ಬೆಂಗಳೂರು: ಪೊಲೀಸ್ ಕಾನ್‌ಸ್ಟೆಬಲ್ ಲಿಖೀತ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಿಂಗ್‌ಪಿನ್ ಶಿವಕುಮಾರಯ್ಯ ಅಲಿಯಾಸ್ ಸ್ವಾಮೀಜಿ ಸೇರಿ 9 ಮಂದಿಯನ್ನು ಹೆಚ್ಚಿನ ವಿಚಾರಣೆಗಾಗಿ ಡಿ.4ರವರೆಗೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಕುಮಾರಯ್ಯ, ಈತನ ಸಹಚರ ನವೀನ್ ಹಾಗೂ 7 ಮಂದಿ ಪರೀಕ್ಷಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಶನಿವಾರ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆ ಕಲ್ಲಮಠದ ಶ್ರೀನಂಜುಂಡೇಶ್ವರ ವಿದ್ಯಾಮಂದಿರದಲ್ಲಿ ಶಿವಕುಮಾರಯ್ಯ, ಈತನ ಸಹಚರ ನವೀನ್ ಹಾಗೂ 116 ಮಂದಿ ಪರೀಕ್ಷಾರ್ಥಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲರನ್ನು ಮಂಗಳವಾರ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಬಳಿಕ ಆರೋಪಿ ಶಿವಕುಮಾರಯ್ಯ ಈ ಹಿಂದೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದ. ಇದೀಗ ಕಾನ್‌ಸ್ಟೆಬಲ್ ಪ್ರರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು, ಸೋರಿಕೆ ಬಗ್ಗೆ ಹೆಚ್ಚಿನ ವಿಚಾರಣೆ ಅಗತ್ಯವಿದೆ. ಹಾಗೆಯೇ ಕೆಲ ಪರೀಕ್ಷಾರ್ಥಿಗಳಿಂದ ಸ್ಥಳೀಯ ಏಜೆಂಟರ್‌ಗಳ ಮಾಹಿತಿ ಬೇಕಾಗಿದೆ. ಹೀಗಾಗಿ ಒಟ್ಟು 9 ಮಂದಿಯನ್ನು ವಶಕ್ಕೆ ನೀಡುವಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಆ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾ. ವಿ.ಜಗದೀಶ್ ಅವರು ಶಿವಕುಮಾರಯ್ಯ, ಈತನ ಸಹಚರ ನವೀನ್ ಹಾಗೂ 7 ಮಂದಿ ಪರೀಕ್ಷಾರ್ಥಿಗಳನ್ನು ಡಿ.4ರವರೆಗೆ ಸಿಸಿಬಿ ವಶಕ್ಕೆ ನೀಡಿ ಆದೇಶಿಸಿದರು. ಇನ್ನುಳಿದ 109 ಮಂದಿ ಪರೀಕ್ಷಾರ್ಥಿಗಳನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಸಿಸಿಬಿಯಿಂದ ಪತ್ರ: ಆರೋಪಿ ಶಿವಕುಮಾರಯ್ಯ ಬಳಿ ಪತ್ತೆಯಾದ ಕಾನ್‌ಸ್ಟೆಬಲ್ ಪರೀಕ್ಷಾ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳು ಅಸಲಿಯೋ? ನಕಲಿಯೋ ಎಂಬ ಬಗ್ಗೆ ಖಚಿತ ಪಡಿಸುವಂತೆ ಸಿಸಿಬಿ ಅಧಿಕಾರಿಗಳು ಪೊಲೀಸ್ ನೇಮಕಾತಿ ವಿಭಾಗದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಿದ್ದಾರೆ. ಒಂದು ವೇಳೆ ಅಸಲಿಯಾಗಿದ್ದರೆ ಹೇಗೆ ಸೋರಿಕೆಯಾಗಿದೆ ಎಂಬ ಬಗ್ಗೆಯೂ ಮಾಹಿತಿ ನೀಡುವಂತೆ ಮನವಿ ಮಾಡಲಾಗುವುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ.