ಬ್ಯಾಂಕಾಕ್: ಥಾಮಸ್ ಮತ್ತು ಉಬೆರ್ ಕಪ್ ಫೈನಲ್ ರವಿವಾರದಿಂದ ಆರಂಭವಾಗಲಿದೆ. ಇಲ್ಲಿ ಪದಕ ಗೆಲ್ಲುವ ಪ್ರಯತ್ನದಲ್ಲಿ ಭಾರತದ ಬ್ಯಾಡ್ಮಿಂಟನ್ ತಂಡದ ನೇತೃತ್ವವನ್ನು ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಮತ್ತು ವಿಶ್ವ ಚಾಂಪಿಯನ್‌ಶಿಪ್ ಕಂಚು ವಿಜೇತ ಲಕ್ಷ್ಯ ಸೇನ್ ವಹಿಸಲಿದ್ದಾರೆ.
ಥಾಮಸ್ ಕಪ್‌ನಲ್ಲಿ ಇಷ್ಟರವರೆಗೆ ಭಾರತದ ಯಾವುದೇ ಆಟಗಾರ ಪದಕ ಗೆಲ್ಲಲಿಲ್ಲ. ಮಾತ್ರವಲ್ಲದೇ ಸೆಮಿಫೈನಲ್ ಹಂತಕ್ಕೂ ತೇರ್ಗಡೆಯಾಗಿಲ್ಲ. ಆದರೆ ವನಿತೆಯರು ಈ ಹಿಂದೆ 2014 ಮತ್ತು 2016ರಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು. ಕಳೆದ ವರ್ಷ ಪುರುಷರ ಮತ್ತು ವನಿತೆಯರ ತಂಡಗಳು ಕ್ವಾರ್ಟರ್‌ಫೈನಲ್ ಹಂತದಲ್ಲಿಯೇ ತಮ್ಮ ಸ್ಪರ್ಧೆ ಮುಗಿಸಿದ್ದವು.
ಈ ಬಾರಿ ಭಾರತೀಯ ಪುರುಷರ ತಂಡದಲ್ಲಿ ವಿಶ್ವದ 9ನೇ ರ್‍ಯಾಂಕಿನ ಸೇನ್, 11ನೇ ರ್‍ಯಾಂಕಿನ ಕಿದಂಬಿ ಶ್ರೀಕಾಂತ್, ಎಚ್.ಎಸ್. ಪ್ರಣಯ್ ಸಿಂಗಲ್ಸ್‌ನಲ್ಲಿ ಆಡಲಿದ್ದಾರೆ. ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇದ್ದಾರೆ. ಭಾರತೀಯ ತಂಡಕ್ಕೆ ಈ ಬಾರಿ ಪದಕ ಗೆಲ್ಲುವ ಉತ್ತಮ ಅವಕಾಶವಿದೆ. ಬಣ “ಸಿ’ಯಲ್ಲಿರುವ ಭಾರತವು ಜರ್ಮನಿ ವಿರುದ್ದ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. .
ಥಾಮಸ್ ಕಪ್‌ನಲ್ಲಿ ಇಂಡೋನೇಶ್ಯ ಹಾಲಿ ಚಾಂಪಿಯನ್ ಆಗಿದೆ. ಅದು 14 ಬಾರಿ ಈ ಪ್ರಶಸ್ತಿ ಜಯಿಸಿದೆ.