ಕಾಸರಗೋಡು: ಒಂದೂವರೆ ತಿಂಗಳ ಕಾಯುವಿಕೆಯ ಬಳಿಕ ಹೆಬ್ಬಾವಿನ ಮೊಟ್ಟೆಗಳು ಒಡೆದು 15 ಮರಿಗಳ ಜನನವಾಗಿದೆ.
ಚೌಕಿ ಸಿಪಿಸಿಆರ್‌ಐ ಸಮೀಪ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಅಂಗವಾಗಿ ಕಾಲುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದಂತೆ ಹೆಬ್ಬಾವಿನ ಮೊಟ್ಟೆಗಳು ಪತ್ತೆಯಾಗಿ 24 ಮೊಟ್ಟೆಗಳಿತ್ತು. ಇಲ್ಲಿಂದ ಹೆಬ್ಬಾವನ್ನು ಸ್ಥಳಾಂತರಿಸಿದಲ್ಲಿ ಮೊಟ್ಟೆಗಳು ನಾಶವಾಗಬಹುದೆಂಬ ಕಾರಣದಿಂದ ಕಾಲುವೆ ನಿರ್ಮಾಣ ಕಾಮಗಾರಿಯನ್ನು ನಿಲುಗಡೆಗೊಳಿಸಲಾಯಿತು.
ಅಂದಿನ ಡಿಎಫ್‌ಒ ಆಗಿದ್ದ ಧನೇಶ್ ನೇತೃತ್ವದಲ್ಲಿ ಮೊಟ್ಟೆ ಮರಿಯಾಗುವ ವರೆಗಿನ ಕಾರ್ಯವನ್ನು ನಿರ್ವಹಿಸಿದರು.
ಮೊಟ್ಟೆಗಳು ಒಡೆದು ಮರಿಗಳಾದ್ದಲ್ಲಿ ಮರಿಗಳು ರಸ್ತೆಗೆ ಹೋಗಬಹುದೆಂದು ಮೊಟ್ಟೆಗಳನ್ನು ರಟ್ಟಿನ ಪೆಟ್ಟಿಗೆಯಲ್ಲಿ ಇಡಲಾಗಿತ್ತು. ಈ ಮೊಟ್ಟೆಗಳು ಬಿರಿದು ಮರಿಗಳಾಗಿದ್ದು, ಇದೀಗ ಇವುಗಳನ್ನು ಬೋವಿಕ್ಕಾನದ ಅರಣ್ಯದಲ್ಲಿ ಬಿಡಲಾಗಿದೆ.
ಉಳಿದ ಮೊಟ್ಟೆಗಳು ಇನ್ನೆರಡು ದಿನಗಳಲ್ಲಿ ಬಿರಿಯಬಹುದೆಂದು ಅಂದಾಜಿಸಲಾಗಿದೆ.