Advertisement

ಕತಾರ್‌ ಬಿಕ್ಕಟ್ಟು, ಭಾರತಕ್ಕಿದೆಯೇ ಆಪತ್ತು?

08:47 AM Jun 11, 2017 | Harsha Rao |

ದಿನನಿತ್ಯದ ಅಗತ್ಯಕ್ಕೆ ಬೇಕಾಗುವ ಹಣ್ಣುಹಂಪಲು, ತರಕಾರಿಗಳು ನೆರೆಯ ಸೌದಿಯಿಂದಲೇ ಬರಬೇಕು. ಈಗಾಗಲೇ ಅಲ್ಲಿ ಅಗತ್ಯ ವಸ್ತುಗಳ ಕೊರತೆ ಉದ್ಭವಿಸಿದೆ. ಪರಿಸ್ಥಿತಿ ಹೀಗಿರುವಾಗ ಘರ್ಷಣೆಗೆ ಕೈ ಹಾಕಿ ಇನ್ನಷ್ಟು ನಷ್ಟ ಮಾಡಿಕೊಳ್ಳಲು ಕತಾರ್‌ ಮುಂದಾಗದು. ಕತಾರ್‌ ಮತ್ತು ನೆರೆಯ ರಾಷ್ಟ್ರಗಳ ಮುನಿಸು ವಿಷಮ ಪರಿಸ್ಥಿತಿಗೆ ಹೋದ ಉದಾಹರಣೆಗಳೂ ಇಲ್ಲ. ಅಲ್ಲದೆ ಬಿಕ್ಕಟ್ಟು ಶಮನಕ್ಕೆ ಮಧ್ಯಸ್ಥಿಕೆ ವಹಿಸಲು ಕುವೈತ್‌ ರಾಷ್ಟ್ರ ಮುಂದಾಗಿದೆ. 

Advertisement

ಕತಾರ್‌ ಮತ್ತು ನೆರೆಯ ಇತರ ಗಲ್ಫ್ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಕರಿಮೋಡ ಭಾರತದ ಮೇಲೂ ಚಾಚಿದೆ. ತೈಲ ಹಾಗೂ ಅನಿಲಕ್ಕಾಗಿ ಭಾರತವು ಗಲ್ಫ್ ರಾಷ್ಟ್ರಗಳನ್ನು ನೆಚ್ಚಿಕೊಂಡಿದ್ದರೂ ನೇರವಾಗಿ ನಮ್ಮ ದೇಶಕ್ಕೆ ಯಾವುದೇ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆಗಳು ಕಾಣುತ್ತಿಲ್ಲ. ಕತಾರ್‌ ಮತ್ತು ಸೌದಿ ನೇತೃತ್ವದ ಇತರ ಗಲ್ಫ್ ರಾಷ್ಟ್ರಗಳ ಬಿಕ್ಕಟ್ಟು ಆಂತರಿಕ ವಿಷಯ ಎಂದು ಭಾರತ ಬಣ್ಣಿಸಿದೆ. ಆದರೆ ಗಲ್ಫ್ ರಾಷ್ಟ್ರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಮೂಲದ ಜನರು ನೆಲೆಸಿದ್ದು, ಅಲ್ಲಿನ ವಿದ್ಯಮಾನಗಳನ್ನು ಗಂಭೀರವಾಗಿ ಗಮನಿಸುತ್ತಿದ್ದಾರೆ. ಒಮಾನ್‌, ಕತಾರ್‌, ಸೌದಿ ಅರೇಬಿಯಾ, ಬಹೆÅàನ್‌, ಸಂಯುಕ್ತ ಅರಬ್‌ ಸಂಸ್ಥಾನ ಮತ್ತು ಕುವೈಟ್‌ ಒಳಗೊಂಡಿರುವ ಗಲ್ಫ್ನಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು ಎರಡೂವರೆ ಮಿಲಿಯಕ್ಕಿಂತ ಜಾಸ್ತಿ ಭಾರತೀಯರು ಇದ್ದಾರೆ. ಕತಾರ್‌ನಲ್ಲಿಯೇ ಸುಮಾರು ಆರೂವರೆ ಲಕ್ಷ ಭಾರತೀಯರಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ಕೇರಳಿಗರು. ಕರ್ನಾಟಕ ಕರಾವಳಿಯ ಜನರೂ ಇಲ್ಲಿ ಸಾಕಷ್ಟು ಇದ್ದಾರೆ. ಒಂದು ಅಂದಾಜಿನ ಪ್ರಕಾರ ಸುಮಾರು 15ರಿಂದ 20 ಸಾವಿರ ಕನ್ನಡಿಗರು (ಹೆಚ್ಚಿನವರು ಕರಾವಳಿಯವರು) ಇಲ್ಲಿ ನೆಲೆಸಿದ್ದಾರೆ. ಸದ್ಯಕ್ಕೆ ದುಬೈ ಬಿಟ್ಟರೆ ಕತಾರ್‌ ರಾಜಧಾನಿ ದೋಹಾವೇ ಗಲ್ಫ್ನಲ್ಲಿ ಕೆಲಸ ಮಾಡಲು ಇಚ್ಛಿಸುವ ಕರಾವಳಿಯ ಯುವಕರ ನೆಚ್ಚಿನ ತಾಣ. ಅಲ್ಲದೆ 2022ರಲ್ಲಿ ಇಲ್ಲಿ ವಿಶ್ವಕಪ್‌ ಫ‌ುಟ್ಬಾಲ್‌ ನಡೆಯಲು ಇರುವುದರಿಂದ ಅಲ್ಲಿನ ಸರಕಾರವು ಮೂಲಭೂತ ಸೌಕರ್ಯದ ಮೇಲೆ ಹೆಚ್ಚಿನ ವಿನಿಯೋಗ ಮಾಡುತ್ತಿದೆ.

