ತಿ.ನರಸೀಪುರ: ಸರ್ಕಾರಿ ಸೌಲಭ್ಯ ಸೇರಿದಂತೆ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಮಾಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿರುವ ಕೆಲವು ಆಧಾರ್ ನೋಂದಣಿ ಕೇಂದ್ರಗಳಲ್ಲಿ ನೋಂದಣಿ ಮತ್ತು ತಿದ್ದುಪಡಿಗಾಗಿ ಜನದಟ್ಟಣೆ ಹೆಚ್ಚಾಗುತ್ತಿದ್ದು, ತಾಲೂಕಿನ ಬನ್ನೂರು ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಆಧಾರ್‌ಗಾಗಿ ಜನರು ದಿನಗಟ್ಟಲೆ ಸಾಲುಗಟ್ಟಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆಧಾರ್ ನೋಂದಣಿಗೆ ಪಟ್ಟಣದ ತಾಲೂಕು ಕಚೇರಿ, ಮಹೀಂದ್ರಾ ಕೋಟಕ್ ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ. ಬನ್ನೂರು ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲೂ ಒಂದು ಕೇಂದ್ರವನ್ನು ಆಧಾರ್ ನೋಂದಣಿಗೆ ಆರಂಭಿಸಲಾಗಿದೆ.
ತಾಂತ್ರಿಕ ನೆಪದಲ್ಲಿ ತಿ.ನರಸೀಪುರ ಅಂಚೆ ಕಚೇರಿಯಲ್ಲಿ ಆಧಾರ್ ಸ್ಥಗಿತಗೊಂಡಿದೆ. ಸಿಗ್ನಲ್ ಹಾಗೂ ಸರ್ವರ್ ಸಮಸ್ಯೆ ಆಗಾಗ ಕಾಡುವುದರಿಂದ ತಾಲೂಕು ಕಚೇರಿ ನೋಂದಣಿ ವಿಳಂಬವಾದರೆ, ಮಹಿಂದ್ರಾ ಕೋಟಕ್ ಬ್ಯಾಂಕ್‌ನಲ್ಲಿ ತಾಂತ್ರಿಕ ಸಮಸ್ಯೆ ಎಂಬುದಾಗಿ ನಾಮಫಲಕ ತೂಗಿ ಹಾಕಲಾಗುತ್ತಿದೆ.
ಹಳೇ ಉಪಕರಣ: ತಾಲೂಕು ಕಚೇರಿಯಲ್ಲಿನ ಕಂಪ್ಯೂಟರ್ ಹಾಗೂ ಆಧಾರ್ ಉಪಕರಣಗಳೆಲ್ಲವೂ ಹಳೆಯದಾಗಿದ್ದು, ನೋಂದಣಿ ಕಾರ್ಯವೇಳೆ ಕೈ ಕೊಡುತ್ತದೆ. ಬನ್ನೂರು ಬ್ಯಾಂಕ್‌ನಲ್ಲಿನ ಆಧಾರ್ ಕೇಂದ್ರದಲ್ಲಿ ನೋಂದಣಿ ಸಲೀಸು ಎನ್ನುವ ಅಭಿಪ್ರಾಯ ಕೇಳಿ ಬರುವುದರಿಂದ ಹೋಬಳಿ ಕೇಂದ್ರದಲ್ಲಿರುವ ಒಂದೇ ಒಂದು ಆಧಾರ್ ಕೇಂದ್ರದ ಮೇಲೆ ತಾಲೂಕಿನ ಜನರಲ್ಲದೇ, ನೆರೆ ಹೊರೆಯ ಜನರೂ ಕೂಡ ಮುಗಿಬೀಳುತ್ತಿದ್ದಾರೆ. ಹೀಗಾಗಿ ಹಣಕಾಸಿ ವಹಿವಾಟು ನಡೆಯುವ ಬನ್ನೂರು ಎಸ್‌ಬಿಐ ಬ್ಯಾಂಕ್ ಈಗ ಆಧಾರ್ ನೋಂದಣಿಗೆ ಜನರಿಂದ ತುಂಬಿ ಹೋಗುತ್ತಿದೆ.
