Advertisement
ಅದರಂತೆ ಇನ್ನುಮುಂದೆ ಹೆಚ್ಚು ವಾಹನದಟ್ಟಣೆ ಇರುವ ಯಾವುದೇ ಪ್ರಮುಖ ರಸ್ತೆಯಲ್ಲಿ ಗುಂಡಿಗಳು ಕಂಡರೆ, ತಕ್ಷಣ ಸಂಚಾರ ಪೊಲೀಸರು ಆ ಗುಂಡಿ ಮುಚ್ಚುವ ಕಾರ್ಯದಲ್ಲಿ ಸಕ್ರಿಯರಾಗಲಿದ್ದಾರೆ. ಒಂದೆಡೆ ನಗರದಾದ್ಯಂತ ವಿಪರೀತ ರಸ್ತೆ ಗುಂಡಿಗಳು ಬಾಯೆ¤ರೆದಿವೆ. ಮತ್ತೂಂದೆಡೆ ನಿರಂತರ ಮಳೆ ಸುರಿಯುತ್ತಿದೆ. ಇದರಿಂದ ಗುಂಡಿ ಮುಚ್ಚುವ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂಬ ಆಕ್ರೋಶ ಕೇಳಿಬರುತ್ತಿದೆ.
Related Articles
Advertisement
ಆದರೆ, ಸಾವಿರಾರು ಕಿ.ಮೀ. ರಸ್ತೆಗಳಲ್ಲಿ ಕೆಲವು ಇನ್ನೂ ಗುತ್ತಿಗೆದಾರರ ನಿರ್ವಹಣಾ ಅವಧಿಯಲ್ಲಿವೆ. ಅಂತಹ ರಸ್ತೆಯನ್ನು ದುರಸ್ತಿಗೊಳಿಸುವುದು ಆಯಾ ಗುತ್ತಿಗೆದಾರರ ಕರ್ತವ್ಯ. ಹಾಗಾಗಿ, ಯಾವುದು ನಿರ್ವಹಣಾ ಅವಧಿಯಲ್ಲಿದೆ? ಯಾವುದು ನಿರ್ವಹಣಾ ಅವಧಿಯಲ್ಲಿಲ್ಲ ರಸ್ತೆ? ಎಂಬುದು ಪೊಲೀಸರಿಗೆ ಗೊತ್ತಾಗುವುದಿಲ್ಲ. ಇನ್ನು ನಗರದ ಒಂದು ಮೂಲೆಯಿಂದ ಮತ್ತೂಂದು ಮೂಲೆಗೆ ತೆರಳುವುದಕ್ಕೇ ಸಮಯ ಹಿಡಿಯುತ್ತದೆ.
ಉದಾಹರಣೆಗೆ ಆರ್.ಆರ್. ನಗರದಲ್ಲಿ ಒಂದು ಗುಂಡಿ ಮುಚ್ಚುತ್ತಿದ್ದರೆ, ಮಹದೇವಪುರದಿಂದ ಮತ್ತೂಂದು ಗುಂಡಿ ಮುಚ್ಚಲು ಕರೆ ಬರುತ್ತದೆ. ಆಗ ಅಲ್ಲಿಗೆ ಧಾವಿಸಬೇಕಾಗುತ್ತದೆ. ಹಾಗಾಗಿ, ಈ ರೀತಿಯ ಹಸ್ತಾಂತರಿಸುವುದು ಅಷ್ಟು ಸಮಂಜಸವಲ್ಲ ಎಂದು ಬಿಬಿಎಂಪಿ ಉನ್ನತ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.
ನಗರ ಸಂಚಾರ ಪೊಲೀಸರಿಗೆ ಗುಂಡಿ ಮುಚ್ಚಲು ಒಂದು ಪೈಥಾನ್ ಯಂತ್ರ ಹಸ್ತಾಂತರಕ್ಕೆ ಸೂಚಿಸಲಾಗಿದೆ. ಆದರೆ, ಇನ್ನು ಒಂದು ವಾರದಲ್ಲಿ ರಸ್ತೆಗಳನ್ನು ಸಂಪೂರ್ಣ ಗುಂಡಿಮುಕ್ತಗೊಳಿಸಲಾಗುವುದು. ಇದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮುಂದಿನ 8-10 ದಿನಗಳ ನಂತರವೂ ಗುಂಡಿಗಳಿದ್ದರೆ, ಹಸ್ತಾಂತರದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದರು.
ದಿನಕ್ಕೆ 20 ಕಿ.ಮೀ ಗುಂಡಿ ಮುಚ್ಚುವ ಪೈಥಾನ್: ನಗರದಲ್ಲಿ ಪ್ರಸ್ತುತ ಮೂರು ಪೈಥಾನ್ ಯಂತ್ರಗಳಿವೆ. ಒಂದು ಯಂತ್ರ ದಿನಕ್ಕೆ ಮೂರು ಪಾಳಿಯಲ್ಲಿ ಸುಮಾರು 20 ಕಿ.ಮೀ. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುತ್ತದೆ. ಪೈಥಾನ್ ಮೂಲಕ ಗುಂಡಿ ಮುಚ್ಚುವ ಕಾರ್ಯವನ್ನು ಅಮೆರಿಕದ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಪ್ರತಿ ಕಿ.ಮೀ.ಗೆ ಒಂದು ತಿಂಗಳಿಗೆ 1.41 ಲಕ್ಷ ರೂ. ಪಾವತಿಸಲಾಗುತ್ತಿದ್ದು, ವಾರ್ಷಿಕ 18 ಲಕ್ಷ ರೂ. ನೀಡಲಾಗುತ್ತಿದೆ. ಆದರೆ, ಯಂತ್ರವನ್ನು ಸಂಚಾರ ಪೊಲೀಸರಿಗೆ ಹಸ್ತಾಂತರಿಸಿದರೆ, ಅದು “ರಿಸರ್ವ್’ (ಮೀಸಲು ರೂಪದಲ್ಲಿ) ಆಗಿದ್ದರೂ ಅಥವಾ ಗುಂಡಿ ಮುಚ್ಚುವ ಕೆಲಸವಿಲ್ಲದೆ ಖಾಲಿ ಇದ್ದರೂ ಬಾಡಿಗೆ ಪಾವತಿಸಬೇಕಾಗುತ್ತದೆ.
* ವಿಜಯಕುಮಾರ್ ಚಂದರಗಿ