ಹೀಗಾಗಿ ಕೆಲಸದ ಅವಕಾಶಗಳು ಅಲ್ಲಿ ಹೆಚ್ಚಿವೆ. ಇದರ ಲಾಭವನ್ನು ಕರ್ನಾಟಕ ಕರಾವಳಿಯ ಯುವಕರು ಪಡೆಯುತ್ತಿದ್ದಾರೆ. ದೋಹಾ ಮತ್ತು ಮಂಗಳೂರು ನಡುವೆ ನೇರ ವಿಮಾನ ಸಂಪರ್ಕವೂ ಇದೆ. ಪ್ರತಿ ಗುರುವಾರ, ಶುಕ್ರವಾರ ಹಾಗೂ ರವಿವಾರಗಳಂದು ದೋಹಾ ಮತ್ತು ಮಂಗಳೂರು ನಡುವೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಹಾರಾಡುತ್ತದೆ. ಹೀಗಾಗಿಯೇ ಕತಾರ್‌ ಬಿಕ್ಕಟ್ಟು ಉಲ್ಬಣಿಸಿದರೆ ಕರಾವಳಿಯ ಜನರ ಮೇಲೂ ಪರಿಣಾಮ ಇದೆ. ಏಕೆಂದರೆ ಕರಾವಳಿಯ ಪ್ರತಿ ಹಳ್ಳಿಯೂ ಕತಾರ್‌ ಸಂಪರ್ಕ ಹೊಂದಿದೆ.

ಅಂದಹಾಗೆ ಕತಾರ್‌ ಮತ್ತು ನೆರೆಯ ಇತರ ಗಲ್ಫ್ ರಾಷ್ಟ್ರಗಳ ಬಿಕ್ಕಟ್ಟು ಹೊಸತೇನಲ್ಲ. ಸುನ್ನಿ ಮುಸ್ಲಿಮರ ನಾಯಕನೆಂದು ಗುರುತಿಸಿಕೊಳ್ಳುತ್ತಿರುವ ಸೌದಿಗೆ ಸೆಡ್ಡು ಹೊಡೆಯುವ ಯತ್ನವನ್ನು ಕತಾರ್‌ ಮೊದಲಿನಿಂದಲೂ ನಡೆಸುತ್ತಾ ಬಂದಿದೆ. ಜತೆಗೆ ಪುಟ್ಟ ದ್ವೀಪ ರಾಷ್ಟ್ರ ಬಹೆÅàನ್‌ ಜತೆಗಿನ ಕತಾರ್‌ ವೈಷಮ್ಯ ತೀರಾ ಹಳೆಯದು. ಬಹೆÅàನ್‌ ಪಾಲಿಗೆ ಸೌದಿ ಅರೇಬಿಯಾ ಹಿರಿಯಣ್ಣನಂತೆ. ಹೀಗಾಗಿಯೇ ಬಹೆÅàನ್‌ಗೆ ಏನಾದರೂ ಬಿಕ್ಕಟ್ಟು ಎದುರಾದರೆ ಮೊದಲಿಗೆ ರಕ್ಷಣೆಗೆ ಬರುವುದು ಸೌದಿ. 

ಮೂರು ವರ್ಷಗಳ ಹಿಂದೆಯೇ ಗಲ್ಫ್ ರಾಷ್ಟ್ರಗಳೊಳಗೆ ಬಿಕ್ಕಟ್ಟು ಎದುರಾಗಿತ್ತು. ಸೌದಿ, ಬಹೆÅàನ್‌ ಮತ್ತು ಸಂಯುಕ್ತ ಅರಬ್‌ ರಾಷ್ಟ್ರಗಳು ಕತಾರ್‌ನಿಂದ ತಮ್ಮ ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಯಿಸಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದವು. ಇದಕ್ಕೆ ಮೂಲ ಕಾರಣ ಕತಾರ್‌ ಮತ್ತು ಬಹೆÅàನ್‌ ನಡುವಿನ ವೈಷಮ್ಯ. ಬಹೆÅàನ್‌ನಲ್ಲಿ ಶಿಯಾ ಮುಸ್ಲಿಮರು ಬಹುಸಂಖ್ಯಾತ‌ರು. ಆದರೆ ಆಡಳಿತ ಮಾತ್ರ ಸುನ್ನಿಗಳ ಕೈಯಲ್ಲಿದೆ. ಆರು ವರ್ಷಗಳ ಹಿಂದೆ ನಡೆದ ಆಂತರಿಕ ಗಲಭೆಯ ಅನಂತರ ಬಹೆÅàನ್‌ನ ಆಳುವ ವರ್ಗ ಅಲ್ಲಿ ಸುನ್ನಿಗಳ ಜನಸಂಖ್ಯೆಯನ್ನು ಏರಿಸಿ ಶಿಯಾ ಮತ್ತು ಸುನ್ನಿಗಳ ಅನುಪಾತವನ್ನು ತಗ್ಗಿಸುವ ಕೆಲಸಕ್ಕೆ ಕೈ ಹಾಕಿತ್ತು. ಹೀಗಾಗಿ ಪಾಕಿಸ್ತಾನ, ಸಿರಿಯಾ, ಈಜಿಪ್ಟ್, ಯೆಮೆನ್‌ ಮುಂತಾದ ರಾಷ್ಟ್ರಗಳ ಸುನ್ನಿಗಳಿಗೆ ದೊಡ್ಡ ಸಂಖ್ಯೆಯಲ್ಲಿ ಬಹೆÅàನ್‌ನ ಪೌರತ್ವ ನೀಡಲಾಗಿತ್ತು. 

Advertisement

ಆದರೆ ಕತಾರ್‌ ಮಾತ್ರ ಬಹೆÅàನ್‌ನ ಸುನ್ನಿಗಳನ್ನೇ ತನ್ನ ತೆಕ್ಕೆಗೆ ಸೆಳೆಯಲು ಯತ್ನಿಸಿತು. ಬಹೆÅàನ್‌ನ ಸುನ್ನಿಗಳಿಗೆ ಕತಾರ್‌ ಪೌರತ್ವ ನೀಡಿತು. ಇದು ನಡೆದದ್ದು 2014ರಲ್ಲಿ. ಬಹೆÅàನ್‌ನ ಸುನ್ನಿ ಜನಸಂಖ್ಯೆಯನ್ನು ಕಡಿಮೆಗೊಳಿಸಿ ಬಹೆÅàನ್‌ನ ರಾಜಮನೆತನವನ್ನು ಇಕ್ಕಟ್ಟಿಗೆ ಸಿಲುಕಿಸುವುದೇ ಕತಾರ್‌ನ ಉದ್ದೇಶವಾಗಿತ್ತು, ಇದನ್ನು ವಿರೋಧಿಸಿ ಇತರ ಮೂರು ಗಲ್ಫ್ ರಾಷ್ಟ್ರಗಳು ತಮ್ಮ ರಾಜತಾಂತ್ರಿಕರನ್ನು ವಾಪಾಸ್‌ ಕರೆಸಿಕೊಂಡಿದ್ದವು. ಆದರೆ ಅನಂತರ ಎಲ್ಲವೂ ಶಮನಗೊಂಡಿತ್ತು. 