ಬೆರಳೆಣಿಕೆ ಕೇಂದ್ರ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲದಕ್ಕೂ ಆಧಾರ್ ಅನ್ನು ಅನಿವಾರ್ಯ ಮಾಡಿದ್ದರಿಂದ ತಾಲೂಕಿನಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿರುವ ಕೇಂದ್ರಗಳ ಮೇಲೆ ಜನರು ಮುಗಿ ಬೀಳುತ್ತಿದ್ದಾರೆ. ಅಲ್ಲದೇ ಬೆಳಗಾಗುತ್ತಿದ್ದಂತೆ ನಿತ್ಯದ ಕೆಲಸವನ್ನು ಬಿಟ್ಟು ಮಹಿಳೆಯರು ಮತ್ತು ಮಕ್ಕಳೆಲ್ಲರೂ ಆಧಾರ್ ಕೇಂದ್ರಗಳ ಮುಂದೆ ಅಲೆಮಾರಿಗಳಂತೆ ಸಾಲುಗಟ್ಟಿ ನಿಂತಿರುತ್ತಾರೆ. ಊಟ ನೀರು ಇಲ್ಲದೆಯೇ ಕುಳಿತಿರುತ್ತಾರೆ.
ಕೇಂದ್ರ ಆರಂಭಿಸಿ: ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಇಷ್ಟೊಂದು ಸಮಸ್ಯೆಗಳಿದ್ದರೂ ತಾಲೂಕು ಆಡಳಿತ ಗಮನ ಹರಿಸುತ್ತಿಲ್ಲ. ಹೆಚ್ಚುವರಿ ಆಧಾರ್ ಕೇಂದ್ರಗಳನ್ನು ತೆರೆಯುವ ಬಗ್ಗೆ ಕನಿಷ್ಠ ಕಾಳಜಿಯನ್ನೂ ತೋರುತ್ತಿಲ್ಲ. ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಮೊದಲು ತಾಲೂಕು ಆಡಳಿತ ಎತ್ತೆಚ್ಚುಕೊಳ್ಳಬೇಕಿದೆ.
ಬನ್ನೂರು ಬ್ಯಾಂಕ್‌ಗೆ ಭದ್ರತೆ ಕಲ್ಪಿಸಿ: ಬನ್ನೂರು ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿನ ಆಧಾರ್ ನೋಂದಣಿ ಕೇಂದ್ರದಲ್ಲಿ ನೋಂದಣಿಗೆ ಜನದಟ್ಟಣೆ ಹೆಚ್ಚುತ್ತಿರುವುದರಿಂದ ನಿತ್ಯವೂ ಹಣಕಾಸಿನ ವಹಿವಾಟು ನಡೆಸುವ ಬ್ಯಾಂಕ್‌ಗೆ ಭದ್ರತೆಯ ಆತಂಕ ಎದುರಾಗಿದೆ.
ಪ್ರತಿದಿನ ಬ್ಯಾಂಕ್‌ಗೆ ಹಣಕಟ್ಟಲು ಹಾಗೂ ಸ್ವೀಕರಿಸಲು ಜನರು ಬರುತ್ತಾರೆ. ವ್ಯವಹಾರ ಸಮಯದಲ್ಲೇ ಆಧಾರ್ ನೊಂದಣಿಗೆ ಜನರು ಸೇರುವುದರಿಂದ ಅಪರಾಧ ಕೃತ್ಯಗಳು ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಪೊಲೀಸ್ ಇಲಾಖೆ ಆಧಾರ್ ನೋಂದಣಿ ವೇಳೆಯಾದರೂ ಎಸ್‌ಬಿಐ ಬ್ಯಾಂಕ್‌ಗೆ ಬಿಗ್ರಿಭದ್ರತೆ ಒದಗಿಸುವಂತೆ ಬ್ಯಾಂಕಿನ ಗ್ರಾಹಕರು ಒತ್ತಾಯಿಸಿದ್ದಾರೆ.