ಸಿಯೋಲ್: ಭಾರತದ ಭರವಸೆಯ ಬ್ಯಾಡ್ಮಿಂಟನ್ ತಾರೆ, ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು “ಕೊರಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿ’ಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಆದರೆ ಪುರುಷರ ಸಿಂಗಲ್ಸ್ ವಿಭಾಗದ ಕೊನೆಯ ಭರವಸೆಯಾಗಿದ್ದ ಸಮೀರ್ ವರ್ಮ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು 21-19, 16 -21, 21-10 ಅಂತರದಿಂದ ಜಪಾನಿನ ಮಿನಾತ್ಸು ಮಿತಾನಿ ವಿರುದ್ಧ ಜಯ ಸಾಧಿಸಿದರು. 63 ನಿಮಿಷಗಳ ಕಾಲ ಕಾಲ ಇಬ್ಬರೂ ಆಟರ್ಗಾತಿಯರ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಿತು.
ಮೊದಲ ಗೇಮ್‌ನ ಆರಂಭದಿಂದಲೇ ಸಿಂಧು ಭರ್ಜರಿ ಪ್ರದರ್ಶನ ನೀಡತೊಡಗಿದರು. ಆದರೆ ಜಪಾನ್ ಆಟಗಾರ್ತಿ ಕೂಡ ಅಂಕ ಗಳಿಕೆಯಲ್ಲಿ ಸಿಂಧು ಹಿಂದೆಯೇ ಸಾಗಿ ಬಂದರು. 19-19ರಲ್ಲಿ ಇಬ್ಬರೂ ಸಮಬಲ ಸಾಧಿಸಿದಾಗ ಪಂದ್ಯ ಅತ್ಯಂತ ಕುತೂಹಲದ ಹಂತ ಮುಟ್ಟಿತ್ತು. ಆದರೆ ಅದೃಷ್ಟ ಭಾರತೀಯಳ ಪರ ಇತ್ತು. ಅಂತಿಮವಾಗಿ ಸಿಂಧು 21-19ರಿಂದ ಗೇಮ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಆದರೆ ಎರಡನೇ ಗೇಮ್‌ನಲ್ಲಿ ಜಪಾನ್ ಆಟಗಾರ್ತಿ ತಿರುಗಿ ಬಿದ್ದರು. ಆರಂಭದಲ್ಲೇ 5-1ರ ಮುನ್ನಡೆ ಸಾಧಿಸಿ ತನ್ನ ಇರಾದೆಯನ್ನು ಸ್ಪಷ್ಟಪಡಿಸಿದರು. ಆದರೆ ಸಿಂಧು ಹಿಂಜರಿಯಲಿಲ್ಲ. 11-9ರ ಮುನ್ನಡೆಯೊಂದಿಗೆ ಮೇಲುಗೈ ಸೂಚನೆಯೊಂದನ್ನು ರವಾನಿಸಿದರು. ಆದರೆ ಇಲ್ಲಿಂದ ಮುಂದೆ ಸಿಂಧು ಆಟ ತುಸು ಮಂಕಾಯಿತು. 16ರ ಬಳಿಕ ಸಿಂಧು ಅಂಕ ಗಳಿಕೆಗೂ ಬ್ರೇಕ್ ಬಿತ್ತು. ಅಂತಿಮವಾಗಿ ಮಿತಾನಿ 21-16ರಿಂದ ಗೆದ್ದು ತಿರುಗೇಟು ನೀಡಿದರು.
ನಿರ್ಣಾಯಕ ಗೇಮ್‌ನಲ್ಲಿ ಸಿಂಧು ನೆರವಿಗೆ ಬಂದದ್ದು ಅವರ “ಸುಪೀರಿಯರ್ ಫಿಟ್‌ನೆಸ್’. ಆರಂಭದಿಂದಲೇ ಜಪಾನಿ ಆಟಗಾರ್ತಿಯ ಮೇಲೆ ಜಬರ್ದಸ್ತ್ ಆಕ್ರಮಣಕ್ಕೆ ಮುಂದಾದ ಸಿಂಧು “ಬ್ರೇಕ್’ ವೇಳೆ 11-3ರ ಭಾರೀ ಮುನ್ನಡೆಯಲ್ಲಿದ್ದರು. ಆಗಲೇ ಭಾರತೀಯಳ ಸೆಮಿಫೈನಲ್ ಖಾತ್ರಿಯಾಗಿತ್ತು. ಸಿಂಧು ಪಟಪಟನೆ ಅಂಕಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಲೇ ಹೋಗುವುದನ್ನು ಮಿತಾನಿ ನೋಡುತ್ತಲೇ ನಿಲ್ಲಬೇಕಾಯಿತು. ಸಿಂಧು 21ನೇ ಅಂಕದೊಂದಿಗೆ ಜಯಭೇರಿ ಮೊಳಗಿಸುವಾಗ ಮಿತಾನಿ ಇನ್ನೂ 10ರಲ್ಲೇ ಇದ್ದರು!
ಸೆಮಿಫೈನಲ್‌ನಲ್ಲಿ ಪಿ.ವಿ. ಸಿಂಧು ಚೀನದ ಹಿ ಬಿಂಗ್‌ಜಾವೊ ಅಥವಾ ಕೊರಿಯಾದ ಸುಂಗ್ ಜಿ ಹ್ಯುನ್ ವಿರುದ್ಧ ಸೆಣಸಬೇಕಿದೆ.
ಸಮೀರ್ ವರ್ಮ ಪರಾಭವ
ಪುರುಷರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಭರವಸೆಯ ಆಟಗಾರ ಸಮೀರ್ ವರ್ಮ ಆತಿಥೇಯ ದೇಶದ ವರ್ಲ್ಡ್ ನಂ.1 ಆಟಗಾರ ಸನ್ ವಾನ್ ಹೊ ವಿರುದ್ಧ ಅತ್ಯುತ್ತಮ ಹೋರಾಟ ಸಂಘಟಿಸಿ 20-22, 21-10, 21-13ರಿಂದ ಸೋಲನುಭವಿಸಿದರು. ಮೊದಲ ಗೇಮ್‌ನ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಸಮೀರ್ ಮೇಲುಗೈ ಸಾಧಿಸಿದ್ದರು. ಆದರೆ ಕೊರಿಯಾದ ಅನುಭವಿ ಆಟಗಾರ ಅನಂತರದ ಎರಡೂ ಗೇಮ್ ವಶಪಡಿಸಿಕೊಂಡು ಮೆರೆದರು.