ಇಷ್ಟಕ್ಕೂ ಕತಾರ್‌ ಮತ್ತು ಬಹೆÅàನ್‌ ನಡುವಿನ ಸುದೀರ್ಘ‌ ವೈಷಮ್ಯಕ್ಕೆ ಮೂಲ ಕಾರಣ ಎರಡು ರಾಷ್ಟ್ರಗಳ ನಡುವೆ ಇರುವ ಒಂದು ದ್ವೀಪ ಸಮೂಹ. ಒಟ್ಟು ಐದು ದ್ವೀಪಗಳು ಈ ದ್ವೀಪ ಸಮೂಹದಲ್ಲಿದ್ದು, ಇವುಗಳ ಮೇಲೆ 1936ರಿಂದಲೇ ಎರಡೂ ರಾಷ್ಟ್ರಗಳು ಹಕ್ಕು ಸಾಧಿಸಲು ಯತ್ನಿಸಿದ್ದವು. ಕೊನೆಗೆ ಪ್ರಕರಣ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. 2001ರಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯವು ಈ ದ್ವೀಪಗಳನ್ನು ಸಮಾನವಾಗಿ ಹಂಚಿ ಪ್ರಕರಣಕ್ಕೆ ಅಂತ್ಯ ಹಾಡಿತ್ತು. ಆದರೆ ಅವಕಾಶ ಸಿಕ್ಕಾಗಲೆಲ್ಲ ಕತಾರ್‌ ರಾಷ್ಟ್ರವು ಬಹೆÅàನ್‌ ಮೇಲೆ ಹಗೆ ಸಾಧಿಸುತ್ತಲೇ ಇದೆ. 2011ರಲ್ಲಿ ಬಹೆÅàನ್‌ನಲ್ಲಿ ಆಂತರಿಕ ಗಲಭೆ ಸ್ಫೋಟಗೊಂಡಾಗ ಶಿಯಾ ಮುಸ್ಲಿಮರ ನಾಯಕನೆನಿಸಿಕೊಂಡಿರುವ ಇರಾನ್‌ ಜತೆ ಕತಾರ್‌ ಸೇರಿಕೊಂಡಿತ್ತು ಎನ್ನುವ ಆರೋಪವೂ ಈ ರಾಷ್ಟ್ರದ ಮೇಲಿದೆ. 

