಲಾಂಗ್‌ನಿಂದ ಬಹುದೂರದ ಜುವಾç ಎಂಬ ಸ್ಥಳದ ಸಮೀಪ ಬಂಧನಕ್ಕೊಳಗಾದ. ಮುಂದಿನ ಕಥೆ ಕರುಣಾಜನಕ ವ್ಯಥೆಯ ಪ್ರಸಂಗ. “ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ದ್ರೋಹ ಬಗೆದಾತ’ ಎಂಬ ಹಣೆಪಟ್ಟಿಯೊಂದಿಗೆ ಭಾರತದ ವೀರಪುತ್ರನಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಯಿತು. ಜುವಾಯಿ ಪಟ್ಟಣದ ಇವಾಮ್ಯುಸಿಯಾಂಗ್ ಎಂಬಲ್ಲಿ ಬಹಿರಂಗವಾಗಿ, ಸಾರ್ವಜನಿಕರ ಎದುರಿಗೇ ಮರಕ್ಕೆ ಕುಣಿಕೆ ಬಿಗಿದು ನೇತುಹಾಕಲಾಯಿತು. ನೇಣಿಗೆ ಶರಣಾಗುವ ಮೊದಲು ಅಲ್ಲಿ ಕಂಬನಿ ತುಂಬಿ ಮೂಕವಿಸ್ಮಿತರಾಗಿ ನಿಂತ ಸಹಸ್ರಾರು ಜನರನ್ನು ಉದ್ದೇಶಿಸಿ ಕಿಂಗ್ ನಾಂಗ್ಬಾ ಘೋಷಿಸಿದ ಅಮರವಾಣಿ ಇಂದಿಗೂ ಅಲ್ಲಿ ಜನಜನಿತ. “ತನ್ನ ಮೃತಶರೀರದ ಮುಖ ಪೂರ್ವಾಭಿಮುಖವಾಗಿ ನಿಂತರೆ ಕೇವಲ 100 ವರ್ಷಗಳೊಳಗೇ ನನ್ನ ಈ ಮಾತೃಭೂಮಿ ಸ್ವತಂತ್ರಗೊಳ್ಳುತ್ತದೆ. ಒಂದೊಮ್ಮೆ ನನ್ನ ನಿರ್ಜೀವ ಮುಖ ಪಶ್ಚಿಮಾಭಿಮುಖವಾಗಿ ತಿರುಗಿಬಿಟ್ಟರೆ ಆಗ… ನೀವೆಲ್ಲ ಶಾಶ್ವತವಾಗಿ ಗುಲಾಮಗಿರಿಯಲ್ಲೇ ಇರಬೇಕಾಗುತ್ತದೆ’. ಈ ಭವಿಷ್ಯವಾಣಿ ನೂರಕ್ಕೆ ನೂರು ಪ್ರತಿಶತ ನಿಜವಾಯಿತು. 1857ರಿಂದ ಅರ್ಥಾತ್ ಪ್ರಥಮ ಸಂಗ್ರಾಮದ ಬಳಿಕ ಕೇವಲ 9 ದಶಮಾನಗಳವರೆಗೆ ಅಂದರೆ 1947ರ ವರೆಗೆ ಮಾತ್ರ ಈ ನೆಲದ ಬಾನಲ್ಲಿ ಯೂನಿಯನ್ ಜ್ಯಾಕ್ ಬಾವುಟ ಹಾರಿತು. 1862ರಿಂದ ಕೇವಲ 85 ವರ್ಷಗಳೊಳಗೆ ತ್ರಿವರ್ಣ ಧ್ವಜ ಆ ಮಹಾನ್ ಚೇತನ ಅಮರವಾದ ಜಾಗದಲ್ಲೂ ಹಾರಿತು. ಕಿಯಾಂಗ್ ನಾಂಗ್ಬಾನ ಅಮರ ಚೇತನಕ್ಕೆ ಸಾಕ್ಷಿಯಾಗಿ ಜುವಾಯಿಯ ಪ್ರಶಾಂತ ಹಸಿರು ಪರಿಸರದಲ್ಲಿ ಸುಂದರ ಸ್ಮಾರಕ ಅಪಾರ ದೇಶಭಕ್ತರನ್ನು ಸೆಳೆಯುತ್ತಿದೆ; ರಾಷ್ಟ್ರಪ್ರೇಮದ ಸಿಂಚನ ಮೂಡುತ್ತಿದೆ. ಪಿ. ಅನಂತಕೃಷ್ಣ ಭಟ್