ಹೊಸದಿಲ್ಲಿ: ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಕೂಟದಲ್ಲಿ ಭಾರತೀಯ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಬಿ. ಸಾಯಿಪ್ರಣೀತ್ ಅವರು ತಮ್ಮ ಎದುರಾಳಿಯೆದುರು ಹೋರಾಟದಲ್ಲಿ ಜಯ ಸಾಧಿಸಿ ಮುನ್ನಡೆದಿದ್ದಾರೆ. ಆದರೆ ಪಾರುಪಳ್ಳಿ ಕಶ್ಯಪ್ ಸೋತು ನಿರಾಸೆಗೊಳಿಸಿದ್ದಾರೆ.
ಸಿಂಧು ಅವರು ಇಂಡೋನೇಶ್ಯದ ಗ್ರೆಗೋರಿಯಾ ಮರಿಸ್ಕಾ ತುಂಜುಂಗ್ ಅವರನ್ನು 22-20, 21-18 ಗೇಮ್‌ಗಳ ಕಠಿನ ಹೋರಾಟದಲ್ಲಿ ಸೋಲಿಸಿ ದ್ವಿತೀಯ ಸುತ್ತು ತಲುಪಿದ್ದಾರೆ. ಈ ಹೋರಾಟ 38 ನಿಮಿಷಗಳವರೆಗೆ ಸಾಗಿತ್ತು.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ವನಿತೆ ಎಂಬ ಗೌರವಕ್ಕೆ ಪಾತ್ರರಾಗಿರುವ ಸಿಂಧು ಇತ್ತೀಚೆಗಿನ ವನಿತಾ ರ್‍ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಕುಸಿತ ಕಂಡಿದ್ದರು.
ಪುರುಷರ ವಿಭಾಗದಲ್ಲಿ ಕಶ್ಯಪ್ ಥಾçಲಂಡಿನ ಸಿತ್ತಿಕಾಮ್ ತಮ್ಮಸಿನ್ ಅವರ ಕೈಯಲ್ಲಿ 13- 21, 12-21 ಗೇಮ್‌ಗಳಿಂದ ಸೋತು ಹೊರಬಿದ್ದಿದ್ದಾರೆ. ಈ ಹೋರಾಟ 38 ನಿಮಿಷಗಳವರೆಗೆ ಸಾಗಿತ್ತು. ಆದರೆ ಅಮೋಘ ಆಟದ ಪ್ರದರ್ಶನ ನೀಡಿದ ಬಿ. ಸಾಯಿ ಪ್ರಣೀತ್ ಚೀನದ ಬಲಿಷ್ಠ ಆಟಗಾರ ಲಿನ್ ಡ್ಯಾನ್ ಅವರನ್ನು ಮಣಿಸಿ ದ್ವಿತೀಯ ಸುತ್ತು ತಲುಪಿದ್ದಾರೆ. 21-14, 21-17 ಗೇಮ್‌ಗಳಿಂದ ಜಯಭೇರಿ ಬಾರಿಸಿ ಮುನ್ನಡೆದಿದ್ದಾರೆ.
ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್‌ಸಾಯಿರಾಜ್-ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕಠಿನ ಹೋರಾಟದಲ್ಲಿ ಜಯ ಸಾಧಿಸಿ ಮುನ್ನಡೆದಿದ್ದಾರೆ. ಮೊದಲ ಗೇಮ್ ತೀವ್ರ ಪೈಪೋಟಿಯಿಂದ ಸಾಗಿತ್ತು. ಅಂತಿಮವಾಗಿ ಸಾತ್ಕಿಕ್-ಚಿರಾಗ್ 24-22, 21-11 ಗೇಮ್‌ಗಳಿಂದ ಕೊರಿಯದ ಕಿಮ್ ಜಿ ಜಂಗ್-ಲೀ ಯಂಗ್ ದಯ್ ಅವರನ್ನು ಉರುಳಿಸಿದರು.
ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಎಚ್‌ಎಸ್ ಪ್ರಣಯ್ ಅವರು ಇಂಡೋನೇಶ್ಯದ ಅಂತೋನಿ ಸಿಸಿಸುಕ ಜಿಂಟಿಂಗ್ ಅವರನ್ನು ಎದುರಿಸಲಿದ್ದಾರೆ.