ಆದರೆ ಹಠಾತ್‌ ಆಗಿ ಕತಾರ್‌ ಮೇಲೆ ನೆರೆಯ ಗಲ್ಫ್ ರಾಷ್ಟ್ರಗಳು ಬೃಹತ್‌ ಪ್ರಮಾಣದ ನಿರ್ಬಂಧ ವಿಧಿಸಲು ಕಾರಣ ಇತ್ತೀಚೆಗೆ ಆ ರಾಷ್ಟ್ರ ಕೆಲ ಉಗ್ರವಾದಿ ಸಂಘಟನೆಗಳಿಗೆ ಆರ್ಥಿಕ ಸಹಾಯ ಒದಗಿಸಿದ್ದು. ಅಲ್‌ ಕೈದಾ, ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌)ನಂತಹ ಉಗ್ರವಾದಿ ಸಂಘಟನೆಗಳಿಗೆ ಕತಾರ್‌ ಆರ್ಥಿಕ ಸಹಾಯ ಒದಗಿಸುತ್ತಿದೆ ಎನ್ನುವುದು ಸೌದಿ ಮತ್ತು ಇತರ ಗಲ್ಫ್ ರಾಷ್ಟ್ರಗಳ ಆರೋಪ. ಮುಖ್ಯವಾಗಿ ಇರಾಕ್‌ ಮತ್ತು ಸಿರಿಯಾದಲ್ಲಿ ಹೋರಾಡುತ್ತಿರುವ ಐಎಸ್‌ ಸಂಘಟನೆಯು ಸುನ್ನಿ ಸಂಘಟನೆಯಾಗಿದ್ದರೂ, ಇದು ಸೌದಿ, ಬಹೆÅàನ್‌ ಮತ್ತು ಕುವೈಟ್‌ನ ರಾಜಮನೆತನದ ವಿರುದ್ಧ ತನ್ನ ಸಿಟ್ಟನ್ನು ವ್ಯಕ್ತಪಡಿಸಿದೆ. ಸೌದಿ ಮತ್ತು ಕುವೈಟ್‌ನಲ್ಲಿ ಬಾಂಬ್‌ ದಾಳಿಯನ್ನೂ ನಡೆಸಿದೆ. ಇಂತಹ ಅಪಾಯಕಾರಿ ಸಂಘಟನೆಗೆ ಕತಾರ್‌ ಆರ್ಥಿಕ ಸಹಾಯ ಒದಗಿಸುತ್ತಿರುವುದು ಉಳಿದ ಗಲ್ಫ್ ರಾಷ್ಟ್ರಗಳಿಗೆ ತಲೆನೋವು ಎನಿಸಿದೆ. ಕಳೆದ ಏಪ್ರಿಲ್‌ ತಿಂಗಳಿನಲ್ಲಿ ಐಎಸ್‌ ಮತ್ತು ಅಲ್‌ ಕೈದಾಕ್ಕೆ ದೊಡ್ಡ ಪ್ರಮಾಣದಲ್ಲಿ ಕತಾರ್‌ ಆರ್ಥಿಕ ನೆರವು ಒದಗಿಸಿತ್ತು ಎನ್ನುವ ಸುದ್ದಿ ನೆರೆಯ ಇತರ ರಾಷ್ಟ್ರಗಳಿಗೆ ತಲುಪಿದ ತತ್‌ಕ್ಷಣವೇ ಇಲ್ಲಿ ರಾಜತಾಂತ್ರಿಕ ಬಿಕ್ಕಟ್ಟಿಗೆ ವೇದಿಕೆ ಸಿದ್ಧವಾಗಿತ್ತು. ಜೂನ್‌ 3ರಂದು ಬಹೆÅàನ್‌ನ ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ಗೆ ಯಾರೋ ಕನ್ನ ಹಾಕಿದ್ದರು. ಇದು ಕತಾರ್‌ನಿಂದ ನಡೆದಿದೆ ಎಂದು ಬಹೆÅàನ್‌ ಆರೋಪಿಸಿತ್ತು. ಇದಾದ ಕೂಡಲೇ ನೆರೆಯ ರಾಷ್ಟ್ರಗಳು ಕತಾರ್‌ ಮೇಲೆ ದಿಗ್ಬಂಧನ ವಿಧಿಸಿವೆ.

ಆದರೆ ಕತಾರ್‌ ಜತೆಗೆ ನೆರೆಯ ರಾಷ್ಟ್ರಗಳು ಇಷ್ಟೊಂದು ಕಠಿಣವಾಗಿ ನಡೆದುಕೊಂಡದ್ದು ಇದೇ ಮೊದಲ ಬಾರಿಗೆ. 1991ರ ಕುವೈಟ್‌ ಯುದ್ಧದ ಅನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲ್ಲಿ ರಾಜತಾಂತ್ರಿಕ ಬಿಕ್ಕಟ್ಟು ಎದುರಾಗಿದೆ. ವಿಮಾನಯಾನ, ರಾಜತಾಂತ್ರಿಕ ಸಂಪರ್ಕ, ಕತಾರ್‌ ಕರೆನ್ಸಿ ಬಳಕೆ, ಸರಕು ವ್ಯಾಪಾರ, ಸೈನ್ಯ – ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸೌದಿ, ಬಹೆÅàನ್‌ ಮತ್ತು ಸಂಯುಕ್ತ ಅರಬ್‌ ಎಮಿರೇಟ್ಸ್‌ ರಾಷ್ಟ್ರಗಳು ಕತಾರ್‌ ಜತೆ ಸಂಬಂಧ ಕಡಿದುಕೊಂಡಿವೆ. ಪ್ರಮುಖ ಅರಬ್‌ ರಾಷ್ಟ್ರ ಈಜಿಪ್ಟ್ ಕೂಡ ಕತಾರ್‌ ಜತೆ ಸಂಬಂಧ ಮುರಿದುಕೊಂಡಿದೆ. ದೂರದ ಫಿಲಿಪೈನ್ಸ್‌ ಕೂಡ ತಾತ್ಕಾಲಿಕವಾಗಿ ಕತಾರ್‌ಗೆ ತನ್ನ  ಪ್ರಜೆಗಳು ಉದ್ಯೋಗದ ಮೇಲೆ ಹೋಗುವುದನ್ನು ನಿರ್ಬಂಧಿಸಿದೆ. ಮಾರಿಶಸ್‌, ಮೊರಕ್ಕೊ ಮುಂತಾದ ರಾಷ್ಟ್ರಗಳು ಸಹ ಕತಾರ್‌ ವಿರೋಧಿ ಪಾಳಯದ ಜತೆ ಕೈ ಸೇರಿಸಿವೆ.

