ನವದೆಹಲಿ: ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಭಾರತೀಯ ಕ್ರೀಡಾ ಸಚಿವಾಲಯ “ಪದ್ಮಭೂಷಣ’ ಗೌರವಕ್ಕೆ ನಾಮನಿರ್ದೇಶನ ಮಾಡಿದೆ. ಸಿಂಧು ಕ್ರೀಡಾ ಸಚಿವಾಲಯದಿಂದ ಈ ಬಾರಿ ನಾಮನಿರ್ದೇಶನಗೊಂಡವರಲ್ಲಿ ಎರಡನೆಯವರು. ಇದಕ್ಕೂ ಮುನ್ನ ಭಾರತ ಕ್ರಿಕೆಟ್ ಮಾಜಿ ನಾಯಕ ಎಂ.ಎಸ್.ಧೋನಿ ಹೆಸರನ್ನು ಶಿಫಾರಸು ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಕ್ರೀಡಾ ಸಚಿವಾಲಯ “ಹೌದು, ನಾವು ಈಗಾಗಲೇ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ “ಪದ್ಮಭೂಷಣ’ಕ್ಕೆ ಸಿಂಧು ಹೆಸರನ್ನು ಶಿಫಾರಸು ಮಾಡಿದ್ದೇವೆ’ ಎಂದು ತಿಳಿಸಿದೆ. ಇದಕ್ಕೂ ಮುನ್ನ ಸಿಂಧು 2015ರಲ್ಲಿ “ಪದ್ಮಶ್ರೀ’ ಗೌರವ ಸ್ವೀಕರಿಸಿದ್ದಾರೆ. ಉಳಿದಂತೆ 2013ರಲ್ಲಿ ಅರ್ಜುನ, 2016ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಗೌರವವನ್ನು ಪಡೆದಿದ್ದಾರೆ.
ಸಿಂಧು ಸಾಧನೆ: ಸಿಂಧು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇದು ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಭಾರತದ ಮಹಿಳೆಯೊಬ್ಬರಿಗೆ ಸಿಕ್ಕ ಮೊದಲ ಬೆಳ್ಳಿ ಪದಕವಾಗಿದೆ. ಕಳೆದ ತಿಂಗಳು ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇದೇ ತಿಂಗಳು ನಡೆದ ಕೊರಿಯಾ ಓಪನ್ ಸೂಪರ್ ಸೀರೀಸ್‌ನಲ್ಲಿ ಗೆದಿದ್ದಾರೆ. ಈ ಮೂಲಕ ಕೊರಿಯಾ ಓಪನ್ ಗೆದ್ದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಪ್ರತಿಭೆ ಎಂಬ ಖ್ಯಾತಿ ಪಡೆದಿದ್ದಾರೆ. ಉಳಿದಂತೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಕಂಚು. 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಗೆದ್ದಿದ್ದಾರೆ. 2016ರಲ್ಲಿ ಚೀನಾ ಓಪನ್, ಇಂಡಿಯಾ ಓಪನ್ ಸೂಪರ್ ಸೀರೀಸ್, 3 ಬಾರಿ ಮಕಾವ್ ಓಪನ್ ಗೆದ್ದಿದ್ದಾರೆ.
ಪದ್ಮಭೂಷಣ ಗೌರವಕ್ಕೆ ನನ್ನ ಹೆಸರನ್ನು ಶಿಫಾರಸು ಮಾಡಿರುವುದು ತುಂಬಾ ಸಂತೋಷವಾಗಿದೆ. ಕ್ರೀಡಾ ಸಚಿವಾಲಯ ಮತ್ತು ಸರ್ಕಾರಕ್ಕೆ ಧನ್ಯವಾದ.
– ಸಿಂಧು, ಬ್ಯಾಡ್ಮಿಂಟನ್ ತಾರೆ