ಕತಾರ್: ಕತಾರ್ ದೇಶದಲ್ಲಿ ಜನರು ಕೋವಿಡ್-19 ಆ್ಯಪ್ ಬಳಸುವುದು ಕಡ್ಡಾಯವಾಗಿದ್ದು, ಇದರ ಕ್ಷಮತೆಯನ್ನು ತಜ್ಞರು ಪ್ರಶ್ನಿಸಿದ್ದಾರೆ.
ಕೋವಿಡ್-19ಗೆ ಸಂಬಂಧಿಸಿದ ಎಹತೆರಾಜ್ ಆ್ಯಪ್‌ನಲ್ಲಿ ಸೋಂಕಿತರನ್ನು ಗುರುತಿಸಲು ಸಾಧ್ಯವಿದ್ದು, ಆ್ಯಪ್‌ನಲ್ಲಿ ಖಾಸಗಿತನಕ್ಕೆ ಧಕ್ಕೆ ತರುವ ಅಂಶಗಳ ನಿವಾರಣೆಗೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಕತಾರ್ ಸರಕಾರ ತಂತ್ರಜ್ಞಾನದ ಮೊರೆಹೋಗಿದೆ.
ಸುಮಾರು 28 ಲಕ್ಷ ಜನಸಂಖ್ಯೆ ಇರುವ ಆ ದೇಶದಲ್ಲಿ ಈವರೆಗೆ ಕೋವಿಡ್‌ನಿಂದಾಗಿ 23 ಸಾವುಗಳಷ್ಟೇ ಸಂಭವಿಸಿದ್ದು, ಸೋಂಕಿತರ ಪ್ರಮಾಣ ಮಾತ್ರ 40 ಸಾವಿರಕ್ಕೂ ಜಾಸ್ತಿ ಇದೆ.
ಮನೆಗಳಿಂದ ಹೊರಬೀಳುವ ಸಂದರ್ಭದಲ್ಲಿ ನಿವಾಸಿಗಳು ತಮ್ಮ ಮೊಬೈಲ್‌ಗಳಲ್ಲಿ ಈ ಆ್ಯಪ್ ಅಳವಡಿಸಿಕೊಳ್ಳಬೇಕಾದ್ದು ಕಡ್ಡಾಯ. ವ್ಯಕ್ತಿಯು ಸೋಂಕಿತನೊಂದಿಗೆ ಸಂಪರ್ಕ ಹೊಂದಿದಲ್ಲಿ ಗುರುತಿಸಲು ಸರಕಾರಕ್ಕೆ ಸಹಾಯವಾಗುತ್ತದೆ. ಮೊಬೈಲ್‌ನಲ್ಲಿ ಆ್ಯಪ್ ಇಲ್ಲದಿದ್ದರೆ 55 ಸಾವಿರ ಡಾಲರ್ ತನಕ ದಂಡ ಹಾಗೂ 3 ವರ್ಷಗಳ ಸೆರೆವಾಸ ವಿಧಿಸಲೂ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ.
ಈ ಆ್ಯಪ್ ಬಳಕೆದಾರರ ಮೊಬೈಲ್ ಸ್ಟೋರೇಜ್‌ನ ಆ್ಯಕ್ಸೆಸ್ ಕೇಳುತ್ತಿದೆ. ಬಳಕೆದಾರರು ಇರುವ ಜಾಗವನ್ನು ಗುರುತಿಸಲು ಜಿಪಿಎಸ್ ಹಾಗೂ ಬ್ಲೂಟೂತ್ ಸದಾ ಆನ್ ಸ್ಥಿತಿಯಲ್ಲೇ ಇರಬೇಕು. ಹೀಗಾಗಿ, ಇಲ್ಲಿ ಖಾಸಗಿತನದ ಪ್ರಶ್ನೆ ಉದ್ಭವಿಸಿದೆ ಎಂದು ಕೆಲವರು ತಕರಾರು ಎತ್ತಿದ್ದಾರೆ.
ಆದರೆ, ಬಳಕೆದಾರರ ಮಾಹಿತಿ ಸುರಕ್ಷಿತವಾಗಿರುತ್ತದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಅಗತ್ಯ ಸಂದರ್ಭಗಳಲ್ಲಿ ಇದನ್ನು ನೋಡಬಲ್ಲರು. ಸಂಗ್ರಹಿಸಲಾದ ಯಾವುದೇ ಮಾಹಿತಿಯನ್ನು ಎರಡು ತಿಂಗಳಲ್ಲಿ ಕಡತಗಳಿಂದ ನಾಶಪಡಿಸಲಾಗುವುದು ಎಂದು ಕತಾರ್‌ನ ಸಾರ್ವಜನಿಕ ಆರೋಗ್ಯ ವಿಭಾಗದ ನಿರ್ದೇಶಕ ಡಾ| ಮೊಹಮ್ಮದ್ ಬಿನ್ ಹಮೀದ್ ಅಲಿ ತಾನಿ ತಿಳಿಸಿದ್ದಾರೆ.
ಆ್ಯಪ್ ಮೂಲಕ ಸೋಂಕು ಪತ್ತೆ ಅಷ್ಟೇನೂ ಪರಿಣಾಮಕಾರಿ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.