ಇದರ ಅಡ್ಡಪರಿಣಾಮ ಕತಾರ್‌ ಮೇಲೆ ಮಾತ್ರವಲ್ಲ, ನೆರೆಯ ಇತರ ಗಲ್ಫ್ ರಾಷ್ಟ್ರಗಳ ಮೇಲೂ ಇದೆ. ಈಗಾಗಲೇ ತೈಲ ಬೆಲೆ ಕುಸಿತದಿಂದ ಗಲ್ಫ್ ರಾಷ್ಟ್ರಗಳು ತತ್ತರಿಸಿವೆ. ಕತಾರ್‌ ಬಿಕ್ಕಟ್ಟು ಉಲ್ಬಣಿಸಿದ ಅನಂತರ ಸತತ ಮೂರು ದಿನಗಳ ಕಾಲ ತೈಲ ಬೆಲೆ ಕುಸಿದಿದೆ. ನೆರೆಯ ಅರಬ್‌ ರಾಷ್ಟ್ರಗಳಾದ ಸಿರಿಯಾ, ಇರಾಕ್‌ ಮತ್ತು ಯೆಮೆನ್‌ಗಳಲ್ಲಿ ಈಗಲೂ ರಾಜಕೀಯ ಸ್ಥಿರತೆ ಇಲ್ಲ. ಈ ನಡುವೆ ಇನ್ನೊಂದು ಬಿಕ್ಕಟ್ಟನ್ನು ದೀರ್ಘ‌ ಕಾಲ ಸಹಿಸಿಕೊಂಡು ಹೋಗುವ ಶಕ್ತಿ ಗಲ್ಫ್ ರಾಷ್ಟ್ರಗಳಿಗಿಲ್ಲ. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದರೆ ಅಲ್ಲಿ ನೆಲೆಸಿರುವ ಬೃಹತ್‌ ಸಂಖ್ಯೆಯ ಭಾರತೀಯರ ಆದಾಯಕ್ಕೂ ಕುತ್ತು ಬರಲಿದೆ. 

ಜತೆಗೆ 2022ರ ವಿಶ್ವಕಪ್‌ ಫ‌ುಟ್ಬಾಲ್‌ ತಯಾರಿಗಾಗಿ ಅಲ್ಲಿನ ಮೂಲಭೂತ ಸೌಕರ್ಯ ವೃದ್ಧಿಸಲು ಸಾಕಷ್ಟು ಹಣವನ್ನು ಸರಕಾರ ವ್ಯಯಿಸುತ್ತಿದೆ. ಈಗಾಗಲೇ ಈ ಕ್ರೀಡಾಕೂಟ ಸಾಕಷ್ಟು ವಿವಾದಕ್ಕೆ ಈಡಾಗಿದೆ. ವಿಶ್ವಕಪ್‌ನ ಆತಿಥ್ಯ ಪಡೆಯಲು ಸಂಘಟಕರಿಗೆ ಕತಾರ್‌ ಲಂಚ ನೀಡಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ವಿಪರೀತ ಸೆಕೆಯ ಕಾರಣ ವಿಶ್ವಕಪ್‌ ನಡೆಸಲು ಕತಾರ್‌ ಸೂಕ್ತ ಸ್ಥಳವಲ್ಲ ಎನ್ನುವ ಮಾತೂ ಇದೆ. ಈ ಎಲ್ಲ ವಿವಾದಗಳನ್ನು ಕತಾರ್‌ ಹೇಗೋ ನಿಭಾಯಿಸಿಕೊಂಡು ಮುನ್ನಡೆಯಿತು. ಆದರೆ ಸಹೋದರರಂತಿರುವ ನೆರೆಯ ಗಲ್ಫ್ ರಾಷ್ಟ್ರಗಳೇ ಕೈ ಕೊಟ್ಟರೆ ಕತಾರ್‌ ಸಂಕಷ್ಟಕ್ಕೀಡಾಗುವುದು ಖಂಡಿತ. 

ಜತೆಗೆ ಈ ರಾಷ್ಟ್ರದ ಮುಕುಟದಂತಿರುವ ಕತಾರ್‌ ಏರ್‌ವೆàಸ್‌ ಗಲ್ಫ್ನ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದು. ಈ ವಿಮಾನಯಾನ ಸಂಸ್ಥೆ ಸ್ಪರ್ಧಾತ್ಮಕ ದರದಲ್ಲಿ ಅತ್ಯುತ್ತಮ ಸೇವೆ ಒದಗಿಸುವ ಕಾರಣ ಗಲ್ಫ್ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಯಾಣಿಕರನ್ನು ಆಕರ್ಷಿಸುತ್ತಿದೆ. ಕತಾರ್‌ ಏರ್‌ವೆàಸ್‌ ಮೂಲಕ ತನ್ನ ಪ್ರವಾಸೋದ್ಯಮವನ್ನು ಇನ್ನಷ್ಟು ವೃದ್ಧಿಸುವ ಗುರಿಯನ್ನು ಈ ರಾಷ್ಟ್ರ ಹೊಂದಿದೆ. ಭಾರತದ 13 ನಗರಗಳಿಗೆ ಕತಾರ್‌ ಏರ್‌ವೆàಸ್‌ ಸಂಪರ್ಕ ಹೊಂದಿದೆ. ಪ್ರತಿವಾರ ಕತಾರ್‌ ಏರ್‌ವೆàಸ್‌ನ 102 ವಿಮಾನಗಳು ಭಾರತಕ್ಕೆ ಹಾರಾಡುತ್ತವೆ. ನೆರೆಯ ಬಹೆÅàನ್‌, ಒಮಾನ್‌, ದುಬೈ ಮುಂತಾದೆಡೆ ನೆಲೆಸಿರುವ ಭಾರತೀಯರೂ ಕತಾರ್‌ ಏರ್‌ವೆàಸ್‌ನ ಸೇವೆ ಪಡೆಯುತ್ತಿದ್ದಾರೆ.
ಅಲ್ಲದೆ ದಿನನಿತ್ಯದ ಅಗತ್ಯತೆಗೆ ಬೇಕಾಗುವ ಹಣ್ಣುಹಂಪಲು, ತರಕಾರಿಗಳು ನೆರೆಯ ಸೌದಿಯಿಂದಲೇ ಬರಬೇಕು.

ಈಗಾಗಲೇ ಅಲ್ಲಿ ಅಗತ್ಯ ವಸ್ತುಗಳ ಕೊರತೆ ಉದ್ಭವಿಸಿದೆ. ಪರಿಸ್ಥಿತಿ ಹೀಗಿರುವಾಗ ಘರ್ಷಣೆಗೆ ಕೈ ಹಾಕಿ ಇನ್ನಷ್ಟು ನಷ್ಟ ಮಾಡಿಕೊಳ್ಳಲು ಕತಾರ್‌ ಮುಂದಾಗದು. ಕತಾರ್‌ ಮತ್ತು ನೆರೆಯ ರಾಷ್ಟ್ರಗಳ ಮುನಿಸು ವಿಷಮ ಪರಿಸ್ಥಿತಿಗೆ ಹೋದ ಉದಾಹರಣೆಗಳೂ ಇಲ್ಲ. ಅಲ್ಲದೆ ಬಿಕ್ಕಟ್ಟು ಶಮನಕ್ಕೆ ಮಧ್ಯಸ್ಥಿಕೆ ವಹಿಸಲು ಕುವೈತ್‌ ರಾಷ್ಟ್ರ ಮುಂದಾಗಿದೆ. ಸದ್ಯಕ್ಕೆ ಇದು ಗಂಡ ಹೆಂಡಿರ ಜಗಳದಂತೆ ಕಾಣುತ್ತಿದೆ. ಇದು ಉಂಡು ಮಲಗುವ ತನಕ ಮಾತ್ರ. ವಿಚ್ಛೇದನದ ತನಕ ಹೋಗುವ ಸಾಧ್ಯತೆಗಳು ತೀರಾ ಕಡಿಮೆ. ಹೀಗಾಗಿ ಕರಾವಳಿಯ ಜನರು ಕತಾರ್‌ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ.
(ಲೇಖಕರು ಬಹೆÅàನ್‌ನಲ್ಲಿ ಪತ್ರಕರ್ತರಾಗಿ ದುಡಿದವರು)

– ಮೆಲ್ವಿನ್‌ ಕಲತ್ರಪಾದೆ

Advertisement

Udayavani is now on Telegram. Click here to join our channel and stay updated with the latest news.

Next